ನಾರಾಯಣ ಹೆಬ್ಬಾರ್ ಸರ್ವಸ್ವವನ್ನು ಕಳೆದುಕೊಂಡ ಮೇಲೂ, ಗುಡಿಸಲಿನಲ್ಲಿ ವಾಸವಿದ್ದರೂ “ಲ್ಯಾಂಡ್‌ಲಾರ್ಡ್’ ಎಂದು ನಮೂದಿಸುವುದನ್ನು ಬಿಟ್ಟಿರದವರು. ಪತ್ನಿ ಸೀತಮ್ಮನವರಿಗೆ ಮೊದಲ ಮಗು (ವೆಂಕಟರಮಣ ಯಾನೆ ಅಪ್ಪು) ಜನಿಸಿದಾಗ, ಮಕ್ಕಳಿಲ್ಲದ ಅಣ್ಣ ಸೀತಾರಾಮ ಹೆಬ್ಬಾರ್ “ಇನ್ನೊಂದು ಮಗು ಹುಟ್ಟಿದರೆ “ಅಪ್ಪು’ವನ್ನು ನನಗೆ ಕೊಡು” ಎಂದರು. ಎರಡು ವರ್ಷದ ಬಳಿಕ ಸೀತಾರಾಮ “ಮಕ್ಕಳಿಲ್ಲದ ನಮಗೆ ಯಾವ ಕರ್ಮಕ್ಕೆ ಮನೆ? ನೀನೂ ಅಪ್ಪು ಜತೆ ನಮ್ಮಲ್ಲೇ ಇರು’ ಎಂದಾಗ ಅಣ್ಣನ ಮನೆ ಸೇರಿದರು. ಅಲ್ಲಿ ಎರಡನೆಯ ಮಗು ಜನ್ಮ ತಾಳಿತು. ಮಕ್ಕಳಿಗೂ ಹೇಸಿಗೆಗೂ, ಹೇಸಿಗೆಗೂ ಜಗಳಕ್ಕೂ ನಂಟು. ಹೆಂಗಸರ ಜಗಳ ತಾಳಲಾಗದೆ ನಾರಾಯಣ ಹೊರಬಿದ್ದು ದೇವಣ್ಣ ಪೈಯವರ ಸ್ಥಳದಲ್ಲಿ ಗುಡಿಸಲು ಕಟ್ಟಿಕೊಂಡರು, ಮೂರನೆಯ ಮಗುವೂ ಜನಿಸಿತು.ನಾರಾಯಣ ಹೊರಬಿದ್ದರೂ ಸೀತಾರಾಮ ಅಪ್ಪುವನ್ನು ದತ್ತಕ್ಕೆ ಇಟ್ಟುಕೊಂಡರು.
ದೊಡ್ಡಪ್ಪನ ಮನೆಯಲ್ಲಿ ಅಪ್ಪು ಸುಖವಾಗಿದ್ದ. ಸೀತಾರಾಮರಿಗೆ ಕಾಯಿಲೆ ಅಂಕುರಿಸಿ ಉದ್ಯಾವರದಲ್ಲಿದ್ದ ಮಾವನ ಮನೆಗೆ ಹೋದರು, ಸಾವೂ ಸಮೀಪಿಸುತ್ತಿತ್ತು. ಅತ್ತ ಪತ್ನಿ ರಾಧಮ್ಮನ ಇಬ್ಬರು ಸಹೋದರರಿಗೆ ಭಾವ ಬದುಕುವುದಿಲ್ಲ ಎಂದು ಗೊತ್ತಾದಾಗ ಹೆಬ್ಬೆಟ್ಟು ಹಾಕಿಸಿಕೊಂಡು ಆಸ್ತಿ ಬರೆದುಕೊಂಡರೆ, ಇತ್ತ ರಾಧಮ್ಮ ದತ್ತಕವನ್ನು ನಿರಾಕರಿಸಿದರು.
ನಾರಾಯಣರು ನ್ಯಾಯಾಲಯದ ಮೆಟ್ಟಿಲು ಹತ್ತಿದರು, ವ್ಯಾಜ್ಯ ಮೂರು ವರ್ಷ ನಡೆಯಿತು. ಮೊದಲೇ ಬಡತನ, ಬರೋಬ್ಬರಿ 300 ಸಾಕ್ಷಿಗಳ ಕೋರ್ಟ್ ವ್ಯಾಜ್ಯ ಬೇರೆ. ನ್ಯಾಯಾಧೀಶರಿಗೆ ಸಹಾನುಭೂತಿ ಇತ್ತಾದರೂ ಪುರಾವೆ ಇಲ್ಲವಲ್ಲ! ಮೇಲಾಗಿ “ಅಪ್ಪುವನ್ನು ಗಂಡನ ತಮ್ಮನ ಮಗನೆಂದು ಸಾಕಿದ್ದೇ ವಿನಾ ಯಾವ ದತ್ತಕ್ಕೂ ತೆಗೆದುಕೊಳ್ಳಲಿಲ್ಲ’ ಎಂದು ರಾಧಮ್ಮ ಪ್ರಮಾಣ ಮಾಡಿಯೇ ಬಿಟ್ಟರು. ಇದನ್ನು ಕೇಳಿದ ಸೀತಮ್ಮರ ಬಾಯಿಂದ “ಸುಳ್ಳು ಹೇಳುವ ನಿನ್ನ ನಾಲಗೆ, ಹುಳ ಹಿಡಿದು ಅನ್ನ ನೀರಿಲ್ಲದೆ ಹಾದಿಯಲ್ಲಿ ಬಿದ್ದು ಸಾಯುತ್ತೀ’ ಎಂಬ ಮಾತು ಹೊರಬಿತ್ತು, ಕೋರ್ಟಿನ ಜಗಲಿಗೆ ಅವರ ಕೈ ಅಪ್ಪಳಿಸಿಯೇ ಬಿಟ್ಟಿತು.
