Advertisement
ಕಣ್ಣೇ ಕಾಣದ ಅವನು ತನ್ನ ಒಳಗಣ್ಣಿನಿಂದ ಎಲ್ಲವನ್ನೂ ಸೂಕ್ಷ್ಮವಾಗಿ ಗ್ರಹಿಸುವಂಥವನು. ಮಾಡದ ತಪ್ಪಿಗೆ ನೋವು ಅನುಭವಿಸಿ, ಕಣ್ಣೀರಿಡುವ ವೇಳೆ, ಅಲ್ಲಿ ನೆರೆದವರ ಕಣ್ಣಂಚಲ್ಲೂ ನೀರು ತುಂಬಿಕೊಂಡಿರುತ್ತೆ. ಹಾಗೆ, ನೋಡುಗರ ಕಣ್ಣಾಲಿಗಳೂ ಒದ್ದೆಯಾಗಿರುತ್ತವೆ. ಇದು “ಕವಚ’ ಚಿತ್ರದ ಭಾವನಾತ್ಮಕ ಸನ್ನಿವೇಶದ ಒಂದು ತುಣುಕು. ಇಡೀ ಚಿತ್ರದಲ್ಲಿ ಭಾವನೆ ಮತ್ತು ಭಾವುಕತೆಯೇ ಹೈಲೈಟ್. ತಪ್ಪು, ಅರಿವು, ದ್ವೇಷ, ಅನುಮಾನ, ಪ್ರೀತಿ, ಮಮತೆ, ಅನುಕಂಪ, ಕಾಳಜಿ ಇತ್ಯಾದಿ ಚಿತ್ರದ ಜೀವಂತಿಕೆಗೆ ಸಾಕ್ಷಿ. ಒಂದೇ ಮಾತಲ್ಲಿ ಹೇಳುವುದಾದರೆ, “ಕವಚ’ ಮನಸ್ಸನ್ನು ಭಾರವಾಗಿಸುವ ಅಂದವಾದ ಚಿತ್ರ.
Related Articles
ತಾಳ್ಮೆಗೆಡಿಸುವುದಿಲ್ಲ. ಕೆಲವೊಂದು ಕಡೆ ಅನಗತ್ಯ ದೃಶ್ಯಗಳಿಗೆ ಇನ್ನಷ್ಟು ಕತ್ತರಿ ಹಾಕಿದ್ದರೆ, ವೇಗ ಹೆಚ್ಚಾಗುತ್ತಿತ್ತು. ಫೈಟ್ ಒಂದಕ್ಕೆ ಇನ್ನಷ್ಟು ನೈಜತೆ ಕಟ್ಟಿಕೊಡಬಹುದಾಗಿತ್ತು. ಮೊದಲರ್ಧ ಸರಾಗವಾಗಿದೆ. ದ್ವಿತಿಯಾರ್ಧದ ಚುರುಕಿನ ನಿರೂಪಣೆ ಚಿತ್ರದ ಮತ್ತೂಂದು ಪ್ಲಸ್ಸು. ಸಿನಿಮಾ ಇಷ್ಟ ಆಗೋದೇ ಕುತೂಹಲ ಕಾಯ್ದುಕೊಂಡಿರುವುದರಿಂದ, ಇಡೀ ಸಿನಿಮಾದ ತಾಕತ್ತು ಆ ಕುತೂಹಲಕ್ಕಿದೆ. ಆ ಕುತೂಹಲ ಬಗ್ಗೆ ತಿಳಿದುಕೊಳ್ಳುವ ಧಾವಂತವಿದ್ದರೆ, ಅಂಧನ ಅಂದ ಪ್ರಯತ್ನವನ್ನೊಮ್ಮೆ ನೋಡಲು ಯಾವ ಅನುಮತಿಯೂ ಬೇಕಿಲ್ಲ.
Advertisement
ಇದು ಅಂಧನೊಬ್ಬನ ಲೈಫಲ್ಲಿ ಎದುರಾಗುವ ಸಮಸ್ಯೆಗಳ ಚಿತ್ರ. ಆ ಸಮಸ್ಯೆಗಳಿಂದ ಅವನು ಹೇಗೆ ಹೊರಬರುತ್ತಾನೆ ಅನ್ನುವುದೇ ಚಿತ್ರದ ವಿಶೇಷ. ಜಯರಾಮ್ ಒಬ್ಬ ಅಂಧ. ಎಲ್ಲರಿಗೂ ಪ್ರೀತಿಪಾತ್ರವಾದ ವ್ಯಕ್ತಿ. ಕಣ್ಣು ಕಾಣಲ್ಲ ಎಂಬುದು ಬಿಟ್ಟರೆ, ಗೆಳೆತನಕ್ಕೆ, ಪ್ರೀತಿಗೆ, ಸಂಬಂಧಕ್ಕೆ ಕೊರತೆ ಇಲ್ಲದ ವ್ಯಕ್ತಿ. ಅಂಥಾ ಸಂದರ್ಭದಲ್ಲೇ ತಾನು ಸದಾ ಇಷ್ಟಪಡುವ ನಿವೃತ್ತ ನ್ಯಾಯಾಧೀಶರೊಬ್ಬರ ಕೊಲೆ ನಡೆದುಹೋಗುತ್ತೆ. ಆ ಕೊಲೆ ಜಯರಾಮನೇ ಮಾಡಿದ ಎಂಬ ಅನುಮಾನದ ಮೇಲೆ ಪೊಲೀಸರು ಇನ್ನಿಲ್ಲದ ಹಿಂಸೆ ಕೊಡುತ್ತಾರೆ.
