Advertisement

ಹೈನುಗಾರಿಕೆ ಮೂಲಕ ಸ್ವಾವಲಂಬನೆ ದಾರಿ ತೋರಿಸಿದ ಸಂಸ್ಥೆ

01:02 AM Feb 29, 2020 | Sriram |

ಕಾವಡಿ ಹಾಲು ಉತ್ಪಾದಕರ ಸಹಕಾರಿ ಸಂಘ ಈ ಊರಿನ ನೂರಾರು ಮಂದಿಗೆ ಹೈನುಗಾರಿಕೆಯ ಪಾಠ ಹೇಳಿಕೊಟ್ಟ ಸಂಸ್ಥೆ. ಹೀಗಾಗಿ ಇದೀಗ ಈ ಪರಿಸರದಲ್ಲಿ ಅನೇಕರು ಹೈನುಗಾರಿಕೆಯನ್ನು ಉಪಕಸುಬಾಗಿಸಿಕೊಂಡಿದ್ದಾರೆ.

Advertisement

ಕೋಟ: ಊರಿನ ಜನರು ಹೈನುಗಾರಿಕೆಯನ್ನು ಉಪಕಸುಬಾಗಿ ಸ್ವೀಕರಿಸಿ ಸ್ವಾವಲಂಬಿಗಳಾಗಬೇಕು ಎನ್ನುವ ಉದ್ದೇಶ ದಿಂದ ಹುಟ್ಟಿಕೊಂಡ ಕಾವಡಿ ಹಾಲು ಉತ್ಪಾದಕರ ಸಂಘ ಇದೀಗ ಈ ಭಾಗದಲ್ಲಿ ನೂರಾರು ಹೈನುಗಾರರನ್ನು ಸೃಷ್ಟಿಸಿದೆ.

1981ರಲ್ಲಿ ಸ್ಥಾಪನೆ
ಹಿಂದೆ ಈ ಊರಿನ ಆರೇಳು ಕಿ.ಮೀ. ವ್ಯಾಪ್ತಿಯಲ್ಲಿ ಬನ್ನಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ ಹೊರತುಪಡಿಸಿ ಬೇರೆ ಸಂಘಗಳು ಇರಲಿಲ್ಲ. ಹೀಗಾಗಿ ಇಲ್ಲಿನ ರೈತರಿಗೆ ಹಾಲು ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಈ ಕುರಿತು ಚರ್ಚಿಸಿದ ಊರಿನ ಹಿರಿಯರು ಜನರು ಹೈನುಗಾರಿಕೆಯನ್ನು ಉಪಕಸುಬಾಗಿ ಸ್ವೀಕರಿಸಬೇಕು, ಸ್ವಾವಲಂಬನೆಯ ಜೀವನ ಸಾಗಿಸಬೇಕು ಎನ್ನುವ ಸಂಕಲ್ಪದೊಂದಿಗೆ 1981ರಲ್ಲಿ ಕೆನರಾ ಮಿಲ್ಕ್ ಯೂನಿಯನ್‌ನ ಅಧೀನದಲ್ಲಿ ಸಂಘ ಸ್ಥಾಪಿಸಿದರು.

ಸ್ಥಳೀಯ ಮುಂದಾಳು ಕೆ. ಭುಜಂಗ ಹೆಗ್ಡೆ ಈ ಸಂಸ್ಥೆಯ ಸ್ಥಾಪಕಾಧ್ಯಕ್ಷರು. ಇಲ್ಲಿನ ಕೆ.ಪಿ.ಹೊಳ್ಳರ ಚಿಕ್ಕ ಕಟ್ಟಡದಲ್ಲಿ 50-60 ಸದಸ್ಯರು ಹಾಗೂ 40ಲೀಟರ್‌ ಹಾಲಿನೊಂದಿಗೆ ಸಂಸ್ಥೆ ಆರಂಭಗೊಂಡಿತ್ತು. ಅನಂತರ 1986ರಲ್ಲಿ ಸರಕಾರದಿಂದ 20ಸೆಂಟ್ಸ್‌ ಜಾಗವನ್ನು ಪಡೆದು ಕಟ್ಟಡ ರಚಿಸಲಾಗಿತ್ತು.

ಹೈನುಗಾರಿಕೆಯ ಪಾಠ
ಸಂಘ ಸ್ಥಾಪನೆಯಾಗುವ ಮೊದಲು ಇಲ್ಲಿನ ಬೆರಳೆಣಿಕೆಯ ರೈತರು ಹಾಲು ಹಾಕುತ್ತಿದ್ದರು. ಸಂಘ ಸ್ಥಾಪನೆಯಾದ ಮೇಲೆ ನೂರಾರು ಮಂದಿ ಹೊಸ ಜಾನುವಾರುಗಳನ್ನು ಖರೀದಿಸಿ ಸಂಘಕ್ಕೆ ಹಾಲು ಪೂರೈಸತೊಡಗಿದರು. ಇದರಿಂದಾಗಿ ಕೇವಲ ಗೃಹಬಳಕೆಗಾಗಿ ನಡೆಯುತ್ತಿದ್ದ ದನ ಸಾಕಾಣಿಕೆ ಉಪ ಉದ್ಯಮವಾಗಿ ಬೆಳೆಯಿತು ಹಾಗೂ ಆರ್ಥಿಕ ಅಭಿವೃದ್ಧಿಗೆ ಪೂರಕವಾಯಿತು.

Advertisement

ಪ್ರಸ್ತುತ ಸ್ಥಿತಿಗತಿ
ಪ್ರಸ್ತುತ ಸಂಘದಲ್ಲಿ 268 ಮಂದಿ ಸದಸ್ಯರಿದ್ದು, ಸುಮಾರು 700-800 ಲೀ. ಹಾಲು ಸಂಗ್ರಹಣೆಯಾಗುತ್ತಿದೆ. ಹಾಲಿ ಅಧ್ಯಕ್ಷರಾಗಿ ಕೆ.ಉಲ್ಲಾಸ್‌ ಕುಮಾರ್‌ ಶೆಟ್ಟಿ, ಕಾರ್ಯದರ್ಶಿಯಾಗಿ ಕೆ. ನಾರಾಯಣ ಪೂಜಾರಿ ಕಾರ್ಯನಿರ್ವಹಿಸುತ್ತಿದ್ದು, ಸಂಘದ ಸದಸ್ಯರಾದ ನವೀನ್‌ ಬಾಂಜೆ ಮಿನಿಡೈರಿ ಹೊಂದಿದ್ದಾರೆ ಹಾಗೂ ಮಹಾಬಲ ಪೂಜಾರಿ, ಸಂತೋಷ್‌ ಅತೀ ಹೆಚ್ಚು ಹಾಲು ಪೂರೈಕೆ ಮಾಡುತ್ತಿದ್ದಾರೆ. ಸಂಸ್ಥೆಯು ಆಡಳಿತ ಕಚೇರಿ, ಹಾಲು ಸಂಗ್ರಹಣೆ, ಪಶು ಆಹಾರ ಮಾರಾಟಕ್ಕೆ ಪ್ರತ್ಯೇಕ ಸ್ವಂತ ಕಟ್ಟಡವನ್ನು ಹೊಂದಿದೆ.

ಸಂಘದ ಮೂಲಕ ಜಾನು ವಾರುಗಳಿಗೆ ಕೃತಕ ಗರ್ಭಧಾ ರಣೆ ಸೌಲಭ್ಯ ಹಾಗೂ ಒಕ್ಕೂಟದ ವೈದ್ಯರಿಂದ ಜಾನುವಾರುಗಳ ತಪಾಸಣೆ, ಚಿಕಿತ್ಸೆ, ಸದಸ್ಯರಿಗೆ ಹೈನುಗಾರಿಕೆಯ ಕುರಿತು ನಿರಂತರ ಮಾಹಿತಿ ಶಿಬಿರಗಳು, ಗುಣಮಟ್ಟದ ಹಾಲು ಉತ್ಪಾದನೆ ಬಗ್ಗೆ ಮಾಹಿತಿ ಮತ್ತು ಹೈನುಗಾರಿಕೆಗೆ ಪೂರಕವಾದ ಸಂಪನ್ಮೂಲದ ಕುರಿತು ಮಾಹಿತಿ, ಹೆಚ್ಚು ಹಾಲು ಪೂರೈಸುವವರಿಗೆ ಬಹುಮಾನ, ವಿದ್ಯಾರ್ಥಿವೇತನ ಮುಂತಾದ ಸೌಕರ್ಯಗಳನ್ನು ನೀಡ ಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಹಾಲು ಉತ್ಪಾದನೆ ಪ್ರಮಾಣ ಏರಿಕೆಯಾಗಿದೆ.

ಪ್ರಶಸ್ತಿ ಪುರಸ್ಕಾರ
2011ನೇ ಸಾಲಿನಲ್ಲಿ ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಅತ್ಯುತ್ತಮ ಸಂಘವೆಂಬ ಪ್ರಶಸ್ತಿ ಹಾಗೂ ಕೆ.ಗೋಪಾಲ ಹೊಳ್ಳರಿಗೆ ಒಕ್ಕೂಟ ವ್ಯಾಪ್ತಿಯ ಅತ್ಯುತ್ತಮ ಕಾರ್ಯನಿರ್ವಹಣಾಧಿಕಾರಿ ಪ್ರಶಸ್ತಿ ದೊರೆತಿದೆ.

ಸಂಘವು ಆರಂಭದಿಂದ ಹೈನುಗಾರರ ಬೆಳವಣಿಗೆಗೆ ಮಹತ್ವವನ್ನು ನೀಡುತ್ತ ಬಂದಿದೆ. ಹೀಗಾಗಿ 2018-19ನೇ ಸಾಲಿನಲ್ಲಿ ಶೇ.65ಬೋನಸ್‌, ಶೇ.20ಡಿವಿಡೆಂಡ್‌ ನೀಡಲಾಗಿದೆ ಹಾಗೂ ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
-ಕೆ.ಉಲ್ಲಾಸ್‌ ಶೆಟ್ಟಿ, ಅಧ್ಯಕ್ಷರು

ಅಧ್ಯಕ್ಷರು
ಕೆ. ಭುಜಂಗ ಹೆಗ್ಡೆ, ಕೆ.ಪ್ರಭಾಕರ ಶೆಟ್ಟಿ, ಕೆ. ಶಿವರಾಮ್‌ ಶೆಟ್ಟಿ, ಎಚ್‌.ಅಣ್ಣಯ್ಯ ಹೆಗ್ಡೆ, ವೆಂಕಟರಮಣ ಹೊಳ್ಳ, ಉದಯಚಂದ್ರ ಶೆಟ್ಟಿ, ಮಂಜುನಾಥ ಹೆಬ್ಟಾರ್‌, ಕೆ. ಉಲ್ಲಾಸ್‌ ಕುಮಾರ್‌ ಶೆಟ್ಟಿ (ಹಾಲಿ )
ಕಾಯದರ್ಶಿ:
ಕೆ.ಪದ್ಮಶೇಖರ ಹೊಳ್ಳ, ಕೆ.ಗೋಪಾಲ ಹೊಳ್ಳ, ಕೆ. ನಾರಾಯಣ ಪೂಜಾರಿ (ಹಾಲಿ)

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next