ಹೆಬ್ರಿ: ಮನಸ್ಸಿದ್ದರೆ ಏನನ್ನೂ ಸಾಧಿಸಬಹುದು ಎಂಬುವುದಕ್ಕೆ ಒಂದು ಉತ್ತಮ ಉದಾಹರಣೆ ಹೆಬ್ರಿ ಬೇಳಂಜೆಯ ಕವೀಶ್ ಶೆಟ್ಟಿ.
ಈಗಿನ ಜನರೇಶನ್ ಇಷ್ಟಪಡುವಂತ ಸುಂದರ ಲವ್ ಸ್ಟೋರಿ ಇಟ್ಟುಕೊಂಡು ಇವರು ಬಾಲಿವುಡ್ ಸಿನಿಮಾ ಅಂಗಳಕ್ಕೆ ಧುಮುಕಿ ಮೂರು ಭಾಷೆಗಳ ಚಿತ್ರದ ನಿರ್ದೇಶನ ಮತ್ತು ನಟನೆಯ ವಿಭಿನ್ನ ಚಿತ್ರ ಶೀಘ್ರ ತೆರೆಕಾಣಲಿವೆ.
ಬೇಳಂಜೆ ಪ್ರೇಮಾ ಸುಧಾಕರ್ ಶೆಟ್ಟಿ ದಂಪತಿ ಪುತ್ರ ಕವೀಶ್ ಅವರು ಕುಚ್ಚಾರು ಹೆರ್ಗ ವಿಟuಲ ಶೆಟ್ಟಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ ಮುಂಬಯಿಗೆ ಹೋಗಿ ಹೊಟೇಲ್‌ನಲ್ಲಿ ಕೆಲಸ ಮಾಡಿ ರಾತ್ರಿ ಶಾಲೆಗೆ ಹೋಗಿ ಪದವಿ ಹಾಗೂ ಎಂಬಿಎ ಮುಗಿಸಿದ್ದಾರೆ. ಚಲನ ಚಿತ್ರದ ಕಡೆ ವಿಶೇಷ ಆಸಕ್ತಿ ಇದ್ದ ಇವರು ವೃತ್ತಿ ಬದುಕಿನ ಜತೆಗೆ ಕನಸಿನ ಕುದುರೆ ಏರಲು ಆಯ್ಕೆ ಮಾಡಿಕೊಂಡಿದ್ದು ಚಿತ್ರರಂಗವನ್ನು. ಹೊಟೇಲ್‌ನಲ್ಲಿ ದುಡಿಯುತ್ತಿದ್ದ ಕವೀಶ್ ಮುಂಬಯಿನಲ್ಲಿ ಸಿನಿಮಾ ನಿರ್ದೇಶನದ ತರಗತಿಗೆ ಸೇರಿ ಅಲ್ಲಿ ಅನುಭವ ಪಡೆದು ಅನಂತರ ಕನ್ನಡದ ಮುಂಗಾರು ಮಳೆ-2 ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿ ಈಗ 4 ಕೋಟಿ ರೂ. ವೆಚ್ಚದಲ್ಲಿ ಕನ್ನಡ, ಮರಾಠಿ ಮತ್ತು ಹಿಂದಿಯಲ್ಲಿ ಸದ್ದಿಲ್ಲದೇ ಸಿನಿಮಾ ಮಾಡಿದ್ದಾರೆ. ವಿಭಿನ್ನ ಕಥೆಗೆ ತಕ್ಕ ರೀತಿಯಲ್ಲಿ ಪಾತ್ರಗಳನ್ನು ಸೃಷ್ಟಿ ಮಾಡಿಕೊಂಡು ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿರುವ ಅವರು, ತಮ್ಮ ಪ್ರೊಡಕ್ಷನ್‌ನಲ್ಲೇ ಸಿನಿಮಾ ನಿರ್ಮಾಣಗೊಂಡಿದ್ದು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುವುದರೊಂದಿಗೆ ನಾಯಕ ನಟನಾಗಿ ಅಭಿನಯಿಸಿದ್ದಾರೆ.
ಕವೀಶ್ ಸಂಪೂರ್ಣವಾಗಿ ತಮ್ಮ ದೇಹವನ್ನು ದಂಡಿಸಿ ಮೂರು ವರ್ಷ ಸಿನಿಮಾಕ್ಕಾಗಿ ಸಮಯ ತೆಗೆದುಕೊಂಡು, ಅಭಿನಯಿಸಿದ ಕನ್ನಡದ ನಟ. ಈ ಸಿನಿಮಾದಲ್ಲಿ ಸ್ಕೂಲ್ ಲೈಫ್ ಸ್ಟೋರಿಯಲ್ಲಿ ಮೊದಲ ಹಂತದ ಚಿತ್ರೀಕರಣಕ್ಕೆ 78 ಕೆ.ಜಿ. ಇದ್ದ ಕವೀಶ್ 53 ಕೆ.ಜಿ.ಗೆ ತೂಕ ಇಳಿಸಿಕೊಂಡು ಮಾಡಿಕೊಂಡು, ಮತ್ತೆ ಕಾಲೇಜಿನ ದೃಶ್ಯದ ಚಿತ್ರೀಕರಣಕ್ಕಾಗಿ ಪುನಃ 68 ಕೆ.ಜಿ.ಗೆ ದೇಹ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ. ಸಿನಿಮಾದ ಕ್ಲೈ ಮ್ಯಾಕ್ಸ್ ಚಿತ್ರೀಕರಣದ ವೇಳೆ 76 ಕೆ.ಜಿ.ಗೆ ತೂಕ ಹೆಚ್ಚಿಸಿಕೊಂಡು, ಕನ್ನಡದ ಅಮಿರ್‌ಖಾನ್ ಎಂಬ ಬಿರುದನ್ನು ಬಾಲಿವುಡ್ ಸಿನಿಮಾ ಅಂಗಳದಲ್ಲಿ ಪಡೆದ ಮೊದಲ ಕನ್ನಡ ಚಿತ್ರರಂಗದ ನಟ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ವಿಭಿನ್ನ ಕಥೆಯನ್ನು ಹೊಂದಿರುವ ಚಿತ್ರ ನವೆಂಬರ್ ತಿಂಗಳಲ್ಲಿ ತೆರೆಕಾಣಲಿದ್ದು ಇನ್ನು ಕೂಡ ಸಿನಿಮಾ ಹೆಸರು ಬಿಟ್ಟುಕೊಡದ ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡುವ ಸಮಯದಲ್ಲೇ ತಿಳಿಯಲಿದೆ ಎಂದು ಕವೀಶ್ ಹೇಳಿದ್ದಾರೆ.