ಅದರಿಂದ ಹೊರಬರುವ ಜಯರಾಮ, ಇನ್ನೊಂದು ಕೊಲೆ ಆಗುವುದನ್ನು ತಪ್ಪಿಸಲು ಹೋರಾಡುತ್ತಾರೆ. ಆ ಇನ್ನೊಂದು ಕೊಲೆ ಯಾರದ್ದು, ಆ ಹೋರಾಟದಲ್ಲಿ ಜಯರಾಮ ಗೆಲ್ಲುತ್ತಾನಾ, ಇಲ್ಲವಾ ಅನ್ನುವುದೇ ಕುತೂಹಲದ ಸಾರಾಂಶ. ಶಿವರಾಜಕುಮಾರ್ ಅವರು ಮೊದಲ ಬಾರಿಗೆ ಅಂಧ ಪಾತ್ರ ನಿರ್ವಹಿಸಿ, ಸೈ ಎನಿಸಿಕೊಂಡಿದ್ದಾರೆ. ಇದುವರೆಗೆ ಅವರ ಚಿತ್ರಗಳಲ್ಲಿನ ಆ್ಯಕ್ಷನ್, ಡ್ಯಾನ್ಸ್ ಗೆ ಚಪ್ಪಾಳೆ, ಶಿಳ್ಳೆ ಗಿಟ್ಟಿಸಿಕೊಳ್ಳುತ್ತಿದ್ದ ಅವರು, ಅಂಧನಾಗಿ ಇಲ್ಲೂ ಅದೇ ಚಪ್ಪಾಳೆ, ಶಿಳ್ಳೆಗೆ ಪಾತ್ರವಾಗಿದ್ದಾರೆ.
ತೆರೆ ಮೇಲೆ ನೋಡುವ ಅವರನ್ನು ಪ್ರತಿಯೊಬ್ಬರೂ ಇಷ್ಟ ಪಡದೇ ಇರಲಾರರು. ಅಷ್ಟರ ಮಟ್ಟಿಗೆ ಬಾಡಿಲಾಂಗ್ವೇಜ್ ಇರಬಹುದು, ಮಾತುಕತೆ ಇರಬಹುದು ಎಲ್ಲವೂ ನೈಜವೇನೋ ಎಂಬಂತೆ ಪಾತ್ರದಲ್ಲಿ ಜೀವಿಸಿದ್ದಾರೆ. ಬೇಬಿ ಮೀನಾಕ್ಷಿ ಕೂಡ ಗಮನಸೆಳೆಯುತ್ತಾಳೆ, ವಸಿಷ್ಠ ಸಿಂಹಎಂದಿನಂತೆ ಇಲ್ಲೂ ಭಯಹುಟ್ಟಿಸುತ್ತಾರೆ. ಉಳಿದಂತೆ ಇಶಾ ಕೊಪ್ಪಿಕರ್, ಕೃತಿಕಾ, ಆಶಿಶ್ ವಿದ್ಯಾರ್ಥಿ, ರಾಜೇಶ್ ನಟರಂಗ, ತಬಲಾನಾಣಿ ಸೇರಿದಂತೆ ಇತರರು ಗಮನಸೆಳೆಯುತ್ತಾರೆ. ಅರ್ಜುನ್ ಜನ್ಯ ಸಂಗೀತದಲ್ಲಿ “ರೆಕ್ಕೆಯ ಕುದುರೆ ಏರಿ ಬೆಳ್ಳಿ ಬೆಳ್ಳಿ ಮೋಡವ ದಾಟಿ ಬರುವ ನಿನ್ನ ಅಪ್ಪಯ್ಯ…’ ಹಾಡು ಮತ್ತೆ ಮತ್ತೆ ಗುನುಗುವಂತಿದೆ. ರೋನ್ ಏತನ್ ಯೋಹನ್ ಅವರ ಹಿನ್ನೆಲೆ ಸಂಗೀತ ಕೆಲವು ಕಡೆ ಮಾತುಗಳನ್ನೇ ನುಂಗಿದೆ. ಎಂ.ಎಸ್. ರಮೇಶ್ ಅವರ ಮಾತುಗಳು ಅಲ್ಲಲ್ಲಿ
ಮನಕಲಕುವಂತಿವೆ. ರಾಹುಲ್ ಶ್ರೀವಾತ್ಸವ್ ಛಾಯಾಗ್ರಹಣ ಕವಚವನ್ನು “ಅಂದ’ವಾಗಿಸಿದೆ.
*ಚಿತ್ರ: ಕವಚ
*ನಿರ್ಮಾಣ :ಎಂ.ವಿ.ವಿ.ಸತ್ಯನಾರಾಯಣ್
* ನಿರ್ದೇಶನ :ಜಿ.ವಿ.ಆರ್.ವಾಸು
*ತಾರಾಗಣ : ಶಿವರಾಜಕುಮಾರ್, ವಸಿಷ್ಠಸಿಂಹ, ಇಶಾ ಕೊಪ್ಪಿಕರ್, ಆಶಿಶ್ ವಿದ್ಯಾರ್ಥಿ, ರಾಜೇಶ್ ನಟರಂಗ, ಬೇಬಿ ಮೀನಾಕ್ಷಿ, ಜಯಪ್ರಕಾಶ್ ಇತರರು. *ವಿಜಯ್ ಭರಮಸಾಗರ