Advertisement

ಅರೆಸೇನಾಪಡೆ ಕಾವಲಲ್ಲಿ ಮುಕ್ತ, ನ್ಯಾಯಸಮ್ಮತ ಚುನಾವಣೆ

12:33 PM Mar 11, 2017 | Team Udayavani |

ಮೈಸೂರು: ನಂಜನಗೂಡು ಕ್ಷೇತ್ರದ ಉಪ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸುವ ದೃಷ್ಟಿಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಿ.ರಂದೀಪ್‌, ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ಜತೆಗೆ ನಂಜನಗೂಡು ತಾಲೂಕಿನ ಪೊಲೀಸ್‌, ಕಂದಾಯ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಅಗತ್ಯ ಸಲಹೆ-ಸೂಚನೆ ನೀಡಿದರು.

ಈ ಚುನಾವಣೆ ಅತ್ಯಂತ ಸೂಕ್ಷ್ಮವಾಗಿರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಕ್ಷೇತ್ರದ 154 ಹಳ್ಳಿಗಳಲ್ಲಿ ಮೂರು ಹಂತದ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ನಂಜನಗೂಡಿಗೆ ಬರುವವರು-ಹೋಗುವವರ ಮೇಲೆ ಕಣ್ಣಿಡಲು 15 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗುತ್ತಿದ್ದು, ಇಲ್ಲಿ ಪೊಲೀಸ್‌, ಕಂದಾಯ ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿ ಎರಡು ಪಾಳಿಗಳಲ್ಲಿ ದಿನದ 24ಗಂಟೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಎಸ್ಪಿ ರವಿ ಚನ್ನಣ್ಣನವರ ಸಭೆಗೆ ವಿವರ ನೀಡಿದರು.

ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ ಕ್ಷೇತ್ರದ ಪ್ರತಿ ಹಳ್ಳಿಗೆ ಒಬ್ಬ ಪೊಲೀಸ್‌ ಪೇದೆ ಮತ್ತು ಒಬ್ಬ ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದ್ದು, ಎಎಸ್‌ಐಗಳು ಇವರ ಮೇಲ್ವಿಚಾರಣೆ ಮಾಡುತ್ತಾರೆ. ನೀತಿಸಂಹಿತೆ ಉಲ್ಲಂಘನೆ ಕುರಿತು ದೂರು ಬಂದ 5 ರಿಂದ 10 ನಿಮಿಷಗಳಲ್ಲಿ ಸ್ಥಳಕ್ಕೆ ತೆರಳುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಇದರ ಜತೆಗೆ ನಂಜನಗೂಡು ಕ್ಷೇತ್ರದಲ್ಲಿನ ಐದು ಪೊಲೀಸ್‌ ಠಾಣೆಗಳಿಗೂ ಅಲ್ಲಿನ ಸಿಬ್ಬಂದಿ ಜತೆಗೆ ಹೆಚ್ಚುವರಿಯಾಗಿ ಒಬ್ಬರು ವೃತ್ತ ನಿರೀಕ್ಷಕರು ಹಾಗೂ ಸಬ್‌ಇನ್ಸ್‌ಪೆಕ್ಟರ್‌ಗಳನ್ನು ನಿಯೋಜಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಹಾಗೂ ನಂಜನಗೂಡಿನ ಚುನಾವಣಾಧಿಕಾರಿ ಕಚೇರಿಗಳಲ್ಲಿ ಕಂಟ್ರೋಲ್‌ ರೂಂ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

Advertisement

ತೆರವುಗೊಳಿಸಿ: ನಂಜನಗೂಡು ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರಿ ಜಾಹಿರಾತು ಫ‌ಲಕಗಳಲ್ಲಿನ ಮುಖ್ಯಮಂತ್ರಿ ಹಾಗೂ ಮಂತ್ರಿಗಳ ಭಾವಚಿತ್ರವನ್ನು ಮುಚ್ಚುವ ಜತೆಗೆ ಅವರ ಭಾವಚಿತ್ರಗಳಿರುವ ಭಿತ್ತಿಚಿತ್ರ ಅಂಟಿಸಲಾಗಿದ್ದರೆ ಅವುಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹದ್ದಿನ ಕಣ್ಣಿಡಿ: ತಾಲೂಕಿನಲ್ಲಿ ಈ ಅವಧಿಯಲ್ಲಿ ಜಾತ್ರೆಗಳು ನಡೆಯುವುದರಿಂದ ಜಾತ್ರೆಯ ಹೆಸರಲ್ಲಿ ಮತದಾರರಿಗೆ ಊಟ ಹಾಕಿಸುವ, ಸೀರೆ ಹಂಚುವ, ಆಭರಣ ಹಂಚುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂಥವುಗಳ ಮೇಲೆ ಹದ್ದಿನಕಣ್ಣಿಟ್ಟು, ಯಾವುದೇ ಮುಲಾಜಿಗೆ ಒಳಗಾಗದೆ ಕೆಲಸ ಮಾಡಿ ಎಂದು ಸೂಚಿಸಿದ ಜಿಲ್ಲಾಧಿಕಾರಿ, ಎಸ್ಪಿ ಮತ್ತು ತಾವು ಕ್ಷೇತ್ರದಲ್ಲಿ ಹಗಲು-ರಾತ್ರಿ ಸುತ್ತಾಡುವುದಾಗಿ ತಿಳಿಸಿದರು.

12ರಂದು ನಂಜನಗೂಡಿಗೆ ಮುಖ್ಯಮಂತ್ರಿಯವರು ಬರಲಿದ್ದು, ಅವರಿಗೂ ನೀತಿಸಂಹಿತೆ ಅನ್ವಯವಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಕಚೇರಿಗೆ ಈಗಾಗಲೇ ವಿವರಣೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಮಾಧ್ಯಮಗಳಲ್ಲಿ ಬರುವ ಚುನಾವಣಾ ಸಂಬಂಧಿ ವರದಿಗಳ ಮೇಲೆ ಕಣ್ಣಿಟ್ಟು, ವರದಿಯಲ್ಲಿ ನೀತಿಸಂಹಿತೆ ಉಲ್ಲಂಘನೆಯಾಗಿದೆಯೇ?

ಅದು ಪೇಯ್ಡ ನ್ಯೂಸಾ ಎಂಬ ಬಗ್ಗೆ ಆಗಾಗ್ಗೆ ವರದಿ ನೀಡುವಂತೆ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್‌.ರಾಜು ಅವರಿಗೆ ನಿರ್ದೇಶನ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕಲಾ ಕೃಷ್ಣಮೂರ್ತಿ, ಮೈಸೂರು ಉಪ ವಿಭಾಗಾಧಿಕಾರಿ ಸಿ.ಎಲ್‌.ಆನಂದ್‌ ಮೊದಲಾದವರು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next