Advertisement

ಭಾವ ಜೀವದ ಅಂದ ಕವಚ

12:26 PM Apr 06, 2019 | Team Udayavani |

ಶಿವರಾಜ್‌ಕುಮಾರ್‌ ಅಂದರೆ ಹಾಗೇನೆ. ಅಲ್ಲೆಲ್ಲೋ “ಕಬೀರ’ ಆಗ್ತಾರೆ. ಇನ್ನೆಲ್ಲೋ “ಟಗರು’ ಆಗಿ ಡಿಚ್ಚಿ ಹೊಡೆಯುತ್ತಾರೆ. ಮತ್ತೆಲ್ಲೋ “ವಿಲನ್‌’ ಆಗಿ ಆರ್ಭಟಿಸುತ್ತಾರೆ. ಮಗದೊಮ್ಮೆ “ರುಸ್ತುಂ’ ಎನಿಸಿಕೊಳ್ಳುತ್ತಾರೆ. ಒಮ್ಮೊಮ್ಮೆ ಅಂಧರಾಗಿಯೂ ಭಾವುಕತೆ ಹೆಚ್ಚಿಸುತ್ತಾರೆ. ಮಾಸ್‌ ಮತ್ತು ಕ್ಲಾಸ್‌ಗೂ ಸೈ ಎನ್ನುವ ಅವರು ಕಮರ್ಷಿಯಲ್‌ ಜೊತೆಗೆ ಪ್ರಯೋಗಾತ್ಮಕ ಚಿತ್ರಗಳಲ್ಲೂ ಸೈ ಎನಿಸಿಕೊಂಡಿದ್ದಾರೆ. ಈಗ ಇಂದು ತೆರೆ ಕಂಡಿರುವ “ಕವಚ’ ಚಿತ್ರದ ಮೇಲೆ ಸಂಪೂರ್ಣ ಭರವಸೆ ಇಟ್ಟಿದ್ದಾರೆ. ಮೊದಲ ಸಲ ಅಂಧ ಪಾತ್ರ ಮಾಡಿರುವ ಅವರು ಆಪ್ತವಾಗಿ ಮಾತನಾಡಿದ್ದಾರೆ.

Advertisement

‘ಕವಚ’ದ ವಿಶೇಷ ಅನುಭವ ?
ಇಲ್ಲಿ ಮೊದಲ ಬಾರಿಗೆ ನಾನು ಅಂಧ ಪಾತ್ರ ಮಾಡಿರುವುದೇ ವಿಶೇಷ. ಅದರಲ್ಲೂ ಆ ಪಾತ್ರ ಮೂಲಕ ಭಾವನೆಗಳ ಜೊತೆ ಆಟವಾಡಿದ್ದೇನೆ. ಭಾವುಕತೆಯನ್ನೂ ಹೆಚ್ಚಿಸುತ್ತೇನೆ. ಅಂಧನಾಗಿ ಎಮೋಷನ್ಸ್‌ ತೋರಿಸಿರುವುದು ಇನ್ನೊಂದು ಹೊಸ ಅನುಭವ.

