Advertisement

ಹಳ್ಳಿ ಆಟಕೆ ಕವಡೆ ಕಟ್ಟೆ

04:12 PM Aug 12, 2017 | |

ಆಟವೆಂದರೆ, ಟಾಮ್‌ ಆ್ಯಂಡ್‌ ಜೆರ್ರಿ, ಛೋಟಾ ಭೀಮ್‌, ಕ್ಯಾಂಡಿ ಕ್ರಶ್‌ ಅಂತಲೇ ಈಗಿನ ಮಕ್ಕಳು ತಿಳಿದಿದ್ದಾರೆ. ಮಕ್ಕಳಿಗಷ್ಟೇ ಅಲ್ಲ, ಹಿರಿಯರಿಗೂ ಈ ವಿಡಿಯೊ ಗೇಮ್‌ಗಳ ಬಗ್ಗೆ ವಿಪರೀತ ಕ್ರೇಜ್‌. ಇನ್ನು ಚೌಕಾಬಾರ, ಪಗಡೆ, ಹಾವು-ಏಣಿಯಂಥ ಆಟಗಳ ಹೆಸರು ಕೂಡ ಸಿಟಿಯ ಮಕ್ಕಳಿಗೆ ಗೊತ್ತಿಲ್ಲವೇನೋ. ಹೇಳಿಕೊಡಲು ಹೆತ್ತವರಿಗೂ ಟೈಮಿಲ್ಲ ಬಿಡಿ. ಅಂಥ ಅಪರೂಪದ ಆಟಗಳನ್ನು ಕಲಿಸುವ, ಆಡಿಸುವ ಗೇಮ್‌ ಸೆಂಟರ್‌ ಒಂದು ನಮ್ಮ ಬೆಂಗಳೂರಿನಲ್ಲಿದೆ. ಅದೇ “ಕವಡೆ ಕಟ್ಟೆ’!

Advertisement

ಹಳ್ಳಿ ಆಟಗಳ ವಿಸ್ಮಯ ತಾಣ
ಶೇಷಾದ್ರಿಪುರಂನ “ಕವಡೆ’ ಟಾಯ್‌ ಹೈವ್‌ ಸಂಸ್ಥೆ ನಗರವಾಸಿಗಳ ಹಳ್ಳಿಕಟ್ಟೆ. 5 ವರ್ಷದಿಂದ ಮೇಲ್ಪಟ್ಟ ಮಕ್ಕಳು, ಕಾಲೇಜು ಯುವಕ-ಯುವತಿಯರು ಸೇರಿದಂತೆ ಹಿರಿಯ ನಾಗರಿಕರು ತಮ್ಮಿಷ್ಟದ ಆಟಗಳನ್ನು ಆಡಿ ನಲಿಯುವ ತಾಣ. ಹಳೇ ಕಾಲದ ಬೋರ್ಡ್‌ ಆಧಾರಿತ ಗೇಮ್‌ಗಳು, ಲಗೋರಿ, ಚಿನ್ನಿದಾಂಡು, ಬುಗುರಿ ಮೊದಲಾದ ಆಟಗಳು, ಉತ್ತರ ಕರ್ನಾಟಕದ ಜನಪ್ರಿಯ ಹಳ್ಳಿಕಟ್ಟೆ ಆಟ ಸೇರಿದಂತೆ ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಮೊದಲಾದ ರಾಜ್ಯಗಳ ಪುರಾತನ ಆಟಗಳು ಮತ್ತು ಆಫ್ರಿಕಾ, ರೋಮ್‌, ಜಪಾನ್‌, ಕೋರಿಯಾ ಮೊದಲಾದ ದೇಶಗಳ ಸಾಂಪ್ರದಾಯಿಕ ಆಟಗಳನ್ನು ಹೇಳಿಕೊಡಲಾಗುತ್ತದೆ. ಸ್ಪರ್ಧೆ, ಕಾರ್ಯಾಗಾರಗಳ ಮೂಲಕ ಆಟಗಾರರಿಗೆ ಮತ್ತಷ್ಟು ಹುರುಪು ತುಂಬುವ ಕೆಲಸವನ್ನೂ “ಕವಡೆ’ ಮಾಡುತ್ತಿದೆ. ಆಟ ಗೊತ್ತಿಲ್ಲದವರಿಗೆ ಆಟವನ್ನು ಪ್ರೀತಿಯಿಂದ ಹೇಳಿಕೊಡುವ ಶಿಕ್ಷಕರೂ ಇಲ್ಲಿದ್ದಾರೆ.

