Advertisement

ಕಾಟಿ ಹಾವಳಿಯಿಂದ ಗ್ರಾಮಸ್ಥರು ಕಂಗಾಲು

12:30 AM Feb 17, 2019 | |

ಮಣಿಪಾಲ: ಹಿರಿಯಡಕ ಪಂಚನಬೆಟ್ಟುವಿನ ಕುಳೇದು ಪರಿಸರದಲ್ಲಿ ಕಾಟಿ ಹಾವಳಿ ಮಿತಿಮೀರಿದ್ದು ಜನರಲ್ಲಿ ಆತಂಕ ಮನೆಮಾಡಿದೆ. ಕಾಟಿಯೊಂದು ಕುಳೆದುವಿನ ರಾಧಾ ನಾಯಕ್‌ ಅವರ ಮನೆಯ ಹಸುವಿಗೆ ತಿವಿದು ಘಾಸಿ ಮಾಡಿದೆ. 

Advertisement

ಹಗಲಿನಲ್ಲೂ ಕಾಟಿಗಳು ನಿರ್ಭೀತಿಯಿಂದ ಸಂಚರಿಸುವುದರಿಂದ ಈ ಪ್ರದೇಶದ ಮಕ್ಕಳು, ಮಹಿಳೆಯರು ಆತಂಕದಲ್ಲೇ ದಿನ ದೂಡುವಂತಾಗಿದೆ. ಈ ಪ್ರದೇಶದಲ್ಲಿ ಹೈನುಗಾರಿಕೆ ಹಾಗೂ ಕೃಷಿಯನ್ನೇ ನಂಬಿ ದಿನ ಸಾಗಿಸುತ್ತಿರುವವರಿದ್ದು  ಕಾಟಿಗಳಿಂದ ರಾಸುಗಳಿಗೆ ಘಾಸಿ ಅಥವಾ ಪ್ರಾಣಾಪಾಯ ಉಂಟಾದಲ್ಲಿ ಸಂಭವಿಸುವ ನಷ್ಟವನ್ನು ಭರಿಸುವ ಶಕ್ತಿ ಅವರಲ್ಲಿಲ್ಲ. 

ಎಲ್ಲೆಲ್ಲಿ ಸಮಸ್ಯೆ
ಬೊಮ್ಮರಬೆಟ್ಟು ಮತ್ತು ಎರಲ್ಪಾಡಿ ವ್ಯಾಪ್ತಿಯಲ್ಲಿ ಕಾಟಿಗಳ ಹಾವಳಿ ಮಿತಿಮೀರಿದೆ. ಪಂಚನಬೆಟ್ಟು, ಏಳುಪಾಲು, ಸಾಗ, ನಡುಗುಡ್ಡೆ, ಸಾಣೆಕಲ್ಲು, ಎರಲ್ಪಾಡಿ ಪ್ರದೇಶದ ಜನರು ಆತಂಕದಲ್ಲಿದ್ದಾರೆ.

ಕಾಡುಪ್ರಾಣಿ ಬಾಧೆ
ಕಾಡಿನಲ್ಲಿ ಆಹಾರವಿಲ್ಲದೆ ನಾಡಿಗಿಳಿಯುತ್ತಿರುವ ಕಾಟಿ, ಹಂದಿ, ಮಂಗ, ನವಿಲಿನ ಬಾಧೆಯಿಂದ ಕೃಷಿಕರು ಕಂಗೆಟ್ಟು ಹೋಗಿದ್ದಾರೆ. ಕೃಷಿ ನಷ್ಟವಾಗುತ್ತಿದ್ದು ಸಾಲದಲ್ಲಿ ಮುಳುಗುವಂತಾಗಿದೆ. ಚಿರತೆಗಳ ಉಪಟಳವೂ ಇದ್ದು ಅಪಾಯದ ಸಾಧ್ಯತೆಯೂ ಇದೆ. 

ಅರಣ್ಯ ಇಲಾಖೆಗೆ ಪತ್ರ
ಕಾಟಿಗಳ ಹಾವಳಿಯಿಂದ ದನಗಳ ಮೇಲೆ ದಾಳಿ ಆಗುತ್ತಿರುವ ಬಗ್ಗೆ ಹಾಗೂ ಉಪಟಳದ ಬಗ್ಗೆ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದು ಕ್ರಮಕ್ಕೆ ವಿನಂತಿಸಲಾಗಿದೆ ಎಂದು ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷೆ ಸವಿತಾ ನಾಯಕ್‌, ಪಿಡಿಒ ರಾಜಶೇಖರ್‌ ರಾವ್‌ ತಿಳಿಸಿದ್ದಾರೆ. 

Advertisement

ನೀರೆ ಮೀಸಲು ಅರಣ್ಯದಿಂದ ಕಾಟಿಗಳು ಕೆಳಗಿಳಿದು ಊರಿನೊಳಗೆ ಬರುತ್ತಿವೆ.ಇವುಗಳನ್ನು ಮತ್ತೆ ಮೀಸಲು ಅರಣ್ಯಕ್ಕೆ ಸೇರಿಸುವ ಕಾರ್ಯಾಚರಣೆ ನಡೆಸಲಾಗುವುದು. ಕಾಡುಪ್ರಾಣಿಗಳಿಂದ ದನಗಳಿಗೆ ಘಾಸಿಯಾದರೆ ಅಥವಾ ಸಾವನ್ನಪ್ಪಿದರೆ ಇಲಾಖಾ ನಿಯಮಾ ನುಸಾರ ಪರಿಹಾರ ನೀಡಲು ಅವಕಾಶ ಇದೆ. 
– ಜಯರಾಮ್‌,ಅರಣ್ಯಾಧಿಕಾರಿ,ಹಿರಿಯಡ್ಕ

ಪಶುಸಂಗೋಪನೆ ಇಲಾಖೆ ವೈದ್ಯಾಧಿಕಾರಿಗಳು ಕಾಡುಪ್ರಾಣಿಗಳಿಂದ ಘಾಸಿಯಾದ ದನಗಳನ್ನು ಪರಿಶೀಲನೆ ನಡೆಸಿ ವರದಿ ನೀಡುತ್ತಾರೆ. ಈ ವರದಿ ಆಧಾರದಲ್ಲಿ ಅರಣ್ಯ ಇಲಾಖೆಯಿಂದ ಪರಿಹಾರ ಪಡೆಯಬಹುದು. ಅಥವಾ ದನಗಳಿಗೆ ವಿಮೆ ಮಾಡಿಸಿದ್ದಲ್ಲಿ ಅದನ್ನು ಕ್ಲೇಮು ಮಾಡಬಹುದು. 
– ಡಾ| ಸರ್ವೋತ್ತಮ ಉಡುಪ, 
ಉಪ ನಿರ್ದೇಶಕ, ಪಶು ಸಂಗೋಪನಾ ಇಲಾಖೆ 

Advertisement

Udayavani is now on Telegram. Click here to join our channel and stay updated with the latest news.

Next