Advertisement

KAVACHಸುರಕ್ಷ ವ್ಯವಸ್ಥೆ ಅಳವಡಿಕೆ ಇನ್ನಷ್ಟು ತ್ವರಿತಗತಿಯಲ್ಲಿ ನಡೆಯಲಿ

01:07 AM Jul 20, 2024 | Team Udayavani |

ಒಂದೆರಡು ವರ್ಷಗಳಿಂದೀಚೆಗೆ ದೇಶದಲ್ಲಿ ರೈಲು ದುರಂತಗಳು ಪದೇಪದೆ ಸಂಭವಿಸುತ್ತಿವೆ. ಹಿಂದೆಗೆ ಹೋಲಿಸಿದಲ್ಲಿ ಕಳೆದೊಂದು ದಶಕದ ಅವಧಿಯಲ್ಲಿ ರೈಲು ದುರ್ಘ‌ಟನೆಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದ್ದರೂ ಅಲ್ಲಲ್ಲಿ ಸಣ್ಣಪುಟ್ಟ ಅವಘಡಗಳು ಸಂಭವಿಸಿ, ಪ್ರಯಾಣಿಕರು ಸಾವನ್ನಪ್ಪುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ರೈಲು ಯಾನವನ್ನು ಇನ್ನಷ್ಟು ಸುರಕ್ಷಿತ ವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮತ್ತು ಭಾರತೀಯ ರೈಲ್ವೇ ಹೆಚ್ಚಿನ ಒತ್ತು ನೀಡಬೇಕಿರುವುದು ಸದ್ಯದ ತುರ್ತು.

Advertisement

ತಿಂಗಳ ಹಿಂದೆಯಷ್ಟೇ ಪಶ್ಚಿಮ ಬಂಗಾಲದ ಡಾರ್ಜಿಲಿಂಗ್‌ನಲ್ಲಿ ಕಾಂಚನ ಗಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಗೂಡ್ಸ್‌ ರೈಲೊಂದು ಢಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ 10 ಮಂದಿ ಸಾವನ್ನಪ್ಪಿದ್ದರೆ, 43 ಮಂದಿ ಗಾಯಗೊಂಡಿದ್ದರು. ಗುರುವಾರ ಉತ್ತರ ಪ್ರದೇಶದ ಗೊಂಡಾ ಸಮೀಪ ಮೋತಿಗಂಜ್‌ ಮತ್ತು ಜಿಲಾಹಿ ರೈಲು ನಿಲ್ದಾಣಗಳ ನಡುವೆ ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್‌ ರೈಲಿನ ಎಂಟು ಬೋಗಿಗಳು ಹಳಿ ತಪ್ಪಿ ಸಂಭವಿಸಿದ ದುರಂತದಲ್ಲಿ ನಾಲ್ವರು ಸಾವನ್ನಪ್ಪಿದರೆ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ತಿಂಗಳ ಅವಧಿಯಲ್ಲಿ ಎರಡು ರೈಲು ಅಪಘಾತ ಸಂಭವಿಸಿರುವುದು ದೇಶದ ಜನತೆಯಲ್ಲಿ ರೈಲು ಯಾನದ ಸುರಕ್ಷೆಯ ಕುರಿತಂತೆ ಅನುಮಾನಗಳು ಮೂಡುವಂತೆ ಮಾಡಿದೆ.

ಪ್ರತಿಯೊಂದು ದುರಂತ ಸಂಭವಿಸಿದಾಗಲೂ ದುರಂತದ ಕಾರಣ ತಿಳಿಯಲು ರೈಲ್ವೇ ಮಂಡಳಿ ತನಿಖಾ ಸಮಿತಿ ರಚಿಸಿ, ವರದಿಯನ್ನು ಪಡೆಯುತ್ತ ಬಂದಿದೆ ಯಾದರೂ ಈ ಸಮಿತಿಗಳು ನೀಡುವ ವರದಿಯನ್ನು ಗಂಭೀರವಾಗಿ ಪರಿಗಣಿಸ ದಿರುವುದೇ ಇಂತಹ ದುರ್ಘ‌ಟನೆಗಳು ಪದೇಪದೆ ಸಂಭವಿಸಲು ಕಾರಣ ವಾಗುತ್ತಿವೆ ಎಂಬ ಆರೋಪ ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ.

