ಕಾಪು: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರತ್ತ ಕಾಪು ವಿಧಾನ ಸಭಾ ಕ್ಷೇತ್ರದ ಹೆಚ್ಚಿನ ಮತದಾರರ ಒಲವು ತೋರಿದ್ದಾರೆ. ಈ ಕ್ಷೇತ್ರದಲ್ಲೇ 30ರಿಂದ 50 ಸಾವಿರ ಮತಗಳ ಲೀಡ್ ದೊರೆಯುವ ವಿಶ್ವಾಸವಿದೆ ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಕಾಪು ಪುರಸಭಾ ವ್ಯಾಪ್ತಿಯ ವಿವಿಧೆಡೆ ಮಂಗಳವಾರ ಬಿರುಸಿನ ಮನೆ ಮನೆ ಪ್ರಚಾರ ನಡೆಸಿ ಅವರು ಮಾತನಾಡಿದರು.
ಕಳೆದ ಅವಧಿಯಲ್ಲಿ ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆ ಅವರು ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ಸುಮಾರು 3,700 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಿದ್ದು, ಅದರಲ್ಲಿ 1,800 ಕೋ. ರೂ. ಅನುದಾನವನ್ನು ಉಡುಪಿ ಜಿಲ್ಲೆಗೆ ವಿನಿಯೋಗಿಸಲಾಗಿದೆ. ಈ ಕಾರಣದಿಂದಾಗಿ ಕರಾವಳಿ ಭಾಗದಲ್ಲಿ ಮೀನುಗಾರರು ಸೇರಿದಂತೆ ಎಲ್ಲ ವರ್ಗಗಳ ಮತಗಳು ಬಿಜೆಪಿ ಪಾಲಾಗಲಿವೆ. ಅದರೊಂದಿಗೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಎದುರಾಳಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲದೇ ಇರುವುದರಿಂದ ಮತದಾರರ ಹೆಚ್ಚಿನ ಒಲವು ಬಿಜೆಪಿ ಅಭ್ಯರ್ಥಿ ಪರವಾಗಿದೆ ಎಂದರು. .
ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಪುರಸಭೆಯ ವಿಪಕ್ಷ ನಾಯಕ ಅರುಣ್ ಶೆಟ್ಟಿ ಪಾದೂರು, ಸದಸ್ಯರಾದ ಕಿರಣ್ ಆಳ್ವ, ಅನಿಲ್ ಕುಮಾರ್, ರಮೇಶ್ ಹೆಗ್ಡೆ, ವಿಜಯ ಕರ್ಕೇರ, ಶಾಂಭವಿ ಕುಲಾಲ್, ರಮಾ ವೈ. ಶೆಟ್ಟಿ, ಮಮತಾ ಸಾಲ್ಯಾನ್, ಮೋಹಿನಿ ಶೆಟ್ಟಿ, ಗುಲಾಬಿ ಪಾಲನ್, ಸುಧಾ ರಮೇಶ್, ಪಕ್ಷದ ಮುಖಂಡರಾದ ಸಂದೀಪ್ ಶೆಟ್ಟಿ, ರತ್ನಾಕರ ಶೆಟ್ಟಿ, ಪ್ರವೀಣ್ ಪೂಜಾರಿ, ಸುಧಾಮ ಶೆಟ್ಟಿ, ನವೀನ್ ಎಸ್.ಕೆ., ಗುರುಪ್ರಸಾದ್ ಶೆಟ್ಟಿ, ಚಂದ್ರ ಮಲ್ಲಾರು ಉಪಸ್ಥಿತರಿದ್ದರು.