ಕಾಪು: ತೀವ್ರ ಬಿಸಿಲಿನ ಝಳದಿಂದಾಗಿ ಮೇ.7ರ ಮಂಗಳವಾರ ಪಾಂಗಾಳದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಕಾಪು ತಹಶೀಲ್ದಾರ್ ಸ್ವತಃ ಸ್ಥಳೀಯರೊಂದಿಗೆ ಸೇರಿಕೊಂಡು ಬೆಂಕಿ ನಂದಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪಾಂಗಾಳ ವಿನೋದ ಶೆಟ್ಟಿ ಎಂಬವರಿಗೆ ಸೇರಿದ ಜಮೀನು ಮತ್ತು ಅದರ ಸುತ್ತಮುತ್ತಲಿನ ಸುಮಾರು ಹದಿನೈದು ಎಕರೆ ಗದ್ದೆ ಮತ್ತು ತೋಟದಲ್ಲಿ ಮಂಗಳವಾರ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು.
ಈ ಬಗ್ಗೆ ಮಾಹಿತಿ ಪಡೆದ ಕಾಪು ತಹಶೀಲ್ದಾರ್ ಪ್ರತಿಭಾ ಆರ್. ಗ್ರಾಮ ಆಡಳಿತಾಧಿಕಾರಿ ಅವಿನಾಶ್ ಜತೆಗೂಡಿ ಘಟನಾ ಸ್ಥಳಕ್ಕೆ ನೀಡಿ ಪರಿಶೀಲನೆ ನಡೆಸಿದ್ದು ತತ್‌ಕ್ಷಣವೇ ಸ್ಥಳೀಯರ ಜತೆಗೂಡಿ ಬೆಂಕಿ ನಂದಿಸಲು ಕ್ರಮ ಕೈಗೊಂಡು ಜಮೀನನ್ನು ರಕ್ಷಿಸಿದ್ದಾರೆ.
ಈ ಜಮೀನಿನ ಪಕ್ಕದಲ್ಲಿ ಐದು ಮನೆಗಳಿದ್ದು ತುರ್ತಾಗಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಹಾನಿಯಾಗದಂತೆ ನೋಡಿಕೊಂಡರು. ಬಳಿಕ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳನ್ನು ತಕ್ಷಣ ಸ್ಥಳಕ್ಕೆ ಕರೆಸಿಕೊಂಡು ಮೆಸ್ಕಾಂ ಲೈನ್‌ಗಳನ್ನು ಆಫ್ ಮಾಡಿಸಿ ಹೆಚ್ಚಿನ ಹಾನಿಗಳಾಗದಂತೆ ನೋಡಿಕೊಂಡಿದ್ದಾರೆ. ಸ್ಥಳೀಯರು ಪಂಪ್ ಮೂಲಕ ನೀರು ಹಾಕಿ ಬೆಂಕಿಯನ್ನು ಸಂಪೂರ್ಣ ಹತೋಟಿಗೆ ತಂದಿದ್ದಾರೆ.
ಈ ಬೇಸಿಗೆಯಲ್ಲಿ ಬಿಸಿಲ ಝಳದಿಂದಾಗಿ ಹೆಚ್ಚಿನ ಅವಘಡಗಳು ಸಂಭವಿಸುತ್ತಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ.
ಈ ರೀತಿಯ ಪ್ರಕರಣಗಳು ಕಂಡು ಬಂದರೆ ತತ್‌ಕ್ಷಣ ತಾಲೂಕು ಆಡಳಿತಕ್ಕೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಅಗ್ನಿಶಾಮಕ ಇಲಾಖೆಯವರು ಕೂಡಾ ಸದಾ ಸದಾ ಸನ್ನದ್ದರಾಗಿರುವಂತೆ ಸೂಚನೆ ನೀಡಲಾಗಿದೆ ಎಂದು ಕಾಪು ತಹಶೀಲ್ದಾರ್ ಪ್ರತಿಭಾ ಆರ್. ತಿಳಿಸಿದ್ದಾರೆ.