ಕಾಪು: ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದ ಕಾಪು ತಾಲೂಕಿನ ಬೆಳಪು ಗ್ರಾಮದ ವ್ಯಕ್ತಿಯೋರ್ವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.
ಈ ಸಂಬಂಧ ರವಿವಾರ ಬೆಳಪು ಗ್ರಾಮದ ನಿಗದಿತ ಪ್ರದೇಶಕ್ಕೆ ಆಗಮಿಸಿದ ತಾಲೂಕು ಮಟ್ಟದ ಅಧಿಕಾರಿಗಳು ಕೋವಿಡ್-19 ಪಾಸಿಟಿವ್ ಪತ್ತೆಯಾದ ವ್ಯಕ್ತಿಯ ಮನೆ ಪರಿಸರವನ್ನು ಸೀಲ್ ಡೌನ್ ಮಾಡಲಾಗಿದೆ.
ಮಹಾರಾಷ್ಟ್ರದಿಂದ ಕುಟುಂಬ ಸಮೇತ ಆಗಮಿಸಿದ್ದ ಇವರು ಕಾಪುವಿನಲ್ಲಿ ಸರಕಾರಿ ಕ್ವಾರಂಟೈನ್ ಮುಗಿಸಿ ಎರಡು ದಿನದ ಹಿಂದೆ ಮನೆಗೆ ಆಗಮಿಸಿದ್ದರು. ಮನೆಗೆ ಬಂದ ಎರಡನೇ ದಿನದಲ್ಲೇ ಕೋವಿಡ್ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ.
ಅಧಿಕಾರಿಗಳಿಂದ ಪರಿಶೀಲನೆ: ಜಿಲ್ಲಾಡಳಿತದ ನಿರ್ದೇಶನದಂತೆ ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್, ಕಂದಾಯ ನಿರೀಕ್ಷಕ ಕೆ. ರವಿಶಂಕರ್, ಶಿರ್ವ ಎಸ್ಸೈ ಶ್ರೀಶೈಲ ಮುರುಗೋಡ, ಬೆಳಪು ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಎಚ್.ಆರ್. ರಮೇಶ್, ಗ್ರಾಮಕರಣಿಕ ಗಣೇಶ್ ಕುಮಾರ್, ಅರುಣ್ ಕುಮಾರ್ ಮೊದಲಾದವರು ಭೇಟಿ ನೀಡಿ, ಕಂಟೈನ್ಮೆಂಟ್ ವಲಯವನ್ನು ಪರಶೀಲಿಸಿದರು.