ಇಂಟರ್‌ನ್ಯಾಶನಲ್‌ ಕಟ್ಟೆ
ಇಲ್ಲಿ ಕೇವಲ ಭಾರತದ ಸಾಂಪ್ರದಾಯಿಕ ಆಟಗಳನ್ನು ಹೇಳಿಕೊಡಲಾಗುವುದಿಲ್ಲ. ಬೇರೆ ಬೇರೆ ದೇಶಗಳ ಆಟಗಳ ಪರಿಚಯವೂ ಇಲ್ಲಿ ಆಗುತ್ತದೆ. ಆಫ್ರಿಕ, ರೋಮ್‌, ಜಪಾನ್‌, ಕೊರಿಯಾ ಮೊದಲಾದ ದೇಶಗಳ ಸಾಂಪ್ರದಾಯಿಕ ಆಟಗಳನ್ನೂ ಇಲ್ಲಿ ಕಲಿಯಬಹುದು. 
ಹಳೆ ಬೇರಿಗೂ, ಹೊಸ ಚಿಗುರಿಗೂ…
ಪಗಡೆಯಾಟ, ಚೌಕಾಬಾರ, ಹಾವು-ಏಣಿ ಆಟ, ಅಳಗುಳಿಮನೆ, ಹುಲಿ- ಕುರಿ ಆಟ, ಆಡು- ಹುಲಿ ಆಟ ಮತ್ತು ಪದಬಂಧ, ಲಗೋರಿ, ಬುಗುರಿ, ಕವಡೆಯಾಟ, ಚನ್ನೆಮಣೆ ಮೊದಲಾದ ಪ್ರಾಚೀನ ಆಟಗಳನ್ನು ಹಳ್ಳಿ ವಾತಾವರಣದಲ್ಲಿಯೇ ಆಡುವ ಮಜವೇ ಬೇರೆ. ಈ ಆಟಗಳನ್ನು ಆಡುವುದರಿಂದ ಮಕ್ಕಳಲ್ಲಿ ಏಕ್ರಾಗತೆ, ಬುದ್ಧಿಮಟ್ಟ ಮತ್ತು ಚುರುಕುತನ, ಮೆದುಳಿನ ಶಕ್ತಿ ಹೆಚ್ಚಾಗುತ್ತದೆ. ಅಲ್ಲದೇ, ವಯಸ್ಕರಿಗೆ ಮನಸ್ಸನ್ನು ವಿಶ್ರಾಂತಿಗೊಳಿಸಲು, ಆರಾಮವಾಗಿ ತಮ್ಮ ನಿವೃತ್ತ ಸಮಯ ಕಳೆಯಲು ಹೇಳಿ ಮಾಡಿಸಿದ ಜಾಗವಿದು.

ಆಟವಷ್ಟೇ ಅಲ್ಲ, ಆಟಿಕೆಗಳೂ ಲಭ್ಯ
ಬಣ್ಣ- ಬಣ್ಣದ ವಿವಿಧ ಮಾದರಿಯ ಮರದ ಆಟಿಕೆಗಳು, ವಿಶೇಷ ವಿನ್ಯಾಸದ ಬಟ್ಟೆಗಳಿಂದ, ಉಲ್ಲಾನ್‌ನಿಂದ, ದಾರ, ಮಣಿಗಳಿಂದ ಬೇಕಾದ ಮಾದರಿಯಲ್ಲಿ ಚಿತ್ತಾರಗಳ ಮೂಲಕ ವಿಶೇಷವಾಗಿ ವಿನ್ಯಾಸಗೊಳಿಸಿದ ಕರಕುಶಲ ಆಟಿಕೆಗಳು ಇಲ್ಲಿ ಲಭ್ಯ. ಉತ್ತರ ಕರ್ನಾಟಕ ಸೇರಿದಂತೆ ಬನಾರಸ್‌, ಕನ್ಯಾಕುಮಾರಿ ಹಾಗೂ ಹೊರರಾಜ್ಯಗಳ ನುರಿತ ಕುಶಲಕರ್ಮಿಗಳಿಂದ ತಮಗೆ ಬೇಕಾದ ಆಟಿಕೆಗಳನ್ನು ವಿಶೇಷವಾಗಿ ಸಿದ್ಧಗೊಳಿಸಲು ಹೇಳಿ ಆನಂತರ ಕೊಂಡುಕೊಳ್ಳಲಾಗುತ್ತದೆ. “ಕವಡೆ”ಯಲ್ಲಿ ತಮಗೆ ಇಷ್ಟವಾದ ಆಟಿಕೆಗಳನ್ನು ಜನರು ಹಣ ಕೊಟ್ಟು ಖರೀದಿಸಬಹುದು.

