ಉಡುಪಿ: ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪೂರ್ವಭಾವಿಯಾಗಿ ನಡೆಯುವ ಕಟ್ಟಿಗೆ ಮುಹೂರ್ತದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮುಂಡಾಳ ಸಮಾಜದವರಿಂದ ಸೇವೆ ಸಲ್ಲುತ್ತಿದೆ. ಗುರುವಾರ ನಡೆದ ಅದಮಾರು ಮಠ ಪರ್ಯಾಯದ ಕಟ್ಟಿಗೆ ಮುಹೂರ್ತದಲ್ಲಿ ಮುಂಡಾಳ ಸಮಾಜದ ಪ್ರಮುಖರು ಸೇರಿ ಮುಹೂರ್ತವನ್ನು ನಡೆಸಿಕೊಟ್ಟರು.
ಕಡಿಯಾಳಿ ಕುಂಜಿಬೆಟ್ಟಿನಲ್ಲಿರುವ ಬಬ್ಬುಸ್ವಾಮಿಯು ಹಿಂದಿನ ಕಾಲದಲ್ಲಿ ಶ್ರೀಕೃಷ್ಣ ಮಠದ ಕಟ್ಟಿಗೆರಥವಿರುವ ಜಾಗದಲ್ಲಿತ್ತು. ಕೋಲ ಇತ್ಯಾದಿಗಳು ನಡೆಯುವಾಗ ಸ್ಥಳದ ಕೊರತೆಯಾಗುತ್ತದೆಂದು ಕಡಿಯಾಳಿ ಕುಂಜಿಬೆಟ್ಟಿಗೆ ಸ್ಥಳಾಂತರಗೊಂಡಿತು ಎಂದು ತಿಳಿದು ಬರುತ್ತದೆ. ಇಲ್ಲಿ ಬಬ್ಬುಸ್ವಾಮಿಯನ್ನು ಅರ್ಚಿಸುವ ಮುಂಡಾಳ ಸಮಾಜದವರು ಅದರ ಸಂಕೇತವಾಗಿ ಕಟ್ಟಿಗೆಯ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ.
ಹಿಂದೆ ಕುಂಟಲಕಾಡಿನಿಂದ ಕಟ್ಟಿಗೆಯನ್ನು ತರಲಾಗುತ್ತಿತ್ತು. ಈಗ ಮಠದವರು ವ್ಯವಸ್ಥೆ ಮಾಡುವ ಕಟ್ಟಿಗೆಯ ಮೆರವಣಿಗೆ ನಡೆಯುತ್ತಿದೆ. ನಮ್ಮ ಪೂರ್ವಜರು ಅನಾದಿ ಕಾಲದಿಂದ ಇದನ್ನು ಮಾಡುತ್ತಿದ್ದರು. ನಮ್ಮ ತಾತನವರು ಇದರ ಬಗ್ಗೆ ತಿಳಿಸುತ್ತಿದ್ದರು ಎನ್ನುತ್ತಾರೆ ಗುರಿಕಾರ ಶೇಷು ಮತ್ತು ಒತ್ತು ಗುರಿಕಾರ ವಾಸು ಬಿ. ಅವರು. ಕಟ್ಟಿಗೆ ಮುಹೂರ್ತ ನಡೆಯುವ ಮುನ್ನ ದೇವತಾ ಪ್ರಾರ್ಥನೆ ಬಳಿಕ ಕಟ್ಟಿಗೆಯ ಮೆರವಣಿಗೆ ನಡೆದು ಸಂಪ್ರದಾಯದಂತೆ ಮುಹೂರ್ತ ನಡೆಸಲಾಯಿತು. ಅದಮಾರು ಮಠದ ಪರ್ಯಾಯೋತ್ಸವ ಜ. 18ರಂದು ನಡೆಯಲಿದೆ. ಈಗಾಗಲೇ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ ನಡೆದಿದ್ದು ಮೂರನೆಯದಾದ ಕಟ್ಟಿಗೆ ಮುಹೂರ್ತ ಗುರುವಾರ ನಡೆಯಿತು. ಮುಂದೆ ಭತ್ತದ ಮುಹೂರ್ತ ನಡೆಯಲಿದೆ.
ಶ್ರೀಕೃಷ್ಣ ಮಠದಲ್ಲಿ ಅನ್ನ ಸಂತರ್ಪಣೆಗೆ ಬೇಕಾಗುವ ಕಟ್ಟಿಗೆಯನ್ನು ಪೇರಿಸಿಡಲು ಕಟ್ಟಿಗೆ ಸಂಗ್ರಹದ ಮುಹೂರ್ತ ಇದಾಗಿದೆ. ಕಟ್ಟಿಗೆ ಮುಹೂರ್ತಕ್ಕೆ ಮುನ್ನ ಅದಮಾರು ಮಠದಿಂದ ಸುಮಾರು 2,000 ಸಸಿಗಳನ್ನು ಖರೀದಿಸಿ ಮಠದ ಜಾಗ ಮತ್ತು ಆಸಕ್ತ ಸಂಘ ಸಂಸ್ಥೆಗಳ ಆವರಣದಲ್ಲಿ ನೆಡಲಾಗಿದೆ. ಈಗಾಗಲೇ ಇರುವ ಕಟ್ಟಿಗೆ ರಥವನ್ನು ಅದಮಾರು ಮಠದವರು ಖರೀದಿಸಿ ಅದನ್ನೇ ಪರ್ಯಾಯದೊಳಗೆ ಅಲಂಕರಿಸಲಿದ್ದಾರೆ.