ಯಲ್ಲಾಪುರ : ತಾಲೂಕಿನ ಪ್ರಸಿದ್ದವಾದ ಧಾರ್ಮಿಕ ಸ್ಥಳ ಶ್ರೀಕ್ಷೇತ್ರ ಕವಡಿಕೆರೆಯ ಕೆರೆ ಏರಿಯಲ್ಲಿ ಭಾರೀ ಪ್ರಮಾಣದ ಬಿರುಕು ಕಾಣಿಸಿಕೊಳ್ಳುವ ಮೂಲಕ ಆತಂಕ ಸೃಷ್ಠಿಸಿದೆ.
ಮಂಗಳವಾರ ಸಂಜೆ ಸಣ್ಣಪ್ರಮಾಣದಲ್ಲಿದ್ದ ಬಿರುಕು ಬುಧವಾರದ ಹೊತ್ತಿಗೆ ಬಿರುಕು ದೊಡ್ಡದಾಗಿ ದಿಬ್ಬವೇ ಕೆರೆಯ ಬದಿಗೆ ಕುಸಿದು ಹೋಗುತ್ತಿದೆ. ಮಧ್ಯಾಹ್ನದಿಂದ ಮಳೆಯೂ ಜೋರಾಗಿದ್ದು ಬಿರುಕಿನಲ್ಲಿ ಮಳೆಯ ನೀರು ಇಂಗಿದಲ್ಲಿ ಕೆರೆ ಏರಿ ಒಡೆಯುವ ಸಾಧ್ಯತೆಯಿದ್ದು ಹಾಗೇನಾದರೂ ಆದಲ್ಲಿ ಪಕ್ಕದಲ್ಲಿದ್ದ ನೂರಾರು ಎಕರೆ ತೋಟ, ಗದ್ದೆ ಮತ್ತು ಮನೆಗಳಿಗೆ ಹಾನಿಯಾಗಲಿದೆ.
ಅತ್ಯಂತ ಹಳೆಕಾಲದ ಏರಿಯಾಗಿದ್ದರೂ ಇದು ಬಿರುಕುಗೊಳ್ಳುವ ಮೂಲಕ ಆತಂಕಕ್ಕೆ ಕಾರಣವಾಗಿದೆ. ಹಾಗಂತ ಕೆರೆಯಲ್ಲಿ ಅಷ್ಟೊಂದು ಪ್ರಮಾಣದಲ್ಲಿಯೂ ಈ ತನಕವೇನೂ ನೀರು ಸಂಗ್ರಹಣೆಯಾಗಿಲ್ಲ. ಏರಿಯ ಮೇಲೆ ರಸ್ತೆಯಿದ್ದು ಕೌಡಮ್ಮಾ ದೇವಸ್ಥಾನಕ್ಕೆ ತೆರಳುವ ಸಾರ್ವಜನಿಕ ರಸ್ತೆಯಾಗಿದ್ದು ಬಿರುಕುಗೊಂಡ ಬಳಿಕ ಸ್ಥಾನಿಕರು ಬುಧವಾರ ಮಧ್ಯಾಹ್ನದ ಹೊತ್ತಿಗೆ ರಸ್ತೆಗೆ ಅಡ್ಡಲಾಗಿ ಬೇಲಿ ನಿರ್ಮಿಸಿ ಸಂಚಾರ ಸ್ಥಗಿತಗೊಳಿಸಿದ್ದಾರೆ.
ಇದು ಭೂಕುಸಿತವೇ, ಅಥವಾ ಇನ್ನೆನೋ ಎಂಬುದನ್ನು ತಿಳಿದವರು ಸ್ಥಳಪರಿಶೀಲಿಸಿಯೇ ಹೇಳಬೇಕಿದೆ. ಸದ್ಯಕ್ಕೆ ಕೆರೆಯ ಈ ದಿಬ್ಬ ಒಡೆದಲ್ಲಿ ನಿಯಂತ್ರಿಸುವ ಶಕ್ತಿ ಯಾವುದಕ್ಕೂ ಇಲ್ಲದ ಕಾರಣ ಹಾಗೇನೂ ಆಗದಿರಲಿ ಎಂದು ಗ್ರಾಮಸ್ಥರು ಕೌಡಮ್ಮಾ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಮಳೆ ಹಾನಿ ಮೂಲಸೌಕರ್ಯ ದುರಸ್ತಿಗೆ 500 ಕೋಟಿ ರೂ. ಬಿಡುಗಡೆ: ಸಿಎಂ ಬೊಮ್ಮಾಯಿ