Advertisement

ಡಾಕ್ಟರ್‌ ಆಗಲು ಬಂದು ಶಾಲೆ ದತ್ತು ಪಡೆದ ವಿದ್ಯಾರ್ಥಿಗಳು!

10:03 AM Aug 21, 2019 | Team Udayavani |

ಮಂಗಳೂರು: ಎಂಬಿಬಿಎಸ್‌ ಓದುತ್ತಿರುವ ಎಂಟು ವಿದ್ಯಾರ್ಥಿಗಳು ಸೇರಿ ಮುಚ್ಚುವ ಸ್ಥಿತಿಯಲ್ಲಿದ್ದ ಕುಗ್ರಾಮದ ಸರಕಾರಿ ಶಾಲೆಯೊಂದಕ್ಕೆ ಮರುಜೀವ ನೀಡಿದ್ದಲ್ಲದೆ ದತ್ತು ಸ್ವೀಕರಿಸಿ ಮಾದರಿಯಾಗಿದ್ದಾರೆ.

Advertisement

ವಿದ್ಯಾರ್ಥಿಗಳೇ ತಮ್ಮ ಕಿರಿಯ ಸಹೋದರ ಸಹೋದರಿಯರ ಭವಿಷ್ಯಕ್ಕೆ ಸಹಾಯ ಮಾಡು ತ್ತಿರುವುದು ವಿಶೇಷ. ಬಂಟ್ವಾಳ ತಾಲೂಕಿನ ಸಾಲೆತ್ತೂರು ಸಮೀಪದ ಕುಗ್ರಾಮದಲ್ಲಿ ಮೂಲ ಸೌಕರ್ಯಗಳಿಲ್ಲದೆ ಸೊರಗಿದ್ದ ಕಟ್ಟತ್ತಿಲ ಮಠ ಸ.ಶಾಲೆಗೆ ಇವರ ಸೇವೆ ಸಲ್ಲುತ್ತಿದೆ. ಅನ್ಮೊಲ್‌ ಬಾಳೇರಿ, ಅಭಿಲಾಷ್‌, ಐಶ್ವರ್ಯಾ, ಆಶಿಕ್‌, ಬಸವರಾಜ್‌, ಚಿರಂತ್‌, ಶರ್ಮಿಳಾ ಮತ್ತು ತೇಜಸ್ವಿನಿ ಎಂಬ ಈ 8 ಮಂದಿ ಮಂಗಳೂರಿನ ಯೇನಪೊಯ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿ ಗಳು, ರಾಜ್ಯದ ಬೇರೆ ಬೇರೆ ಕಡೆಯವರು.


ಶಾಲೆಗೆ ಮರುಜನ್ಮ ಕೊಟ್ಟರು
ಅನ್ಮೊಲ್‌ ಬಾಳೇರಿ ನೇತೃತ್ವದ ಈ ತಂಡ ಶಾಲೆಯನ್ನು ಅಭಿವೃದ್ಧಿಪಡಿಸುತ್ತಿರುವುದು ಮಾತ್ರವಲ್ಲ. ಊರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದಕ್ಕೆ ಪ್ರಯತ್ನಿಸುತ್ತಿದೆ. ತಮ್ಮ ಪೋಷಕರು ನೀಡುವ ಹಣದ ಒಂದಷ್ಟು ಭಾಗವನ್ನು ಉಳಿಸಿಕೊಂಡು, ಜತೆಗೆ ದಾನಿಗಳು ಮತ್ತು ಸಹಪಾಠಿಗಳ ನೆರವಿನೊಂದಿಗೆ ಶಾಲೆ ಅಭಿವೃದ್ಧಿಪಡಿಸಿ ಹೊಸ ರೂಪ ಕೊಟ್ಟಿದೆ.

ಇವರು “ಕರ ಸೇವಾ’ ಎಂಬ ಟ್ರಸ್ಟ್‌ ಪ್ರಾರಂಭಿಸಿ ಯಾವುದಾದರೂ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಭಿವೃದ್ಧಿಪಡಿಸಲು ಯೋಚಿಸಿದ್ದರು. ಅದಕ್ಕೆ ಅವಕಾಶ ಸಿಗದೆ ಇದ್ದಾಗ, ಸ್ವಂತ ಖರ್ಚಿನಲ್ಲಿ ಸಾಲೆತ್ತೂರು, ಮುಡಿಪು ಕಡೆ ಆರೋಗ್ಯ ಶಿಬಿರ ಆಯೋಜಿಸಿದ್ದರು. 2016ರ ಡಿಸೆಂಬರ್‌ನಲ್ಲಿ ಶಿಬಿರಕ್ಕಾಗಿ ಕಟ್ಟತ್ತಿಲ ಮಠ ಶಾಲೆಗೆ ಹೋಗಿದ್ದಾಗ ಅಲ್ಲಿದ್ದುದು 16 ಮಂದಿ ಮಕ್ಕಳು, ಶಾಲೆಯೂ ದುಃಸ್ಥಿತಿಯಲ್ಲಿತ್ತು. ಕೆಲವು ತಿಂಗಳ ಅನಂತರ ಅಲ್ಲಿನ ಮುಖ್ಯ ಶಿಕ್ಷಕರು ಕರೆ ಮಾಡಿ, ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಮುಚ್ಚುವ ಭೀತಿಯಿದೆ.

