ಕನ್ನಡದಲ್ಲಿ ಈಗೀಗ ವಿಭಿನ್ನ ಶೀರ್ಷಿಕೆಗಳೊಂದಿಗೆ ಬರುತ್ತಿರುವ ಚಿತ್ರಗಳ ಸಾಲಿಗೆ “ಕಟ್ಟುಕಥೆ’ ಹೊಸ ಸೇರ್ಪಡೆ. ಈಗಾಗಲೇ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಬಿಡುಗಡೆಗೆ ಅಣಿಯಾಗಿದೆ. ಈ ಚಿತ್ರಕ್ಕೆ “ಕಟ್ಟುಕಥೆ’ ಎಂಬ ಶೀರ್ಷಿಕೆ ಇಟ್ಟಿದ್ದರೂ, “ಎ ರಿಯಲ್ ಸ್ಟೋರಿ’ ಎಂಬ ಅಡಿಬರಹವಿದೆ. ರಾಜ್‌ಪ್ರವೀಣ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಈಗಂತೂ ಯಾರಾದರೂ, ಒಂದು ವಿಷಯ ಹೇಳಿದರೆ, ಅದು ನಿಜವೋ, ಸುಳ್ಳೋ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಅದರಲ್ಲೂ “ಕಟ್ಟುಕಥೆ’ ಇರಬಹುದೇನೋ ಎಂಬ ಮಾತುಗಳೇ ಹೆಚ್ಚು. ಇದು ನಿಜ ಬದುಕಿನ ಒಂದು ಎಳೆ ಇಟ್ಟುಕೊಂಡು ಕಥೆ ಕಟ್ಟಿದ್ದಾರೆ ನಿರ್ದೇಶಕರು. ನಾಯಕ ಇಲ್ಲಿ ಕಿವುಡ. ಅವನು ಹುಡುಗಿಯೊಬ್ಬಳನ್ನು ಪ್ರೀತಿಸುತ್ತಾನೆ. ಏನೋ ಹೇಳಿದರೆ, ಬೇರೆಯ್ದೆà ಅರ್ಥ ಮಾಡಿಕೊಂಡು, ಇಲ್ಲದ ಅವಾಂತರ ಹುಟ್ಟುಹಾಕುತ್ತಾನೆ. ಆಮೇಲೆ ಏನೆಲ್ಲಾ ನಡೆದುಹೋಗುತ್ತೆ ಎಂಬುದರ ಹೂರಣ “ಕಟ್ಟು ಕಥೆ’ಯಲ್ಲಿದೆ ಎಂಬುದು ನಿರ್ದೇಶಕರ ಹೇಳಿಕೆ.
ಚಿತ್ರದಲ್ಲಿ ರಾಜೇಶ್ ನಟರಂಗ ಅವರಿಗೊಂದು ಮುಖ್ಯವಾದ ಪಾತ್ರವಿದೆ. “ಕೆಂಡ ಸಂಪಿಗೆ’ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದರಿಂದ ಬಹುತೇಕ ಅಂತಹ ಪಾತ್ರಗಳೇ ಅವರನ್ನು ಹುಡುಕಿ ಬಂದವಂತೆ. ಇಲ್ಲೂ ಅಂಥದ್ದೊಂದು ಪಾತ್ರವಿದೆ. ಈಗಿನ ವ್ಯವಸ್ಥೆ ಕುರಿತಾದ ಚಿತ್ರಣ ಇಲ್ಲಿದೆ. ನೋಡುವ ಪ್ರೇಕ್ಷಕರಿಗೆ ಕ್ಲೈಮ್ಯಾಕ್ಸ್ ಏನೆಂದು ಗೊತ್ತಾದರೂ, ಅಲ್ಲಿನ ಪಾತ್ರಗಳಿಗೆ ಮಾತ್ರ ಗೊತ್ತಾಗಲ್ಲ. ಇಲ್ಲಿನ ವಿಶೇಷವೆಂದರೆ, ಎಲ್ಲಾ ಪಾತ್ರಗಳ ಹೆಸರು ಭಿನ್ನವಾಗಿವೆ ಎಂಬುದು ಅವರ ಮಾತು.
ಮಸ್ತಿ ಇಲ್ಲಿ, ಸರಳ ಮಾತುಗಳನ್ನು ಪೋಣಿಸಿದ್ದಾರಂತೆ. ಸೂರ್ಯ ಚಿತ್ರದ ನಾಯಕ. ಅವರಿಗೆ ಸ್ವಾತಿ ಕೊಂಡೆ ನಾಯಕಿ. ಬಹುತೇಕ ಇಲ್ಲಿ ರಂಗಭೂಮಿ ಕಲಾವಿದರು ಕಾಣಿಸಿಕೊಂಡಿದ್ದಾರಂತೆ. ಮಿತ್ರ ಅವರಿಗೆ “ರಾಗ’ ನಂತರ ಬಂದ ಅವಕಾಶ ಇದಂತೆ. ಇಲ್ಲೊಂದು ವಿಶೇಷ ಪಾತ್ರವಿದ್ದು, ಅದನ್ನು ಸಿನಿಮಾದಲ್ಲೇ ನೋಡಬೇಕು ಎಂಬುದು ಅವರ ಮಾತು.
ಮಹದೇವ ಮೈಸೂರು ಈ ಚಿತ್ರದ ನಿರ್ಮಾಣ ಮಾಡಿದ್ದಾರೆ. ಅವರಿಗೆ ನಿರ್ದೇಶಕರು ಏನು ಮಾಡುತ್ತಾರೆ ಎಂಬ ಬಗ್ಗೆ ಗೊಂದಲವಿತ್ತಂತೆ. ಆದರೆ, ಈಗ ಹೇಗೆಲ್ಲಾ ಬಂದಿದೆಯಲ್ಲಾ ಅಂತ ಖುಷಿಯಾಗಿದ್ದಾರಂತೆ ನಿರ್ಮಾಪಕರು. ಇನ್ನು, ಈ ಚಿತ್ರದಿಂದ ಅವರು ಸಾಕಷ್ಟು ತಾಳ್ಮೆ ಕಲಿತಿದ್ದಾರಂತೆ. ಧಾರಾವಾಹಿಯೊಂದನ್ನು ನಿರ್ಮಿಸುವ ಯೋಚನೆ ಇದ್ದ ಸವಿತಾ ಅವರು, ಮಹದೇವ ಅವರನ್ನು ಭೇಟಿ ಮಾಡಿ, ಈ ಕಥೆ ಹೇಳಿದಾಗ, ಅವರು ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದಾರಂತೆ.