Advertisement
ಮೊದಲು ವಿಧಾನಸಭಾ ಕ್ಷೇತ್ರದ ಕೇಂದ್ರ ಸ್ಥಾನವಾಗಿದ್ದ ಕಾಪು ಈಗ ತಾಲೂಕು ಕೇಂದ್ರ. ಪುರಸಭೆಯಾಗಿ ಬೆಳೆದು ನಿಂತ ಪಟ್ಟಣ. ಗ್ರಾಮ ಪಂಚಾಯತ್ ವ್ಯವಸ್ಥೆಯಿಂದ ಮೇಲ್ದರ್ಜೆಗೇರಿದರೆ ಮೂಲ ಸೌಕರ್ಯಗಳ ಜೋಡಣೆಗೆ ಸುಲಭವಾಗುತ್ತದೆ ಎಂಬ ಭರವಸೆಯೊಂದಿಗೆ ಕಾಪು, ಮಲ್ಲಾರು, ಉಳಿಯಾರಗೋಳಿ ಗ್ರಾ.ಪಂ. ಗಳನ್ನು ಒಗ್ಗೂಡಿಸಿಕೊಂಡು 2015ರಲ್ಲಿ ಕಾಪು ಪುರಸಭೆ ನಿರ್ಮಾಣವಾಗಿತ್ತು. 2016ರಲ್ಲಿ ಪ್ರಥಮ ಚುನಾಯಿತ ಪ್ರತಿನಿಧಿಗಳ ಆಡಳಿತ ಕೂಡ ಅಧಿಕಾರಕ್ಕೆ ಬಂದಿತ್ತು. ಆದರೆ ಪುರಸಭೆಯಾಗಿ ಹತ್ತು ವರ್ಷ ಕಳೆಯುತ್ತಾ ಬಂದರೂ ಹಿಂದಿನ ಗ್ರಾ.ಪಂ. ಕಾಲದಿಂದಲೂ ಕಾಡುತ್ತಿರುವ ಕೊಳಚೆ ಮತ್ತು ಮಲಿನ ನೀರಿನ ಸಮಸ್ಯೆಗೆ ಮಾತ್ರ ಇನ್ನೂ ಶಾಶ್ವತ ಮುಕ್ತಿ ದೊರಕಲೇ ಇಲ್ಲ.
Related Articles
ಕಾಪು ಪುರಸಭೆ ವ್ಯಾಪ್ತಿಯಲ್ಲಿ ಜನಾರ್ದನ ದೇವಸ್ಥಾನ, ವೆಂಕಟರಮಣ ದೇವಸ್ಥಾನ, ಮೂರು ಮಾರಿಯಮ್ಮ ದೇವಸ್ಥಾನಗಳು, ಕಾಳಿಕಾಂಬಾ ಮತ್ತು ವೀರಭದ್ರ ದೇವಸ್ಥಾನಗಳು, ಜೈನ ಬಸದಿ, ಪೊಲಿಪು ಜುಮ್ಮಾ ಮಸೀದಿ ಹಾಗೂ ಕಾರಣಿಕ ಮೆರೆಯುವ ಹಲವು ದೈವಸ್ಥಾನಗಳು, ಮಠ, ಮಂದಿರಗಳು ಮತ್ತು ಪ್ರಾರ್ಥನಾ ಕೇಂದ್ರಗಳಿವೆ.
Advertisement
ಸರಕಾರಿ ಪ್ರಥಮ ದರ್ಜೆ ಕಾಲೇಜು, ಶಾಲಾ ಕಾಲೇಜುಗಳು, ಅಂಗನವಾಡಿ ಕೇಂದ್ರಗಳು, ನೂರಾರು ವಾಣಿಜ್ಯ ಮಳಿಗೆಗಳು, ಹತ್ತಾರು ವಾಣಿಜ್ಯ ಸಂಕೀರ್ಣಗಳು, ಬೃಹತ್ ವಸತಿ ಸಮುತ್ಛಯಗಳಿವೆ. ಪಟ್ಟಣಕ್ಕಿಂತ ಹೊರಗೆ ವಿಶ್ವವಿಖ್ಯಾತ ಕಾಪು ಲೈಟ್‌ಹೌಸ್, ಮನೋಹರಗಡ ಕೋಟೆಯಿದೆ. ಇವೆಲ್ಲಾ ಇರುವ ಪುಟ್ಟ ಪಟ್ಟಣದೊಳಗೆ ಅತೀ ಅಗತ್ಯವಾಗಿ ಇರಬೇಕಾದ ಕೊಳಚೆ ಶುದ್ಧೀಕರಣ ಘಟಕ ಮತ್ತು ಒಳಚರಂಡಿ ಯೋಜನೆಯ ವ್ಯವಸ್ಥೆಗಳೇ ಇಲ್ಲವೆನ್ನುವುದು ಕಾಪುವಿನ ಪಾಲಿಗೆ ಕಪ್ಪು ಚುಕ್ಕೆ, ಅಭಿವೃದ್ಧಿಗೆ ಹಿನ್ನಡೆ.