ಶಾಲೆ ಉಳಿಸುವ ಪ್ರಯತ್ನ ಮಾಡಿ ಎಂದು ಮನವಿ ಮಾಡಿದ್ದರು.ಸ್ಪಂದಿಸಿದ ಈ ವಿದ್ಯಾರ್ಥಿಗಳು ಶಾಲೆ ದುರಸ್ತಿಗೊಳಿಸಿ ಪೀಠೊಪಕರಣದಿಂದ ಹಿಡಿದು ಇಂಟರ್‌ನೆಟ್‌ವರೆಗೆ ಸೌಲಭ್ಯ ಒದಗಿಸಿದ್ದಾರೆ. ಮುಚ್ಚಿದ್ದ ಬಾವಿಗೆ ಮರುಜೀವ ನೀಡಿದ್ದಾರೆ. ಬೆಂಗಳೂರಿನ ಇ-ಕ್ಲಾಸ್‌ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಆನ್‌ಲೈನ್‌ ಇಂಗ್ಲಿಷ್‌ ಕಲಿಕೆಯ ವ್ಯವಸ್ಥೆ ಮಾಡಿದ್ದಾರೆ. ಮಕ್ಕಳಿಗೆ ಬೆಳಗ್ಗಿನ ಉಪಾಹಾರವೂ ನೀಡಲಾಗುತ್ತಿದೆ. ಈಗ 5 ವರ್ಷಕ್ಕೆ ಸರಕಾರ ದಿಂದ ದತ್ತು ಸ್ವೀಕರಿಸಿದ್ದಾರೆ.

ಕರ ಸೇವಾ ಟ್ರಸ್ಟ್‌ ಕಟ್ಟತ್ತಿಲ ಮಠ ಊರಿನ ಜನರ ಬದುಕಿನ ಸುಧಾರಣೆಗೂ ಮುಂದಾಗಿದೆ. ಅದಕ್ಕೆ ಅದು ಪರಿಚಯಿಸಿರುವ ಯೋಜನೆಯೊಂದು ಸಾಕ್ಷಿ. 8 ವಿದ್ಯಾರ್ಥಿಗಳು ತಲಾ 500 ರೂ. ಹಾಕಿ 4 ಸಾವಿರ ರೂ.ಗಳ ನಿಧಿ ರೂಪಿಸಿದ್ದಾರೆ. ಇದರಿಂದ ಊರಿನವರು ತುರ್ತಾಗಿ 500 ರೂ.ಸಾಲ ಪಡೆಯಬಹುದು. ಪೋಷಕರು ಮಕ್ಕಳ ಕಲಿಕೆಗಾಗಿ ಸಾಲ ಪಡೆಯಬಹುದು.

Advertisement

ಶಾಲೆಗಾಗಿ ಭತ್ತದ ಬೆಳೆ !
ಕರ ಸೇವಾದ ವಿದ್ಯಾರ್ಥಿಗಳು ಶಾಲೆಗೆ ಆರ್ಥಿಕ ಸಂಪನ್ಮೂಲ ಒದಗಿಸುವುದಕ್ಕಾಗಿ ಊರಿನ ರೈತರೊಬ್ಬರ 40 ಸೆಂಟ್ಸ್‌ ಗದ್ದೆ ಯನ್ನು ಪಡೆದು ನೇಜಿ ನೆಟ್ಟಿದ್ದಾರೆ. ಮುಂದೆ ಭತ್ತ ಮಾರಾಟ ಮಾಡಿ ಹಣ ವನ್ನು ಶಾಲೆಗೆ ನೀಡುವುದು ಉದ್ದೇಶ.