ದೇಶದಲ್ಲಿನ ರೈಲು ಸೇವೆಯ ಆಧುನೀಕರಣ, ಸುರಕ್ಷೆಗಾಗಿ ಸರಕಾರ ಹೆಚ್ಚಿನ ಪ್ರಮಾಣ  ದಲ್ಲಿ ಅನುದಾನವನ್ನು ವಿನಿಯೋಗಿಸುತ್ತಿದೆಯಾದರೂ ದುರ್ಘ‌ಟನೆ ಗಳನ್ನು ಸಂಪೂರ್ಣವಾಗಿ ತಪ್ಪಿಸಲು ಇಲಾಖೆಗೆ ಇನ್ನೂ ಸಾಧ್ಯವಾಗಿಲ್ಲ. ಭಾರ ತೀಯ ರೈಲ್ವೇಯ ಮಹತ್ವಾಕಾಂಕ್ಷೆಯ ಸ್ವಯಂಚಾಲಿತ ಸುರಕ್ಷ ವ್ಯವಸ್ಥೆಯಾದ “ಕವಚ್‌’ ತಂತ್ರಜ್ಞಾನದ ಅಳವಡಿಕೆಗೆ ಇನ್ನಷ್ಟು ವೇಗ ನೀಡಬೇಕಿದೆ. ಈ ಬಗ್ಗೆ ಕಾಂಚನಗಂಗಾ ಎಕ್ಸ್‌ಪ್ರೆಸ್‌ ದುರಂತದ ಕುರಿತಂತೆ ತನಿಖೆ ನಡೆಸಿದ್ದ ರೈಲ್ವೇ ಸುರಕ್ಷ ವಿಭಾಗದ ಮುಖ್ಯ ಆಯುಕ್ತರು ಸಲ್ಲಿಸಿರುವ ತಾತ್ಕಾಲಿಕ ವರದಿಯಲ್ಲಿಯೂ ಬೆಟ್ಟು ಮಾಡಿದ್ದಾರೆ. ರೈಲುಗಳ ಕಾರ್ಯಾಚರಣ ಪ್ರಕ್ರಿಯೆಯಲ್ಲಿನ ಬಹುಹಂತದ ವೈಫ‌ಲ್ಯದ ಕಾರಣಗಳಿಂದಾಗಿ ಕಂಚನಗಂಗಾ ದುರಂತ ಸಂಭವಿಸಿದೆ ಎಂದೂ ಆಯುಕ್ತರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

ಹವಾಮಾನ ವೈಪರೀತ್ಯ, ಸ್ವಯಂಚಾಲಿತ ಸಿಗ್ನಲ್‌ ವ್ಯವಸ್ಥೆಯ ವೈಫ‌ಲ್ಯ ಮತ್ತಿತರ ಸಂದರ್ಭಗಳಲ್ಲಿ ರೈಲು ಕಾರ್ಯಾಚರಣೆಯನ್ನು ಸಮರ್ಪಕವಾಗಿ ನಿಯಂ ತ್ರಿಸುವ ಪರ್ಯಾಯ ವಿಧಾನದ ಕೊರತೆ ರೈಲ್ವೇ ಇಲಾಖೆಯನ್ನು ಬಾಧಿ ಸುತ್ತಿದೆ. ರೈಲುಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ತಂತ್ರಜ್ಞಾನವನ್ನು ವ್ಯಾಪಕ ವಾಗಿ ಬಳಸಿ ಕೊಳ್ಳಲಾಗುತ್ತಿದೆಯಾದರೂ ಇಂದಿಗೂ ಹಲವಾರು ಕೆಲಸ ಕಾರ್ಯಗಳಿಗೆ ರೈಲ್ವೇ ಇಲಾಖೆ ಸಿಬಂದಿಯನ್ನೇ ಅವಲಂಬಿಸಿದೆ. ಈ ಸಿಬಂದಿಯ ಸಣ್ಣ ಲೋಪ ಕೂಡ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತಿದ್ದು ರೈಲುಗಳ ಕಾರ್ಯಾಚರಣೆ ಪ್ರಕ್ರಿಯೆ ಯಲ್ಲಿ ಮಾನವ ಲೋಪವನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಇಲಾಖೆ ಇನ್ನಷ್ಟು ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕು.

Advertisement

ರೈಲು ನಿಲ್ದಾಣ, ಸಿಗ್ನಲ್‌ಗ‌ಳಲ್ಲಿ ಕಾರ್ಯ ನಿರ್ವಹಿಸುವ ಸಿಬಂದಿಗೆ ಪೂರೈಸ ಲಾಗುತ್ತಿರುವ ಸಾಧನ, ಸಲಕರಣೆಗಳಿಗೂ ಆಧುನಿಕ ಸ್ಪರ್ಶ ನೀಡುವ ಅಗತ್ಯವಿದೆ. ಇಂದಿನ 6ಜಿ ಯುಗದಲ್ಲಿಯೂ ಅದೇ ಶತಮಾನದಷ್ಟು ಹಳೆಯ ದಾದ ವಾಕಿ ಟಾಕಿಯ ಬದಲಿಗೆ ಸುಧಾರಿತ ಸಾಧನಗಳನ್ನು ಅಧಿಕಾರಿಗಳು ಮತ್ತು ಸಿಬಂದಿಗೆ ಮಾತ್ರವಲ್ಲದೆ ರೈಲು ಚಾಲಕರಿಗೂ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next