ಮಳೆ ನೀರ ತೋಡಲ್ಲೇ ಮಲಿನ ನೀರುಇಲ್ಲಿ ಕೊಳಚೆ ಮತ್ತು ಮಲಿನ ನೀರು ಹರಿದು ಹೋಗಲು ಸಮರ್ಪಕ ಚರಂಡಿಗಳಿಲ್ಲ. ಮಳಿಗೆಗಳು, ಹೊಟೇಲ್ ಮತ್ತು ವಸತಿ ಸಮುತ್ಛಯಗಳು, ಧಾರ್ಮಿಕ ಕೇಂದ್ರಗಳ ಕೊಳಚೆ ನೀರು ಕಾಪು ಪೇಟೆ ಮತ್ತು ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿರುವ ಮಳೆ ನೀರು ಹರಿಯುವ ತೋಡಿನಲ್ಲೇ ಹರಿದು ಹೋಗುತ್ತಿದೆ. ತೋಡುಗಳೇ ಖಾಸಗಿಯವರಿಗೆ ಕೊಳಚೆ ನೀರು ಬಿಡುವ ಪೈಪ್‌ಲೈನ್‌ಗಳಾಗಿವೆ. ಹಗಲು, ರಾತ್ರಿಯೆನ್ನದೇ ಹರಿದು ಬರುವ ಕೊಳಚೆ ನೀರು ಕಾಪು, ಮಲ್ಲಾರು, ಉಳಿಯಾರಗೋಳಿ ಗ್ರಾಮಗಳನ್ನು ದುರ್ನಾತ ಬೀರುವ ಮತ್ತು ಸೊಳ್ಳೆ ಉತ್ಪಾದನ ಕೇಂದ್ರವನ್ನಾಗಿಸಿವೆ. ಕಾಪು: ಜನಸಂಖ್ಯೆ, ಔದ್ಯಮಿಕ ನೋಟ
– ಪುರಸಭೆ ವ್ಯಾಪ್ತಿ:
23.43 ಚದರ ಕಿ. ಮೀ.
– ಜನಸಂಖ್ಯೆ : 21,887 + (2011ರ ಜನಗಣತಿಯಂತೆ)
– ಕಟ್ಟಡಗಳ ಸಂಖ್ಯೆ: 8,934
– ಪುರಸಭೆ ಮತ್ತು ಸುತ್ತಮುತ್ತಲಿನ ಅಂಗಡಿಗಳು: 739+ 390
– ಹೊಟೇಲ್‌ಗಳ ಸಂಖ್ಯೆ: 40+18
– ಕಮರ್ಷಿಯಲ್ ಕಾಂಪ್ಲೆಕ್ಸ್‌ಗಳು: 25+11
– ಪುರಸಭೆ ಮತ್ತು ಸುತ್ತಲಿನ ವಸತಿ ಸಮುತ್ಛಯ: 30+9 ಎಸ್‌ಟಿಪಿ, ಯುಜಿಡಿ ಇಲ್ಲದೆ ದುರ್ನಾತ
ಕಾಪು ಪೇಟೆಯಲ್ಲಿ 300ಕ್ಕೂ ಅಧಿಕ ಅಂಗಡಿಗಳಿವೆ, ಹತ್ತಾರು ವಾಣಿಜ್ಯ ಸಂಕೀರ್ಣಗಳಿವೆ. ಕ್ಯಾಂಟೀನ್‌ಗಳ ಸಹಿತ ಹತ್ತಕ್ಕೂ ಅಧಿಕ ಹೊಟೇಲ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿವೆ. ವಸತಿ ಸಮುತ್ಛಯಗಳಿವೆ. ಆದರೆ ಇವ್ಯಾವುದರಲ್ಲೂ ಸರಕಾರಿ ನಿಯಮಾವಳಿಯಂತೆ ಸೂಕ್ತ ಎಸ್‌ಟಿಪಿ, ಯುಜಿಡಿ ವ್ಯವಸ್ಥೆಗಳಿಲ್ಲ. ಒಂದೆರಡು ಕಟ್ಟಡಗಳ ಮಾಲಕರೇ ವಿಶೇಷ ಮುತುವರ್ಜಿ ವಹಿಸಿ ಸಂಗ್ರಹವಾಗುವ ತ್ಯಾಜ್ಯ, ಮಲಿನ ನೀರನ್ನು ಪಂಪ್ ಮೂಲಕ ಮೇಲೆತ್ತಿ ಬೇರೆ ಕಡೆಗೆ ಕೊಂಡೊಯ್ದು ಸುರಿಯತ್ತಾರೆಯೇ ವಿನಃ ಉಳಿದೆಲ್ಲ ಕಡೆಗಳಿಂದಲೂ ಕೊಳಚೆ ನೀರು ಬೀಡು ಬದಿಗೆ, ಮಲ್ಲಾರು ಹೊಳೆ, ಮರ್ಕೋಡಿ ಹೊಳೆ ಮತ್ತು ಅದರ ಸುತ್ತಮುತ್ತಲಿನ ಗದ್ದೆಗಳಿಗೆ ಹರಿದು ಹೋಗುತ್ತಿದೆ. -ರಾಕೇಶ್ ಕುಂಜೂರು