Advertisement

ಕರಾವಳಿಯಲ್ಲಿ ಕಟ್ಟಪ್ಪನ ಹವಾ

10:02 AM Mar 30, 2019 | mahesh |

“ಕಟಪಾಡಿ ಕಟ್ಟಪ್ಪ’ – ತುಂಬಾ ದಿನಗಳಿಂದ ತುಳು ಚಿತ್ರರಂಗದಲ್ಲಿ ಕೇಳಿಬರುತ್ತಿರುವ ಹೆಸರು. ಸಿನಿಮಾ ಸೆಟ್ಟೇರಿದ ದಿನದಿಂದಲೂ ