Advertisement

ಶತಮಾನ ಪೂರೈಸಿದೆ ಕಾವಳಕಟ್ಟೆಯಲ್ಲಿರುವ ಜ್ಞಾನ ದೇಗುಲ

09:52 AM Nov 29, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1911 ಶಾಲೆ ಆರಂಭ
ಏಕೋಪಾಧ್ಯಾಯ ಶಾಲೆಯಾಗಿದ್ದು ಅಭಿವೃದ್ಧಿ ಕಂಡ ಶಾಲೆ

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮ ಹಾಗೂ ಹತ್ತಿರದ ಗ್ರಾಮಗಳಾದ ಕಾವಳಪಡೂರು, ಮೂಡುಪಡುಕೋಡಿ ಗ್ರಾಮದ ವಿದ್ಯಾರ್ಥಿಗಳ ವಿದ್ಯಾರ್ಜನೆಗಾಗಿ ಕಾವಳಕಟ್ಟೆಯಲ್ಲಿ 1911ರ ನ. 11ರಂದು ಸ್ಥಾಪನೆಗೊಂಡ ಕಾವಳಮೂಡೂರು ಸರಕಾರಿ ಹಿ.ಪ್ರಾ. ಶಾಲೆ ಇದೀಗ 108 ಸಂವತ್ಸರಗಳನ್ನು ಕಂಡಿದೆ.

ಪ್ರಾರಂಭಿಕ ಹಂತದಲ್ಲಿ 1ರಿಂದ 5ನೇ ತರಗತಿವರೆಗಿನ ಏಕೋಪಾಧ್ಯಾಯ ಶಾಲೆಯಾಗಿದ್ದು, ಕಾಲಘಟ್ಟದಲ್ಲಿ ಮುಂದುವರಿದು 7ನೇ ತರಗತಿವರೆಗೆ ಉನ್ನತೀಕರಣಗೊಂಡಿತು. ಸುತ್ತಮುತ್ತಲಿನ ಜನವಸತಿ ಪ್ರದೇಶಗಳಾದ ಕೈಲಾರ, ಮಧ್ವ, ಬಂಗೇರಕೆರೆ, ಬೇಂಗತ್ತೋಡಿ, ಧೂಮಳಿಕೆ, ಕೆದ್ದಳಿಕೆಯ ಜನರಿಗೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಅನುಕೂಲ ಕಲ್ಪಿಸಿಕೊಟ್ಟಂತಹ ಏಕೈಕ ಶಾಲೆ ಎಂಬ ಹೆಮ್ಮೆ ಈ ಶಾಲೆಯದ್ದಾಗಿದೆ. 2007ರ ಆ. 21ರಲ್ಲಿ ಪ್ರಾಥಮಿಕ ಶಾಲಾ ಪಕ್ಕದಲ್ಲಿ 8ರಿಂದ 10ನೇ ತರಗತಿಯವರೆಗೆ ಕಾವಳಕಟ್ಟೆ ಸರಕಾರಿ ಪ್ರೌಢಶಾಲೆ ಆರಂಭಗೊಂಡಿದೆ.

ಶಾಲೆಗೆ ಉದಾರ ಕೊಡುಗೆ
ಶಾಲೆಗೆ 0.18 ಎಕ್ರೆ ಜಮೀನನ್ನು ಸ್ಥಳೀಯರಾದ ಮರಿಯಮ್ಮ ದಾನವಾಗಿ ನೀಡಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಲಯನ್ಸ್‌ ಕ್ಲಬ್‌, ಇನ್‌ಫೋಸಿಸ್‌ನಂತಹ ಸಂಘ-ಸಂಸ್ಥೆಗಳು ನೋಟ್‌ ಪುಸ್ತಕ, ಶಾಲಾ-ಬ್ಯಾಗ್‌, ಇ-ಲರ್ನಿಂಗ್‌ ಕಿಟ್‌, ಪೀಠೊಪಕರಣ ಮುಂತಾದ ಸವಲತ್ತುಗಳನ್ನು ನೀಡುತ್ತಾ ಬಂದಿವೆ. ಪೆಟ್ರೋನೆಟ್‌ ಎಂ.ಎಚ್‌.ಬಿ.ಲಿ. ಸಂಸ್ಥೆಯವರು ಶಾಲೆಗೆ ಬೋರ್‌ವೆಲ್‌, ಶೌಚಾಲಯ, ಅಕ್ಷರ-ದಾಸೋಹ ಅಡುಗೆ ಕೊಠಡಿ, ಶುದ್ಧ ನೀರಿನ ಘಟಕವನ್ನು ನಿರ್ಮಿಸಿ ಕೊಟ್ಟಿದ್ದಾರೆ.

Advertisement

ಪ್ರಸ್ತುತ 130 ವಿದ್ಯಾರ್ಥಿಗಳಿದ್ದು, 6 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. 1ರಿಂದ 7ನೇ ತರಗತಿಗಳು ನಡೆಯುತ್ತಿವೆ. ಹಳೆ ವಿದ್ಯಾರ್ಥಿ ಸದಾನಂದ ಶೆಟ್ಟಿ ಅವರು ಪ್ರಸ್ತುತ ಎಸ್‌.ಡಿ.ಎಂ.ಸಿ. ಅಧ್ಯಕ್ಷರಾಗಿದ್ದು, ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹಕರಾಗಿದ್ದಾರೆ.

ಹಳೆ ವಿದ್ಯಾರ್ಥಿಗಳು
ಖ್ಯಾತ ನ್ಯಾಯವಾದಿಯಾಗಿದ್ದ ದಿ| ಜಿನರಾಜ ಹೆಗ್ಡೆ ಇಜ್ಜಿದೊಟ್ಟು, ಕಾವಳ ಮಾಗಣೆ ಶ್ರೀ ರಾಜನ್‌ ದೈವ ಕೊಡಮಣಿತ್ತಾಯ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿದ್ದ ದಿ| ಸನತ್‌ ಕುಮಾರ್‌ ರೈ ಬಲ್ಲೋಡಿಗುತ್ತು, ಹಿರಿಯ ರಂಗಕರ್ಮಿ ರಾಜಾ ಕಾರಂತ (ಗಿರಿರಾಜ ವಗ್ಗ), ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಯಕ್ಷಗಾನ ಕಲಾವಿದ ದಿವಾಕರ ದಾಸ್‌ ಕಾವಳಕಟ್ಟೆ ಮತ್ತಿತರರು ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ.

ಸೌಲಭ್ಯ
ಗ್ರಾಮ ಪಂಚಾಯತ್‌, ತಾಲೂಕು ಪಂಚಾಯತ್‌, ಜಿ.ಪಂ., ಹಳೆ ವಿದ್ಯಾರ್ಥಿ ಸಂಘ, ಧವåìಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸರ್ವ ಶಿಕ್ಷಣ ಅಭಿಯಾನ, ಊರಿನ ಶಿಕ್ಷಣಾಭಿಮಾನಿಗಳ ದೇಣಿಗೆಗಳಿಂದ ಶಾಲೆ ಹಲವಾರು ಸೌಲಭ್ಯಗಳನ್ನು ಹೊಂದಿದೆ.

ಶಾಲೆ ಉತ್ತಮ ಅಭಿವೃದ್ಧಿಪಥದತ್ತ ಸಾಗುತ್ತಿದೆ. ಜಿಲ್ಲಾ ಪಂಚಾಯತ್‌ ಸದಸ್ಯ ಬಿ. ಪದ್ಮಶೇಖರ ಜೈನ್‌ ಅವರು ಹಲವಾರು ವರ್ಷಗಳಿಂದ ಮಾರ್ಗದರ್ಶನ, ಶಾಲೆಗೆ ಸಕಲ ಸೌಲಭ್ಯ ಒದಗಿಸುತ್ತಿರುವುದು ಶ್ಲಾಘನೀಯ.
-ಪ್ರೇಮಾ ಕೆ.ಕೆ., ಮುಖ್ಯ ಶಿಕ್ಷಕಿ.

ಕಾವಳಮೂಡೂರು ಸರಕಾರಿ ಪ್ರಾಥಮಿಕ ಶಾಲೆ ಸ್ಥಳೀಯ ಮಕ್ಕಳ ವಿದ್ಯಾರ್ಜನೆಗೆ ಸಹಕಾರಿಯಾಗಿದೆ. ಶಾಲೆಯಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಲಾಗುತ್ತಿದೆ.
-ದಿವಾಕರ ದಾಸ್‌ ಕಾವಳಕಟ್ಟೆ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಯಕ್ಷಗಾನ ಕಲಾವಿದರು. 
(ಹಳೆ ವಿದ್ಯಾರ್ಥಿ)

- ರತ್ನದೇವ್‌ ಪುಂಜಾಲಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next