ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿಯ ಗ್ರಾಮದೇವತೆಗಳಾದ ಕೋಡಿಗಣಪತಿ ಹಾಗೂ ಸಿಡಿಯಮ್ಮ ತಾಯಿ ದೇವಸ್ಥಾನದ ಭೂಮಿಯನ್ನು ವಕ್ಫ್ ಮಂಡಳಿಗೆ ಅಕ್ರಮ ಖಾತೆ ಮಾಡಿ, ಸ್ಮಶಾನವನ್ನಾಗಿ ಪರಿವರ್ತಿಸಿರುವುದನ್ನು ರದ್ದುಪಡಿಸುವಂತೆ ಆಗ್ರಹಿಸಿ ಕಟ್ಟೆಮಳಲವಾಡಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು, ಪ್ರಗತಿಪರ ಸಂಘಟನೆಗಳು ತಾಲೂಕು ಕಚೇರಿ ಎದುರು ಮೌನ ಪ್ರತಿಭಟನಾ ಧರಣಿ ನಡೆಸಿದರು.
ಧರಣಿಯಲ್ಲಿ ಗ್ರಾಮದ ಯಜಮಾನರಾದ ಕೃಷ್ಣಶೆಟ್ಟಿ, ಕೇಶವಮೂರ್ತಿ ಮಾತನಾಡಿ, ಗ್ರಾಮದ ಗಣಪತಿ ಹಾಗೂ ಸಿಡಿಯಮ್ಮ ದೇವಾಲಯಕ್ಕೆ ಸುತ್ತಮುತ್ತಲ ಗ್ರಾಮಸ್ಥರ ಅವಿನಾಭಾವ ಸಂಬಂಧವಿದೆ. 1920ರಿಂದಲೂ ಸರ್ವೆ ಸಂಖ್ಯೆ 24ರಲ್ಲಿ 8.02 ಎಕರೆ ಜಮೀನಿನಲ್ಲಿ ಕೋಡಿಗಣಪತಿ ದೇವಸ್ಥಾನವಿರುವ ದಾಖಲೆಗಳಿವೆ.
ಕರ್ಧಾ ಕಾಪಿಯಲ್ಲೂ ನಮೂದಾಗಿದೆ, ಆದರೆ ಈವರೆಗೂ ಇದು ಸೇಂದಿವನ ಎಂದು ಹೇಳಿಕೊಂಡು ಬರುತ್ತಿದ್ದ ತಾಲೂಕು ಆಡಳಿತ ಏಕಾಏಕಿ ಡಿಸೆಂಬರ್ 2016ರಲ್ಲಿ ವಕ್ಫ್ ಮಂಡಳಿಯ ಹೆಸರಿಗೆ ಖಾತೆ ಮಾಡಿಕೊಟ್ಟಿರುವುದು ಅನುಮಾನಕ್ಕೆ ಎಡೆಮಾಡಿದೆ. ಅಕ್ರಮವಾಗಿ ಮಾಡಿರುವ ಖಾತೆಯನ್ನು ರದ್ದುಗೊಳಿಸಬೇಕು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು, ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು ಎಂದು ಆಗ್ರಹಿಸಿದರು.
ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ್ ಮಲ್ಲಾಡಿ, ತಂಬಾಕು ಮಂಡಳಿ ಸದಸ್ಯ ಕಿರಣ್‌ಕುಮಾರ್, ಬಿಜೆಪಿ ತಾಲೂಕು ಅಧ್ಯಕ್ಷ ಯೋಗಾನಂದ ಕುಮಾರ್, ಮಾಜಿ ಅಧ್ಯಕ್ಷ ಹನಗೋಡು ಮಂಜುನಾಥ್, ಅಗ್ರಹಾರ ಚಂದ್ರೇಗೌಡ, ರಾಮಮೂರ್ತಿ, ಜಿಪಂ ಮಾಜಿ ಸದಸ್ಯ ರಮೇಶ್ ಕುಮಾರ್, ಸತ್ಯ ಫೌಂಡೆಷನ್ ಅಧ್ಯಕ್ಷ ಸತ್ಯಪ್ಪ, ಹಿರಿಕ್ಯಾತನಹಳ್ಳಿಯ ನಾಗೇಶ್, ಗ್ರಾಮದ ಗಡಿ ಯಜಮಾನರಾದ ಜಯಣ್ಣ ಮಾತನಾಡಿದರು.
ಮುಖಂಡರಾದ ಅಂಕಯ್ಯ, ಶಿವಪ್ಪ, ಸಿದ್ದಯ್ಯ, ಮಹದೇವ, ಪುಟ್ಟರಾಜು, ಪರಶುರಾಂ, ಆಂಜನೇಯ, ನಾಗೇಂದ್ರಶೆಟ್ಟಿ, ಸುರೇಶ, ತಾಲೂಕು ಕೊಂಡೇಗೌಡ, ಧರ್ಮೇಶ್, ವಾದಿರಾಜ್, ಬಸವಲಿಂಗಯ್ಯ ಸೇರಿದಂತೆ 200ಕ್ಕೂ ಹೆಚ್ಚು ಗ್ರಾಮಸ್ಥರು ಭಾಗವಹಿಸಿದ್ದರು.ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಡಾ. ಸೌಜನ್ಯ ಪ್ರಕರಣ ನ್ಯಾಯಾ ಲಯ ದಲ್ಲಿದ್ದು, ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.