ಕಾಪು: ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದಿರುವ ಉಳಿಯಾರಗೋಳಿ ದಿ| ಮುದ್ದಣ್ಣ ಶೆಟ್ಟಿ ಅವರು ಸ್ಥಾಪಿಸಿದ ಶತಮಾನೋತ್ಸವ ಪೂರೈಸಿರುವ ಕಾಪು ದಂಡತೀರ್ಥ ಸಮೂಹ ವಿದ್ಯಾಸಂಸ್ಥೆಯು ಶೈಕ್ಷಣಿಕವಾಗಿ ಅದ್ಭುತವಾದ ಸಾಧನೆ ಯೊಂದಿಗೆ ದಾಖಲೆಯ ಪಥದತ್ತ ಮುನ್ನಡೆಯುತ್ತಿದೆ.
ದಿ| ಮುದ್ದಣ್ಣ ಶೆಟ್ಟಿ 1917ರಲ್ಲಿ ತನ್ನ ಮನೆಯಲ್ಲಿ ಆರಂಭಿಸಿದ ದಂಡತೀರ್ಥ ಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯು ಇಂದು ಪದವಿಪೂರ್ವ ಕಾಲೇಜು ಮತ್ತು ಪ್ಯಾರಾ ಮೆಡಿಕಲ್ ಸಹಿತವಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ. ಆ ಮೂಲಕ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಶಿಕ್ಷಣ ಒದಗಿಸುವ ಶಿಕ್ಷಣ ಸಂಸ್ಥೆಯಾಗಿ ಮೂಡಿಬರುತ್ತಿದೆ.
1980ರಲ್ಲಿ ದಿ| ಮುದ್ದಣ್ಣ ಶೆಟ್ರ ಅಳಿಯ ಗೋವಿಂದ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿದ್ದು, ಮುಂದೆ 1998ರಲ್ಲಿ ಗೋವಿಂದ ಶೆಟ್ರ ಅಳಿಯ ಕಾಪುವಿನ ಹಿರಿಯ ವೈದ್ಯ / ಪ್ರಶಾಂತ್ ಆಸ್ಪತ್ರೆಯ ನಿರ್ಮಾತೃ ಡಾ| ಕೆ. ಪ್ರಭಾಕರ ಶೆಟ್ಟಿಯವರ ಮುತುವರ್ಜಿಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದ ಪದವಿಪೂರ್ವ ಕಾಲೇಜು ಆರಂಭಗೊಂಡಿತು.
ಪ್ರಸ್ತುತ ಡಾ| ಪ್ರಭಾಕರ ಶೆಟ್ರ ಪುತ್ರ, ಉಡುಪಿ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ| ಪ್ರಶಾಂತ್ ಶೆಟ್ಟಿಯವರ ಕಾಳಜಿಯಿಂದ ಪ್ಯಾರಾ ಮೆಡಿಕಲ್ ಕಾಲೇಜು ಆರಂಭಗೊಂಡಿದ್ದು, ಈ ವರ್ಷ ದಶಮಾನೋತ್ಸವದ ಸಂಭ್ರಮದಲ್ಲಿದೆ. ಈ ಕಾಲೇಜು ವೃತ್ತಿಪರ ಕೋರ್ಸ್‌ನ ಮೂಲಕವೂ ಹೆಸರು ಗಳಿಸಿದೆ.
ಕಾಪು ದಂಡತೀರ್ಥ ವಿದ್ಯಾಸಂಸ್ಥೆಯು ಎಸೆಸೆಲ್ಸಿಯಲ್ಲಿ ನಿರಂತರ ಸರಾಸರಿ 95 ಶೇ.ಕ್ಕಿಂತ ಹೆಚ್ಚಿನ ಫಲಿತಾಂಶ ದಾಖಲಿಸುತ್ತಾ ಬಂದಿದ್ದು ಹಲವು ಬಾರಿ ಶೇ. 100 ಫಲಿತಾಂಶ ದಾಖಲಿಸಿದೆ. ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕೂಡ ನಿರಂತರ ಶೇ. 90ಕ್ಕೂ ಅಧಿಕ ಫಲಿತಾಂಶ ದಾಖಲಿಸಿದ್ದು ಸುಮಾರು 2,300ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿರುವ ಈ ಶಿಕ್ಷಣ ಸಂಸ್ಥೆಯು ಎಸೆಸೆಲ್ಸಿ ಪರೀಕ್ಷೆಯಲ್ಲಿ 100ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಪಬ್ಲಿಕ್ ಪರೀಕ್ಷೆಯನ್ನು ಬರೆಯುವ ಕೆಲವೇ ಕೆಲವು ವಿದ್ಯಾ ಸಂಸ್ಥೆಗಳಲ್ಲಿ ಒಂದಾಗಿದೆ.
ಡಾ| ಕೆ. ಪ್ರಭಾಕರ ಶೆಟ್ಟಿಯವರ ಸಂಚಾಲಕತ್ವದಲ್ಲಿ ಬಡ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರ ದೊಂದಿಗೆ ಪ್ರತಿ ವರ್ಷ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಸುಮಾರು 8 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ಅನುಭವಿ ಶಿಕ್ಷಕರಿಂದ ಕೂಡಿದ ಈ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಪ್ರೊ| ಆಲ್ಬನ್ ರೋಡ್ರಿಗಸ್ ಆಡಳಿತಾಧಿಕಾರಿಯಾಗಿ, ಎಂ. ನೀಲಾನಂದ ನಾಯ್ಕ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಎಲ್ಲ ರೀತಿಯಲ್ಲಿ ಅತ್ಯುತ್ತಮ ವ್ಯವಸ್ಥೆ ಹೊಂದಿರುವ ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ನೂರಕ್ಕಿಂತಲೂ ಹೆಚ್ಚು ಶಿಕ್ಷಕ – ಶಿಕ್ಷಕೇತರರು ಕರ್ತವ್ಯ ನಿರ್ವಹಿಸುತ್ತಿದ್ದು, ಸಂಸ್ಥೆ ನಿರಂತರ ಪ್ರಗತಿ ಪಥದತ್ತ ಮುನ್ನುಗ್ಗುತ್ತಿದೆ.