ರಾಧಮ್ಮನ ತಮ್ಮಂದಿರು ಜುಗಾರಿಕೋರರಾಗಿದ್ದರಿಂದ ಲಪಟಾಯಿಸಿದ ಆಸ್ತಿ ಬಹಳ ಕಾಲ ಉಳಿಯಲಿಲ್ಲ. ತಮ್ಮಂದಿರ ಮನೆಯಲ್ಲಿ ರಾಧಮ್ಮ ಹಂಗಿನ ನರಕದಲ್ಲಿರಬೇಕಾಯಿತು. ಊಟಕ್ಕೆ ಉಡುಪಿ ಶ್ರೀಕೃಷ್ಣಮಠದ ಭೋಜನಶಾಲೆಗೆ ಬರಬೇಕಾಯಿತು. ಉದ್ಯಾವರದಿಂದ ಉಡುಪಿಗೆ ನಡೆದು ಬಂದು ಹಿಂದಿರುಗುವಾಗ ಬಿಸಿಲಿನ ಉರಿಗೆ ದಾರಿಯಲ್ಲಿರುವ ಬಲ್ಲಾಳರ ಮನೆಯಲ್ಲಿ ಮಜ್ಜಿಗೆ, ನೀರು ಕೇಳಿ ಕುಡಿದು ಹೋ ಗುತ್ತಿದ್ದರು. “ಅಪ್ಪು ಇದ್ದಿದ್ದರೆ ನನ್ನ ಗತಿ ಹೀಗಾಗುತ್ತಿತ್ತೆ? ನನ್ನ ಪ್ರಾರಬ್ಧ’ ಎಂದು ಹಲುಬುತ್ತಿದ್ದರು. ಎಷ್ಟೋ ದಿನ ರಾಧಮ್ಮ ಕಾಣಿಸದೆ ಹೋದರು. ಬಲ್ಲಾಳರು ಏನಾಯಿತೆಂದು ವಿಚಾರಿಸಿದರು. ಭೋಜನ ಶಾಲೆಯಿಂದ ಹಿಂದಿರುಗುವಾಗ ಕಿನ್ನಿಮೂಲ್ಕಿ ಹತ್ತಿರ ಗಟಾರದಲ್ಲಿ ಬಿದ್ದು ಕೊಳೆತು ಹೋದ ರಾಧಮ್ಮನ ದೇಹವನ್ನು ಪುರಸಭೆಯವರು ಎತ್ತಿ ಸುಡಬೇಕಾಯಿತಂತೆ. ಈ ಸುದ್ದಿ ಕೇಳಿದಾಕ್ಷಣವೇ ಸೀತಮ್ಮ “ಅಯ್ಯೋ ನನ್ನ ಸುಟ್ಟ ಬಾಯಿಯೇ!’ ಎಂದು ಗದ್ಗದಿತರಾದರಂತೆ…
ಇಂಥದ್ದೆ ಕಥೆ ಪುರಾಣಗಳಲ್ಲಿ ಕೇಳಿದರೆ “ಇದೆಲ್ಲ ಕಟ್ಟುಕಥೆ’ ಎಂದು ಮೂಗುಮುರಿಯಲು ವಿಶೇಷ ಜ್ಞಾನ ಬೇಕೆ? ನಾರಾಯಣ ಹೆಬ್ಬಾರರಿಗೆ ಉಡುಪಿ ಜಿಲ್ಲೆಯ ಕಟ್ಟಿಂಗೇರಿಯ ಗುಡಿಸಲಿನಲ್ಲಿ ಹುಟ್ಟಿದ ಮೂರನೆಯ ಮಗುವೇ ಜಾಗತಿಕ ಸ್ತರದ ಕಲಾಪ್ರಪಂಚದಲ್ಲಿ ಅಚ್ಚಳಿಯದೆ ಚಿರಸ್ಥಾಯಿಯಾದ ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್ (ಕೆ.ಕೆ.ಹೆಬ್ಬಾರ್: 15.6.1911- 26.03.1996), ನಮ್ಮನ್ನಗಲಿ 27 ವರ್ಷ ಆಗುತ್ತಿದೆ. ರಾಧಮ್ಮನಿಗೆ ಮಜ್ಜಿಗೆ ಕೊಡುತ್ತಿದ್ದ ಮನೆಯ ಎ.ಪಿ.ಬಲ್ಲಾಳರೇ ಮುಂದೊಂದು ದಿನ ಕೆ.ಕೆ.ಹೆಬ್ಬಾರರ ಮಾವನಾಗುತ್ತಾರೆ. ಉಡುಪಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ| ಕು.ಶಿ.ಹರಿದಾಸ ಭಟ್ ಬರೆದ “ಕೆ.ಕೆ.ಹೆಬ್ಬಾರ್- ಕಲೆ ಮತ್ತು ಬದುಕು’ ಆತ್ಮಕಥನದ ಮೊದಲ ಭಾಗವಿದು.