ಅಂಧ ಪಾತ್ರದ ಸವಾಲು ಹೇಗಿತ್ತು?
ನಿಜ ಹೇಳುವುದಾದರೆ ಆ ಪಾತ್ರ ತುಂಬಾನೇ ಕಷ್ಟವಾಗಿತ್ತು. ಈಗಾಗಲೇ ಒರಿಜಿನಲ್‌ ಚಿತ್ರದಲ್ಲಿ ಆ ಪಾತ್ರವನ್ನು ಮೋಹನ್‌ಲಾಲ್‌ ಯಶಸ್ವಿಯಾಗಿ ಮಾಡಿದ್ದಾರೆ. ಅವರು ಮಾಡಿದರಲ್ಲಿ ನಾನು ಶೇ.40 ರಷ್ಟು ಮಾಡಿದರೆ ಸಾಕು ಗೆದ್ದಂಗೆ ಅಂತ ಎಷ್ಟೋ ಸಲ ಹೇಳಿದ್ದೇನೆ. ಮೋಹನ್‌ಲಾಲ್‌ ಒಬ್ಬ ವಂಡರ್‌ಫ‌ುಲ್‌ ಆ್ಯಕ್ಟರ್‌, ಕಮಲ್‌ಹಾಸನ್‌ ಕೂಡ ಅಂಧನ ಪಾತ್ರದಲ್ಲಿ ಮಿಂಚಿದ್ದರು. ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಸಹ ಆ ಪಾತ್ರ ಮಾಡಿದ್ದಾರೆ. ಅಂಧ ಪಾತ್ರ ಮಾಡುವುದು ಸುಲಭವಲ್ಲ. ಮಾಡಿದರೂ, ಆ ಮೂಲಕ ಎಮೋಷನ್ಸ್‌ ತೋರಿಸುವುದು ಕಷ್ಟವೇ. ನನಗಂತೂ ಆ ಪಾತ್ರ ತುಂಬಾ ಚಾಲೆಂಜಿಂಗ್‌ ಆಗಿತ್ತು. ಸಾಮಾನ್ಯವಾಗಿ ಇಂತಹ ಪಾತ್ರ ಮಾಡುವಾಗ ಕೆಲವರು ಗ್ಲಾಸ್‌ ಹಾಕ್ಕೊಂಡ್‌ ಮಾಡ್ತಾರೆ. ಆದರೆ, ಗ್ಲಾಸ್‌ ಇಲ್ಲದೆ ಮಾಡೋದು ಇದೆಯಲ್ಲಾ ಅದೇ ದೊಡ್ಡ ಚಾಲೆಂಜ್‌. ಅಂಧ ಪಾತ್ರ ಮಾಡುವಾಗ ಕಣ್ಣು ಗುಡ್ಡೆ ಅತ್ತಿತ್ತ ತಿರುಗಿಸಲು ಆಗಲ್ಲ. ಒಂದೇ ಕಡೆ ಫಿಕ್ಸ್‌ ಮಾಡಿಕೊಂಡೇ ಪಾತ್ರ ನಿರ್ವಹಿಸಬೇಕು. ಅದರಲ್ಲೂ ಇಲ್ಲಿ ಆ್ಯಕ್ಷನ್‌ ಕೂಡ ಮಾಡಬೇಕು. ಸ್ವಲ್ಪ ಕಷ್ಟ ಎನಿಸಿದರೂ, ಎಂಜಾಯ್‌ ಮಾಡಿಕೊಂಡೇ ಚಿತ್ರ ಮಾಡಿದ್ದೇನೆ.

ಆ ಪಾತ್ರದಿಂದ ತಲೆನೋವು ಬರುತ್ತಿತ್ತಂತೆ?
ನಿಜ, ಯಾಕೆಂದರೆ ಒಂದೇ ಕಡೆ ಕಣ್ಣು ಗುಡ್ಡೆ ಮೇಲೆ ಮಾಡಿಕೊಂಡು ನಟಿಸಬೇಕಿತ್ತು. ತುಂಬಾ ಸಮಯ ಹಾಗೆ ಇದ್ದರೆ ಕಣ್ಣು ನೋವು ಬರುತ್ತಿತ್ತು. ಹಾಗಂತ ಒಂದೊಂದೇ ಶಾಟ್‌ಗೆ ರೆಸ್ಟ್‌ ಮಾಡೋಕು ಆಗುತ್ತಿರಲಿಲ್ಲ. ಒಂದೊಂದು ಸಲ ರಾತ್ರಿ ತಲೆನೋವು ಬರುತ್ತಿತ್ತು. ತಲೆನೋವು ಬಂದರೂ, ಈಗ ಆ ಪಾತ್ರ ನೋಡಿದರೆ ಎಲ್ಲಾ ನೋವು ಮರೆತು ಹೋಗುತ್ತೆ. ಪಾತ್ರ ಅಂದಾಗ, ಮಾಡಲೇಬೇಕು. ಅದರಲ್ಲೂ ನೈಜವಾಗಿರಬೇಕು. ಆ ಕಾರಣಕ್ಕೆ ಕಷ್ಟವಾದರೂ, ನೋವು ಬಂದರೂ ಪಾತ್ರದೊಳಗೆ ಇಳಿದು ಆ ಸನ್ನಿವೇಶ ಮುಗಿಸುತ್ತಿದ್ದೆ. ಅದೊಂದು ಗ್ರೇಟ್‌ ಎಕ್ಸ್‌ಪೀರಿಯನ್ಸ್‌. ಆ ಪಾತ್ರ ಎಷ್ಟರಮಟ್ಟಿಗೆ ಕಾಡಿತ್ತು ಅಂದರೆ, ಶೂಟಿಂಗ್‌ ಶೆಡ್ನೂಲ್‌ ಮುಗಿದು 25 ದಿನ ಕಳೆದರೂ, ಆ ಪಾತ್ರದ ಗುಂಗಲ್ಲೇ ಇರುತ್ತಿದ್ದೆ.

ಪಾತ್ರದ ತಯಾರಿ ಹೇಗಿತ್ತು?
ಅಂಧ ಶಾಲೆಯ ಶಿಕ್ಷಕರೊಬ್ಬರು ನನಗೆ ಎರಡು ದಿನಗಳ ಕಾಲ ತರಬೇತಿ ಕೊಟ್ಟಿದ್ದರು. ಅಂಧರು ಹೇಗೆಲ್ಲಾ ಇರುತ್ತಾರೆ. ಅವರ ನಡೆ, ನುಡಿ, ಹಾವ-ಭಾವ ಹೇಗಿರುತ್ತೆ ಎಂಬ ಬಗ್ಗೆ ಕೆಲ ಸಲಹೆ ಕೊಟ್ಟರು. ಆ ಪಾತ್ರ ಅಂದಾಗ, ನಮ್ಮ ಬಾಡಿಲಾಂಗ್ವೇಜ್‌ ಕೂಡ ವಿಭಿನ್ನವಾಗಿ ಬಳಕೆ ಮಾಡಬೇಕು. ಇಲ್ಲವಾದರೆ, ಅದು ಅಭಾಸ ಆಗುತ್ತೆ. ಆ ರೀತಿಯ ನಟನೆ ಮಾಡುವಾಗ ನಟನೆ ಎಂಬುದು ಸರಾಗವಾಗಿಯೇ ಬರಬೇಕು. ಜನರು ನೋಡುವಾಗ, ಅದು ವಿಷ್ಯುಯಲಿ ಇಷ್ಟವಾಗಿ ಎಂಜಾಯ್‌ ಮಾಡಬೇಕು. ಇಲ್ಲವೆಂದರೆ ಅದು ಕೃತಕ ಎನಿಸಿಬಿಡುತ್ತೆ.

Advertisement

ಭಾವ ಜೀವದ ಅಂದ ಕವಚ
ಮುಖ್ಯವಾಗಿ ಅಂಧರು ವಾಸನೆ ಮತ್ತು ಶಬ್ಧದ ಗ್ರಹಿಕೆಯಲ್ಲಿ ಮುಂದಿರುತ್ತಾರೆ.. ಆ ಎರಡನ್ನು ಸೂಕ್ಷ್ಮತೆ­ಯಿಂದ ಗಮನಿಸಿ ಹೆಜ್ಜೆ ಇಡುತ್ತಾರೆ. ಅವೆಲ್ಲದರ ಬಗ್ಗೆ ಅರಿತುಕೊಂಡ ಬಳಿಕ ಪಾತ್ರ ಮಾಡಿದೆ.

ಅಂಧರ ಕಷ್ಟದ ಬಗ್ಗೆ ಗೊತ್ತಾಗಿರಲೇಬೇಕು?
ಹೌದು, ಆ ಪಾತ್ರ ಮಾಡುವಾಗ ಎಷ್ಟು ಕಷ್ಟ ಅಂತ ಗೊತ್ತಾಯ್ತು. ಕಣ್ಣೇ ಇಲ್ಲದವರ ಕಷ್ಟ ಹೇಗಿರುತ್ತೆ ಅನ್ನೋದು ಊಹಿಸಲೂ ಆಗಲ್ಲ. ರಿಯಲಿ ವೇರಿ ಸ್ಯಾಡ್‌ ಆ್ಯಂಡ್‌ ಬ್ಯಾಡ್‌. ಕಣ್ಣೇ ಇಲ್ಲದಿದ್ದರೂ, ಅವರು ಬದುಕಿ ತೋರಿಸುತ್ತಿದ್ದಾರೆ. ಅದು ಗ್ರೇಟ್‌. ಸಿನಿಮಾದಲ್ಲೊಂದು ಡೈಲಾಗ್‌ ಇದೆ, “ನಾನು ಕುರುಡ ಇರಬಹುದು. ಆದರೆ, ಸೃಷ್ಟಿ ಮತ್ತು ಒಳಗಿನ ದೃಷ್ಟಿ ಬಗ್ಗೆ ಎಲ್ಲರಿಗಿಂತಲೂ ಹೆಚ್ಚು ಅರಿವು ನಮಗಿರುತ್ತೆ’ ಇದು ಅಪ್ಪಟ ಸತ್ಯ.

