Advertisement

ಕಾಪು ಮೊಗವೀರ ಮಹಾಸಭಾ ಮುಂಬಯಿ: ವಾರ್ಷಿಕ ಮಹಾಸಭೆ

03:35 PM Feb 13, 2018 | Team Udayavani |

ಮುಂಬಯಿ: ನಾವು ಹುಟ್ಟಿ ಬೆಳೆದು ಪ್ರಾಥಮಿಕ ಶಿಕ್ಷಣ ಪಡೆದ ಗ್ರಾಮ ಹಾಗೂ ಶಾಲೆಯನ್ನು ಮರೆಯದೆ ಅದರ ಏಳ್ಗೆಗಾಗಿ ಎಲ್ಲರೂ ಕೈಜೋಡಿಸಬೇಕು. ನಾವೆಲ್ಲ ದೇವತಾ ಕಾರ್ಯಗಳಿಗೆ ಉದಾರ ದಾನ ಮಾಡುತ್ತಿದ್ದರೂ ಸಾಮಾಜಿಕ ಕಾರ್ಯಗಳಿಗೂ ದಾನ ಮಾಡುವಾಗ ಅದೇ ಉದಾರತೆಯನ್ನು ತೋರಿಸಬೇಕು ಎಂದು ಕಾಪು ಮೊಗವೀರ ಮಹಾಸಭಾ ಮುಂಬಯಿ ಇದರ ಅಧ್ಯಕ್ಷ ಸತೀಶ್‌ ಕುಮಾರ್‌ ಎನ್‌. ಕರ್ಕೇರ ನುಡಿದರು.

Advertisement

ಜ. 21 ರಂದು ಸಾಕಿನಾಕಾದಲ್ಲಿರುವ ಸಭಾದ ಕಾರ್ಯಾಲಯದಲ್ಲಿ ಜರಗಿದ ಕಾಪು ಮೊಗವೀರ ಮಹಾಸಭಾ ಇದರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಸಭಾದ ವತಿಯಿಂದ ಕಾಪು ಪಡುಗ್ರಾಮದಲ್ಲಿನ ಶಾಲಾ ಮಕ್ಕಳಿಗೆ ಪ್ರತೀ ವರ್ಷವೂ ವಿದ್ಯಾರ್ಥಿ ವೇತನ, ರೇನ್‌ಕೋಟ್‌ಗಳ ವಿತರಣೆ, ಶಾಲೆಯಲ್ಲಿನ ಓರ್ವ ಶಿಕ್ಷಕಿಗೆ ಪ್ರತಿ ತಿಂಗಳು ವೇತನ ನೀಡುವುದು, ಸದಸ್ಯರ ಕುಟುಂಬಸ್ಥರಿಗೆ ಆರೋಗ್ಯ ವಿಮೆ ಕಂತುಗಳನ್ನು ಮರುಪಾವತಿಸುವುದು ಮೊದಲಾದ ಅನೇಕ ಸಮಾಜಪರ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದ್ದು, ಈ ಪುಣ್ಯ ಕಾರ್ಯಗಳಿಗೆ ಸದಸ್ಯರು ಮತ್ತು ದಾನಿಗಳು ತಮ್ಮ ಸಹಾಯಹಸ್ತವನ್ನು ನೀಡಬೇಕು ಎಂದು ಸದಸ್ಯರಲ್ಲಿ ವಿನಂತಿಸಿದರು.

ಆರಂಭದಲ್ಲಿ ಗತ ವರ್ಷದಲ್ಲಿ ನಿಧನರಾದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಜತೆ  ಕಾರ್ಯದರ್ಶಿ ರೂಪೇಶ್‌ ಸುವರ್ಣ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಬಿ. ಎಸ್‌. ಸಾಲ್ಯಾನ್‌ ಅವರು ಕಳೆದ ವರ್ಷದಲ್ಲಿ ನಡೆಸಲಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜತೆ ಕಾರ್ಯದರ್ಶಿ ರೋಹನ್‌ ನಾಯ್ಕ ಅವರು ಗತ ವಾರ್ಷಿಕ ವರದಿ ಮಂಡಿಸಿದರು.

ಗೌರವ ಕೋಶಾಧಿಕಾರಿ ಕುಮಾರ್‌ ಕರ್ಕೇರ ಅವರು ಕಾಪು ಮೊಗವೀರ ಮಹಾಸಭಾ ಮುಂಬಯಿ ಮತ್ತು ಅದರ ಸಂಚಾಲಕತ್ವದಲ್ಲಿರುವ ಕಾಪು ಮೊಗವೀರ ಪರಸ್ಪರ ಸಹಾಯಕ ಸಂಘದ ಲೆಕ್ಕ ಪತ್ರವನ್ನು ಮಂಡಿಸಿದರು. ಸದಸ್ಯರ ಪ್ರಶ್ನೆಗಳಿಗೆ ಕುಮಾರ್‌ ಕರ್ಕೇರ ಮತ್ತು ಉಮೇಶ್‌ ಕರ್ಕೇರ ಸೂಕ್ತ ಉತ್ತರಗಳನ್ನ ನೀಡಿದರು. ಸದಸ್ಯರು ಹಾಗೂ ಕುಟುಂಬದ ಸದಸ್ಯರಿಂದ ಬಂದ ಬೇಡಿಕೆಯಂತೆ ಸಭೆಯು ಮಹಿಳಾ ವಿಭಾಗವನ್ನು ಆರಂಭಿಸುವ ಬಗ್ಗೆ ಮಹಾಸಭೆಯಲ್ಲಿ ಚರ್ಚಿಸಲಾಯಿತು. ಇದರ ಅಂಗವಾಗಿ ಶೀಘ್ರದಲ್ಲೇ ಸದಸ್ಯರು ಹಾಗೂ ಅವರ ಕುಟುಂಬಸ್ಥರ ವಿಹಾರಕೂಟವನ್ನು ಆಯೋಜಿಸಿ ಅಲ್ಲಿ ಕೂಲಂಕುಷವಾಗಿ ಚರ್ಚಿಸಿ ನಿರ್ಧಾರಕ್ಕೆ ಬರಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಸಭಿಕರ ಪರವಾಗಿ ಕೃಷ್ಣಪ್ಪ ಎಂ. ಕರ್ಕೇರ, ರಮೇಶ್‌ ಎಂ. ಬಂಗೇರ, ನೀಲಾಧರ ಎಂ. ಸಾಲ್ಯಾನ್‌, ವಸಂತ ಆರ್‌. ಕುಂದರ್‌, ಲೋಕೇಶ್‌ ಎಂ. ಕರ್ಕೇರ, ಸೋಮನಾಥ ಎಸ್‌. ಕರ್ಕೇರ, ರಮೇಶ್‌ ಟಿ. ಮೆಂಡನ್‌, ರಾಮ ಎ. ಪುತ್ರನ್‌, ಮೋಹನ್‌ ಮೆಂಡನ್‌, ಪುರುಷೋತ್ತಮ ಎಲ್‌. ಪುತ್ರನ್‌, ರಮೇಶ್‌ ಎಚ್‌. ಕರ್ಕೇರ, ಆನಂದ ಕೋಟ್ಯಾನ್‌ ಮೊದಲಾದವರು ಉಪಯುಕ್ತ ಸಲಹೆ ನೀಡಿದರು. ರೂಪೇಶ್‌ ಸುವರ್ಣ ವಂದಿಸಿದರು. ಸದಸ್ಯ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next