Advertisement

Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!

05:18 PM Nov 05, 2024 | Team Udayavani |

ಕಾಪು: ಮಂಗಳೂರು – ಉಡುಪಿ ನಡುವಿನ ಎರ್ಮಾಳು – ಉಚ್ಚಿಲ – ಮೂಳೂರು ರಾಷ್ಟ್ರೀಯ ಹೆದ್ದಾರಿ 66ರ ಕತ್ತಲಿಗೆ ಕೊನೆಗೂ ಮುಕ್ತಿ ದೊರಕಿದೆ.

Advertisement

ರಾ. ಹೆ. 66ರ ಮೂಳೂರು – ಉಚ್ಚಿಲ – ಎರ್ಮಾಳು ನಡುವೆ ಲೈಟ್‌ಗಳು ಉರಿಯದೇ ಹಲವು ತಿಂಗಳುಗಳೇ ಕಳೆದಿದ್ದವು. ಮೂಳೂರು ಡೈವರ್ಷನ್‌ ಬಳಿಯಿಂದ ಎರ್ಮಾಳು ಡೈವರ್ಷನ್‌ವರೆಗಿನ 47 ಕಂಬಗಳಲ್ಲಿ 91 ಲೈಟ್‌ಗಳಿದ್ದು ಅದರಲ್ಲಿ ಒಂದು ಲೈಟ್‌ ಕೂಡ ಉರಿಯದೇ ಹೆದ್ದಾರಿ ಸಂಚಾರಕ್ಕೆ ತೊಂದರೆಯುಂಟಾಗುತ್ತಿತ್ತು. ರಾತ್ರಿ ವೇಳೆ ಲೈಟ್‌ ಉರಿಯದೇ ಕರ್ಗತ್ತಲು ಆವರಿಸಿ ಬಿಡುತ್ತಿದ್ದ ಪರಿಣಾಮ ಹೆದ್ದಾರಿಯಲ್ಲಿ ನಿರಂತರ ಅಪಘಾತ ಉಂಟಾಗುತ್ತಿತ್ತು.

ಉಚ್ಚಿಲ ಬಡಾ ಗ್ರಾಮ ಪಂಚಾಯತ್‌ ಸಹಿತ ಸ್ಥಳೀಯರು ಉಡುಪಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಕಾಪು ತಾಲೂಕು ಮಟ್ಟದ ಜನಸ್ಪಂಧನ ಸಭೆಯಲ್ಲಿ ಬಹಿರಂಗವಾಗಿಯೇ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರರ ವಿರುದ್ಧ ದೂರು ನೀಡಿದ್ದರು. ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಅವರು ಕೂಡ ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ದಾರಿದೀಪಗಳನ್ನು ಸರಿಪಡಿಸುವಂತೆ ಸೂಚನೆ ನೀಡಿದ್ದರು.

ಕತ್ತಲಿನಿಂದ ತೊಂದರೆಗಳೇನು?
ಹೆದ್ದಾರಿ ದೀಪಗಳು ಉರಿಯದ ಪರಿಣಾಮ ಉಚ್ಚಿಲ ಪರಿಸರವು ಹಲವು ರೀತಿಯ ರಾತ್ರಿ ಅಕ್ರಮ ಚಟುವಟಿಕೆಗಳಿಗೆ ಹೆಸರುವಾಸಿಯಾಗಿತ್ತು. ಕತ್ತಲಾಗುತ್ತಿದ್ದಂತೆ ಕುಡುಕರಿಂದ ಹೆದ್ದಾರಿ ಬದಿಯಲ್ಲಿ ಕುಳಿತು ಮದ್ಯ ಸೇವನೆ, ಗಾಂಜಾ ಸೇವನೆ, ಗಾಂಜಾ ಮಾರಾಟ, ಕಾರುಗಳಲ್ಲೇ ಅನೈತಿಕ ಚಟುವಟಿಕೆಗಳು ನಡೆದು ಅಸಹ್ಯಕರ ಸ್ಥಿತಿ ಉಂಟಾಗಿತ್ತು. ಇದರ ನಡುವೆ ಹೆದ್ದಾರಿಯಲ್ಲಿ ಸರಗಳ್ಳತನ, ಒಂಟಿ ವಾಹನ ಚಾಲಕರ ದರೋಡೆ, ಮಹಿಳೆಯರಿಗೆ ಕಿರುಕುಳ ಮೊದಲಾದ ಘಟನೆಗಳೂ ನಡೆಯುವಂತಾಗಿತ್ತು.

ದುರಸ್ತಿಯಾಗಿವೆ
ಉಚ್ಚಿಲ – ಮೂಳೂರು ಹೆದ್ದಾರಿಯಲ್ಲಿ ದೀಪಗಳು ಉರಿಯದೆ ಕತ್ತಲು ಆವರಿಸಿರುವ ಬಗ್ಗೆ ಹೆದ್ದಾರಿ ಇಲಾಖೆ ಮತ್ತು ಜಿಲ್ಲಾಡಳಿತದ ಗಮನಕ್ಕೆ ತರಲಾಗಿತ್ತು. ಸಂಸದರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲೂ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಕಾಪು ಕ್ಷೇತ್ರ ವ್ಯಾಪ್ತಿಯ ರಾ.ಹೆ. 66ರಲ್ಲಿನ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿಕೊಡಲಾಗಿತ್ತು. ಉಚ್ಚಿಲ ದಸರಾ ಸಂದರ್ಭ ಮತ್ತೆ ಒತ್ತಡ ಹೇರಲಾಗಿತ್ತು. ಇದೀಗ ನಮ್ಮ ಮನವಿಗೆ ಸ್ಪಂದಿಸಿ ಹೆದ್ದಾರಿ ದೀಪಗಳು ದುರಸ್ತಿಯಾಗಿವೆ. ಉಳಿದ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ಭರವಸೆ ದೊರಕಿದೆ.
-ಗುರ್ಮೆ ಸುರೇಶ್‌ ಶೆಟ್ಟಿ, ಶಾಸಕರು, ಕಾಪು

Advertisement

ಉದಯವಾಣಿ ಆ.18ರ ಸುದಿನ ಸಂಚಿಕೆಯಲ್ಲಿ 91 ದೀಪಗಳಲ್ಲಿ ಒಂದೂ ಉರಿಯುತ್ತಿಲ್ಲ ಎಂಬ ವಿಶೇಷ ವರದಿಯ ಮೂಲಕ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರರ ಗಮನ ಸೆಳೆಯುವ ಪ್ರಯತ್ನ ನಡೆಸಲಾಗಿತ್ತು.

ಇದೀಗ ಮೂಳೂರು ಮತ್ತು ಎರ್ಮಾಳು ನಡುವಿನ 91 ಲೈಟ್‌ಗಳಲ್ಲಿ ಬಹುತೇಕ ಲೈಟ್‌ಗಳು ರಾತ್ರಿಪೂರ್ತಿ ಉರಿಯ ಲಾರಂಭಿಸಿದ್ದು, ಹೆದ್ದಾರಿ ಸವಾರರು ಮತ್ತು ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next