ಇಲ್ಲಿ ಬದಲಾಣೆ ಮಾಡಿದ್ದುಂಟಾ?
ಹೌದು ಮೂಲ ಚಿತ್ರಕ್ಕೆ ಹೋಲಿಸಿದರೆ ಸಾಕಷ್ಟು ಬದಲಾವಣೆ ಇದೆ. ಮುಖ್ಯವಾಗಿ ಲಾಜಿಕ್‌ ಹೊಸದಾಗಿದೆ. ವಿನಾಕಾರಣ, ಇಲ್ಲಿ ಹೀರೋಯಿಸಂ ಇಲ್ಲವೇ ಇಲ್ಲ. ಎಲ್ಲರಿಗೂ ಕನೆಕ್ಟ್ ಆಗುವಂತಹ ಸರಳತೆ ಇಲ್ಲಿದೆ. ಚಿತ್ರದಲ್ಲಿ ಅಂಧನ ಪಾತ್ರ ನೋಡಿದವರಿಗೆ ಅದು ಹೀರೋ ಅಲ್ಲ, ಸಾಮಾನ್ಯ ವ್ಯಕ್ತಿ ಎನಿಸುವಷ್ಟರ ಮಟ್ಟಿಗೆ ಮೂಡಿಬಂದಿದೆ. ಸಿನಿಮಾ ನೋಡಿದವರಿಗೆ ಹೊಸ ಬದಲಾವಣೆಯೂ ಕಾಣುತ್ತೆ.

ಫ್ಯಾನ್ಸ್‌ ಕಮರ್ಷಿಯಲ್‌ ಇಷ್ಟಪಡ್ತಾರೆ ಇಲ್ಲೂ ನಿರೀಕ್ಷಿಸಬಹುದಾ?
ಖಂಡಿತ ಇಲ್ಲಿ ಕಮರ್ಷಿಯಲ್‌ ಎಲಿಮೆಂಟ್ಸ್‌ ಇದೆ. ಆದರೆ, ಬೇಕು ಅಂತಾನೇ ತುರುಕಿಲ್ಲ. ಮೂರು ಆ್ಯಕ್ಷನ್‌ ಇದೆ. ಹಾಗಂತ ಅದು ಗಿಮಿಕ್‌ ಮಾಡಿಯೋ, ಸೆಟ್‌ ಹಾಕಿಯೋ, ಎಗರಿ ಬೀಳುವಂತಹ ಫೈಟ್‌ ಇಲ್ಲ. ಲಾಜಿಕ್‌ ಆಗಿಯೇ ಫೈಟ್‌ ಇದೆ.  ಇನ್ನು, ಹಾಡುಗಳು ಕಥೆಗೆ ಪೂರಕವಾಗಿದ್ದು, ಬಾಲ ನಟಿ ಮಿನಾಕ್ಷಿ ಅದ್ಭುತವಾಗಿ ನಟಿಸಿದ್ದಾಳೆ. ಬರುವ ಪ್ರತಿ ಪಾತ್ರಕ್ಕೂ ಆದ್ಯತೆ ಇದೆ. ಹಾಗಾಗಿ ಇಲ್ಲಿ ಒಂದೊಳ್ಳೆಯ ಚಿತ್ರವನ್ನು ನಿರೀಕ್ಷಿಸಬಹುದು.

