Advertisement
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶುಕ್ರವಾರ ಜರಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೊದಲ ಹಂತದ ಕಾಮಗಾರಿಗೆ ಅನುಗುಣವಾಗಿ ಅಗ್ರಸಭೆ, ಮುಖ ಮಂಟಪ ನಿರ್ಮಾಣವಾಗಬೇಕಿದ್ದು ಅದಕ್ಕೆ ಪೂರ್ವಭಾವಿಯಾಗಿ ಪ್ರಸ್ತುತ ಇರುವ ಮಾರಿಯಮ್ಮ ಗುಡಿ ಮತ್ತು ಉಚ್ಚಂಗಿ ಗುಡಿಗಳನ್ನು ವಿಸರ್ಜಿಸಬೇಕಾಗಿದೆ. ಈ ಉದ್ದೇಶದಿಂದ ಅಮ್ಮನ ಅಭಯ ನುಡಿ ಮತ್ತು ಪ್ರಾಜ್ಞರ ಪ್ರಶ್ನಾ ಚಿಂತನೆಯಂತೆ ತಾತ್ಕಾಲಿಕ ಗುಡಿಗಳನ್ನು ನಿರ್ಮಿಸಲಾಗಿದ್ದು ಜೂ. 11ರಂದು ಬೆಳಿಗ್ಗೆ ಗಂಟೆ 8 ರಿಂದ ಚಂಡಿಕಾಯಾಗ ಪ್ರಾರಂಭಗೊಂಡು, 11 ಕ್ಕೆ ಪೂರ್ಣಾಹುತಿ, ಪ್ರಸಾದ ವಿತರಣೆ ನಡೆಯಲಿದೆ.
Related Articles
Advertisement
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲೆಯ ಪ್ರಸಿದ್ಧ ಕ್ಷೇತ್ರವಾದ ಮಾರಿಯಮ್ಮನ ಕ್ಷೇತ್ರವು ಊರ ಪರವೂರ ಭಕ್ತಾದಿಗಳು ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಶಿಲಾಸೇವೆಯೆಂಬ ವಿನೂತನ ಕಲ್ಪನೆಯ ಸಾಕಾರದೊಂದಿಗೆ ತ್ವರಿತಗತಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದೆ. ದೇಶ-ವಿದೇಶಗಳಲ್ಲಿರುವ ಅಮ್ಮನ ಭಕ್ತಾದಿಗಳು ಮತ್ತು ಸ್ವಯಂ ಸೇವಕರು ಕಂಕಣಬದ್ಧರಾಗಿ ಅಹರ್ನಿಶಿ ದುಡಿದು ಶಿಲಾ ಸೇವೆಯ ಮುಖೇನ ಸೇವೆಗೈಯ್ಯುತ್ತಿರುವುದು ಅಭಿನಂದನಾರ್ಹವಾಗಿದೆ. ಮುಂದಿನ ಕೆಲಸ ಕಾರ್ಯಗಳಲ್ಲೂ ಎಲ್ಲರ ಸಹಕಾರವನ್ನು ನಿರೀಕ್ಷಿಸಲಾಗುತ್ತಿದೆ ಎಂದರು.
ಮಾರಿಯಮ್ಮ ದೇವಿ ಮತ್ತು ಉಚ್ಚಂಗಿ ದೇವಿಯನ್ನು ತಾತ್ಕಾಲಿಕ ಗುಡಿಯಲ್ಲಿ ಸಾನಿಧ್ಯ ಪ್ರತಿಷ್ಠೆಯಾದ ಬಳಿಕ ತಾತ್ಕಾಲಿಕ ಗುಡಿಯಲ್ಲಿ ಹರಕೆ ಮಾರಿಪೂಜೆ, ಹರಕೆ ಚಂಡಿಕಾಯಾಗ ಹೊರತು ಪಡಿಸಿ ಮಂಗಳವಾರದಂದು ನಡೆಯುವ ಪೂಜೆ, ಸೇವೆ ಮತ್ತು ದರ್ಶನ ಸೇವೆ ಹಾಗೂ ಕಾಲಾವಧಿ ಮಾರಿಪೂಜೆ, ನವರಾತ್ರಿ ಉತ್ಸವ ನಡೆಯಲಿದೆ. ಮುಂದಿನ ನವರಾತ್ರಿ ಉತ್ಸವದ ಕಾಲದಲ್ಲಿ ನವ ನಿರ್ಮಾಣಗೊಳ್ಳುತ್ತಿರುವ ದೇಗುಲದ ಬ್ರಹ್ಮಕಲಶೋತ್ಸವಕ್ಕೆ ಸಿದ್ದತೆ ನಡೆಸಿ, 2024ರ ಸುಗ್ಗಿ ಮಾರಿಪೂಜಾ ಮಹೋತ್ಸವಕ್ಕೆ ಮುನ್ನ ನೂತನ ಗರ್ಭಗುಡಿಯ ಸ್ವರ್ಣ ಗದ್ದುಗೆಯಲ್ಲಿ ಮಾರಿಯಮ್ಮ ದೇವಿ, ಉಚ್ಚಂಗಿ ದೇವಿಯ ಪ್ರತಿಷ್ಠೆ ನಡೆಯಲಿದೆ.
ಸುದ್ಧಿಗೋಷ್ಠಿಯಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಗಂಗಾಧರ ಸುವರ್ಣ, ದೇವಿಪ್ರಸಾದ್ ಶೆಟ್ಟಿ, ಮನೋಹರ್ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಯೋಗೀಶ್ ಶೆಟ್ಟಿ ಉಪಸ್ಥಿತರಿದ್ದರು.