ಸ್ಕೂಲ್‌ ಬಸ್‌ಗಾಗಿ ಚಿಕ್ಕಿ ಮಾರಾಟ!
ಶಾಲೆಯ ಮಕ್ಕಳಿಗೆ ತುರ್ತಾಗಿ ಶಾಲಾ ವಾಹನದ ಅಗತ್ಯವಿದೆ. ಅದಕ್ಕಾಗಿ ಈ ವಿದ್ಯಾರ್ಥಿ ಗಳು ಕಲಿಕೆಯ ಮಧ್ಯೆ ಚಿಕ್ಕಿ ಮಿಠಾಯಿ ಮಾರಾಟ ಮಾಡಿ ಹಣ ಒಟ್ಟುಗೂಡಿಸುತ್ತಿದ್ದಾರೆ. 2 ಲಕ್ಷ ರೂ. ಸಂಗ್ರಹಿಸುವ ಗುರಿಯಿದ್ದು, ಈಗಾಗಲೇ 50 ಸಾವಿರ ರೂ. ಕೂಡಿಸಿದ್ದಾರೆ.

ವಿದ್ಯಾರ್ಥಿಗಳೇ ಸೇರಿ
ಕೊಂಡು ಹಳ್ಳಿ ಶಾಲೆಯನ್ನು ಬೆಳೆಸಿ ದತ್ತು ಪಡೆದುಕೊಂಡಿರುವುದು ನಾನಂತೂ ಕೇಳಿಲ್ಲ. ಇವರು ವೈದ್ಯಕೀಯ ವಿದ್ಯಾರ್ಥಿಗಳು ಎಂಬುದೇ ಗೊತ್ತಾಗುವುದಿಲ್ಲ. ಊರವರಿಗೂ ಅವರಂದರೆ ಎಲ್ಲಿಲ್ಲದ ಪ್ರೀತಿ. ನನಗೂ ಸ್ವಂತ ಮಕ್ಕಳಿದ್ದಂತೆ.
-ಚಿತ್ರಕಲಾ, ಕಟ್ಟತ್ತಿಲ ಮಠ ಶಾಲೆಯ ಮುಖ್ಯ ಶಿಕ್ಷಕಿ

ಮಾದರಿ ಶಾಲೆಯ ಕನಸು
ಕಟ್ಟತ್ತಿಲ ಮಠ ಶಾಲೆಗೆ ಮರುಜೀವ ಲಭಿಸಿರುವುದು ಖುಷಿಯಾಗುತ್ತಿದೆ. ಶಾಲೆಯಲ್ಲಿ ಈಗ 38 ಮಕ್ಕಳಿದ್ದಾರೆ. ಮನಸ್ಸು ಮಾಡಿದರೆ ಇದೇರೀತಿ ಮುಚ್ಚುವ ಸ್ಥಿತಿಯಲ್ಲಿರುವ ಸರಕಾರಿ ಶಾಲೆಗಳನ್ನು ಉಳಿಸಬಹುದು. ನಮ್ಮ ಸಣ್ಣ ಪ್ರಯತ್ನಕ್ಕೆ ದಾನಿಗಳು, ಕಾಲೇಜಿನ ಅಧ್ಯಾಪಕರು ಮತ್ತು ಆಡಳಿತ ಮಂಡಳಿಯ ಪ್ರೋತ್ಸಾಹ, ಹೆತ್ತವರ ಬೆಂಬಲ ಇದೆ. ಈ ಶಾಲೆಯನ್ನು ಮಾದರಿಯನ್ನಾಗಿ ಮಾಡು ವುದೇ ನಮ್ಮ ತಂಡದ ಕನಸು.
-ಅನ್ಮೊಲ್‌ ಬಾಳೇರಿ,
ಶಾಲೆ ದತ್ತು ಪಡೆದ ಎಂಬಿಬಿಎಸ್‌ ವಿದ್ಯಾರ್ಥಿ

ಸಣ್ಣ ಸೇವೆಗೆ ದೊಡ್ಡ ಪ್ರತಿಫಲ
ಈ ಶಾಲೆಯ ಜತೆಗಿನ ಎರಡೂವರೆ ವರ್ಷಗಳ ನಮ್ಮ ಸಂಬಂಧ ಮತ್ತು ಅಲ್ಲಿ ಆಗಿರುವ ಬದಲಾವಣೆ ನೋಡಿದಾಗ ಹೆಮ್ಮೆಯಾಗುತ್ತಿದೆ. ಸಮಯವಿದ್ದಾಗೆಲ್ಲ ಶಾಲೆಗೆ ಹೋಗಿ ಮಕ್ಕಳು ಮತ್ತು ಊರಿನವರೊಂದಿಗೆ ಬೆರೆತಾಗ ಸಿಗುವ ಖುಷಿ ನಮ್ಮ ಸಣ್ಣ ಸೇವೆಗೆ ಸಿಗುವ ಬಹುದೊಡ್ಡ ಪ್ರತಿಫಲ.
-ಐಶ್ವರ್ಯಾ,
ತಂಡದ ಸದಸ್ಯ ವಿದ್ಯಾರ್ಥಿನಿ

-ಸುರೇಶ್‌ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next