ಹಾಗಾದರೆ ಎಲ್ಲರನ್ನೂ ಭಾವುಕರನ್ನಾಗಿಸುತ್ತೀರಿ?
ಅದೇನೋ ಗೊತ್ತಿಲ್ಲ. ಇಡೀ ಸಿನಿಮಾ ನೋಡಿ ಹೊರಬಂದವರಿಗೆ ಪಾತ್ರ ಕಾಡದೇ ಇರದು. ಅದೊಂದು ವಿಭಿನ್ನತೆಯ ಪಾತ್ರ. ಅಂಧನಾಗಿದ್ದರೂ ಕಮಿಟ್‌ಮೆಂಟ್‌ ವಿಷಯ ಬಂದಾಗ ತುಂಬಾ ಪ್ರಾಮಾಣಿಕ ಸಾಕಷ್ಟು ಕಮಿಟ್‌ಮೆಂಟ್‌ ಇದ್ದಾಗ, ಎಲ್ಲವನ್ನು ಹೇಗೆ ಎದುರಿಸುತ್ತಾನೆ ಎಂಬ ಅಂಶ ಇಲ್ಲಿ ವಕೌìಟ್‌ ಆಗಿದೆ. ನೋಡಿದವರಿಗೂ ಅದು ಕರೆಕ್ಟ್ ಅನ್ನುವಂತಿದೆ. ಅಂತಿಮವಾಗಿ ಅಭಿಮಾನಿಗಳು, ಜನರು ಚಿತ್ರ ಹೇಗಿದೆ ಎಂದು ಹೇಳಬೇಕು. ನಮ್ಮ ಕಡೆಯಿಂದ ಒಳ್ಳೆಯ ಚಿತ್ರ ಕೊಟ್ಟಿದ್ದೇವೆ. ಜನರು ಇಷ್ಟಪಡಲಿ, ಪಡದೇ ಇರಲಿ ತಲೆಬಾಗಬೇಕು. ಶೇ.80 ರಷ್ಟು ಜನರಿಗೆ “ಕವಚ’ ಖುಷಿ ಕೊಡುತ್ತೆ ಎಂಬ ಗ್ಯಾರಂಟಿ ಕೊಡ್ತೀನಿ.

ಈ ಪಾತ್ರ ಮಾಡುವಾಗ ಅಪ್ಪಾಜಿ ನೆನಪಾದರಂತೆ?
ಹೌದು, ಕಥೆ, ಪಾತ್ರ ಕೇಳಿದಾಗ ಎಲ್ಲೋ ಒಂದು ಕಡೆ ಅಪ್ಪಾಜಿ ನೆನಪಾದರು. ಯಾಕೆಂದರೆ, ನೇತ್ರದಾನ ಮಾಡಿ ಇಂದಿಗೂ ಜೀವಂತವಾಗಿದ್ದಾರೆ. ರಾಘು ಅಪ್ಪಾಜಿ ಹೇಳಿದ ಮಾತನ್ನು ಮರೆಯದೆ, ನೇತ್ರದಾನ ವ್ಯವಸ್ಥೆ ಮಾಡಿದ್ದರು. ಈ ಪಾತ್ರ ಮಾಡುವಾಗ, ಕಣ್ಣಿಲ್ಲದವರಿಗೆ ಕಣ್ಣು ಬಂದರೆ ಎಷ್ಟೊಂದು ಬಲ ಬಂದಂತಾಗುತ್ತಲ್ಲವೇ ಎನಿಸಿದ್ದು ನಿಜ. ಎಲ್ಲರೂ ನೇತ್ರದಾನ ಮಾಡಬೇಕು. ಜೀವ ಹೋದ ಮೆಲೂ, ನಮ್ಮ ಕಣ್ಣುಗಳು ಜೀವಂತವಾಗಿಯೇ ಇರುತ್ತವೆ. ಈಗಲೂ ಅಪ್ಪಾಜಿ ಎಲ್ಲವನ್ನೂ ಆ ಕಣ್ಣುಗಳಿಂದ ನೋಡುತ್ತಿದ್ದಾರೆ.

ಅಂಧ ಪಾತ್ರವಾಯ್ತು ಮುಂದಾ?
ಈಗಾಗಲೇ ಒಂದಷ್ಟು ವಿಭಿನ್ನ ಪಾತ್ರ ಮಾಡಿದ್ದೇನೆ. ಎಲ್ಲಾ ರೀತಿಯ ಪಾತ್ರ ಮಾಡಿದ್ದೇನೆ ಅನ್ನಲ್ಲ. ಇನ್ನೂ ಮಾಡಬೇಕಿರುವುದು ಸಾಕಷ್ಟು ಇದೆ. ನನಗೆ “ಭಕ್ತ ಕುಂಬಾರ’ ಶೈಲಿಯ ಚಿತ್ರ ಮಾಡುವ ಕನಸಿದೆ. ಫ್ರೆಶ್‌ ಆಗಿರುವಂತಹ ಸಬ್ಜೆಕ್ಟ್ ಬಂದರೆ ಖಂಡಿತ ಮಾಡ್ತೀನಿ. ನಮ್ಮ ಬ್ಯಾನರ್‌ನಲ್ಲೇ ಆ ಚಿತ್ರ ಆಗುತ್ತೆ. ಬೇರೆ ಯಾರಾದರೂ ಇಂಟ್ರೆಸ್ಟ್‌ ತೋರಿಸಿದರೂ ಮಾಡ್ತೀನಿ.

— ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next