ಮಾದರಿ ಮೇಸ್ಟ್ರ ಬೆತ್ತದ
ರುಚಿ ಹೇಗಿರಬೇಕು?
ಈ ಅಂಕಣದಂತಹ ಘಟನೆಗಳು ಕಾಲಗರ್ಭದಲ್ಲಿ ನಡೆಯುತ್ತಲೇ ಇರುತ್ತವೆ. ನಾವು ತರಾತುರಿಯ ಘಟನೆಗಳನ್ನು ನೋಡುತ್ತೇವೆ ವಿನಾ ತೀರಾ ಮುಂದಕ್ಕೂ, ತೀರಾ ಹಿಂದಕ್ಕೂ ಯೋಚಿಸುವುದಿಲ್ಲ, ನಿತ್ಯದ ರಗಳೆಗಳೇ (ಅ-ಆ)ಸುಖ ಕೊಡುತ್ತವೆಯಲ್ಲ? ನಮ್ಮದೇ ಸುದೀರ್ಘ ಅನುಭವಗಳನ್ನು ಅವಲೋಕಿಸಿದರೆ ಇಂತಹ ಕ್ರಿಯೆ- ಪ್ರತಿಕ್ರಿಯೆಗಳು
(ಕರ್ಮಸಿದ್ಧಾಂತ?) ಢಾಳಾಗಿ ಕಾಣುತ್ತವೆ. ಹಿಂದೆ ಹೀಗಾಗಿದ್ದರೆ ಮುಂದೆಯೂ ಇದೇ ಸೂತ್ರ ಮುಂದುವರಿಯದೆ ಇರುತ್ತದೆಯೆ? ಇತಿಹಾಸ ಪುನರಾವರ್ತನೆಯಾಗುತ್ತದೆ ಎಂಬ ಮಾತೂ, ಇಂತಹ ಪಾತ್ರಗಳನ್ನು ಕಂಡ ಬಳಿಕವೂ ಬದಲಾಗುತ್ತೇವೆಯೆ ಎಂಬ ಪ್ರಶ್ನೆಯೂ ಜತೆಜತೆಗೇ ಸಾಗುತ್ತದೆ… ಕಥಾನಕದ ರಾಧಮ್ಮ ಮತ್ತು ಸಹೋದರರ ಪಾತ್ರಗಳು ನಾವಾಗದಂತೆ, ಒಂದು ವೇಳೆ ಹಾಗಾದರೆ ಮುಂದೇನಾಗುತ್ತದೆ ಎಂಬ (ಬೀಜರೂಪಿ) ಚಿಂತನೆಗೆ ಸ್ವ-ಅನುಭವಗಳು ಸಾಕು. ನಮ್ಮಿಂದ ಇಂತಹ ಪಾತ್ರಗಳಾಗಬಾರದೆಂದು ನಿಸರ್ಗ ಈ ಪಾತ್ರಗಳನ್ನು ಸೃಷ್ಟಿಸುತ್ತದೆಯೋ…? ಇಲ್ಲವಾದರೆ ಎಲ್ಲ ಧರ್ಮಗಳಲ್ಲಿರುವ ಹೀರೋ- ವಿಲನ್ (ಪಾಸಿಟಿವ್- ನೆಗೆಟಿವ್) ಪಾತ್ರಗಳ ಜತೆಗೆ ನಾರಾಯಣ, ಸೀತಾರಾಮ, ರಾಧಮ್ಮ, ಸೀತಮ್ಮರನ್ನೂ, ಕೆ.ಕೆ.ಹೆಬ್ಬಾರ್, ಕು.ಶಿ. ಹರಿದಾಸ ಭಟ್ಟರನ್ನೂ ಅಲ್ಲಗಳೆಯಬೇಕಾಗುತ್ತದೆ. ಒಂದನ್ನು ಸ್ವೀಕರಿಸಿ ಇನ್ನೊಂದನ್ನು ತಿರಸ್ಕರಿಸುವುದು ಹೇಗೆ? ಆದರ್ಶ ಮೇಸ್ಟ್ರ “ಬೆತ್ತದ ರುಚಿ’ ಹೇಗಿರಬೇಕು? ನಿಷ್ಪಕ್ಷಪಾತವೇ…
-ಮಟಪಾಡಿ ಕುಮಾರಸ್ವಾಮಿ