ಆಡಿಸುವಾತ ಯಾರು?
ಬೆಂಗಳೂರು ಮೂಲದ ಗೃಹಿಣಿ, ಎಂಎಸ್ಸಿ ಪದವೀಧರೆ ಶ್ರೀರಂಜನಿ “ಕವಡೆ ಟಾಯ್‌ ಹೈವ್‌’ ಅನ್ನು 2009ರಲ್ಲಿ ಪ್ರಾರಂಭಿಸಿದರು. “ಕವಡೆ’ಯಲ್ಲಿ ಆಟಗಳ ಕಲಿಕೆಯ ಜೊತೆಗೆ ಸ್ಪರ್ಧೆಗಳು, ಕಾರ್ಯಾಗಾರಗಳೂ ನಡೆಯುತ್ತವೆ. ಇಲ್ಲಿ ಆಟಗಳನ್ನು ಕಲಿಸಲು ನುರಿತ ಸಿಬ್ಬಂದಿ ಇದ್ದಾರೆ. ಇವರು ಪ್ರತಿ ತಿಂಗಳಿಗೊಮ್ಮೆ ಅನಾಥಾಶ್ರಮ, ವೃದ್ಧಾಶ್ರಮ, ಕ್ಯಾನ್ಸರ್‌ ಪೀಡಿತರ ಕೇಂದ್ರಗಳಿಗೆ ಹೋಗಿ ಅವರಿಗೆ ಆಟಗಳನ್ನು ಆಡಿಸುವ ಮೂಲಕ ಮನರಂಜನೆ ನೀಡುತ್ತಾರೆ. ಅಲ್ಲದೇ ಪ್ರತಿದಿನ ಸಂಜೆ 60-70ರ ಆಸುಪಾಸಿನ 20 ಹಿರಿಯ ನಾಗರಿಕರ ತಂಡ ಇಲ್ಲಿಗೆ ಬಂದು ಆಟ ಆಡಿ ಮನಸ್ಸನ್ನು ಅರಳಿಸಿಕೊಳ್ಳುತ್ತಾರೆ. ಯುವಕ- ಯುವತಿಯರ ತಂಡ, ಮಧ್ಯ ವಯಸ್ಕರು, ಗೃಹಿಣಿಯರು ಮಕ್ಕಳೊಂದಿಗೆ ಬಂದು ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ. 

Advertisement

ಯಾವ್ಯಾವ ಆಟ ಇಲ್ಲಿದೆ?
ಪಗಡೆಯಾಟ, ಚೌಕಾಬಾರ, ಹಾವು-ಏಣಿ ಆಟ, ಅಳಗುಳಿಮನೆ, ಹುಲಿ- ಕುರಿ ಆಟ, ಆಡು- ಹುಲಿ ಆಟ ಮತ್ತು ಪದಬಂಧ, ಲಗೋರಿ, ಬುಗುರಿ, ಕವಡೆಯಾಟ, ಚನ್ನೆಮಣೆ.

ಆಟದ ಜೊತೆಗೆ ಪಾಠವೂ…
ಆಟಗಳ ಜೊತೆ ಜೊತೆಗೆ ಕರಕುಶಲ ಕಲೆಯನ್ನೂ ಹೇಳಿ ಕೊಡಲಾಗುತ್ತದೆ. 
ಆಟಗಳಿಗೆ ಸಂಬಂಧಿಸಿದ ಪುಸ್ತಕಗಳು, ಮಕ್ಕಳ ಕಥೆ ಪುಸ್ತಕಗಳ ಪುಟ್ಟ ಸಂಗ್ರಹವೊಂದು ಇಲ್ಲಿದೆ. ಮಕ್ಕಳಿಗೆ ಪ್ರಾಚೀನ ಆಟಗಳನ್ನು ಆಡಿಸುವ ಜೊತೆಗೆ ಜ್ಞಾನ ವಿಕಸನದಂಥ ಪದಬಂಧಗಳು, ಕಲಿಕಾ ಸಹಾಯಕ ಕಾರ್ಯಾಗಾರಗಳನ್ನೂ ಇಲ್ಲಿನ ಸಿಬ್ಬಂದಿ ನಡೆಸುತ್ತಾರೆ.

ಪ್ರವೇಶ ದರ: ಗಂಟೆಗೆ 150 ರು.
ಭಾನುವಾರ, ಸರ್ಕಾರಿ ರಜಾದಿನಗಳು
ಪ್ರತಿದಿನ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30, ಮಧ್ಯಾಹ್ನ 3.30 ರಿಂದ ರಾತ್ರಿ 8.30.
ನಂ.143, ಸಿಕೆಎನ್‌ ಚೆಂಬರ್, 1ನೇ ಮುಖ್ಯ ರಸ್ತೆ, ಶೇಷಾದ್ರಿಪುರಂ.
WWW.Kavade.org

kavadehive@gmail.com

ರಶ್ಮಿ ಟಿ.

Advertisement

Udayavani is now on Telegram. Click here to join our channel and stay updated with the latest news.

Next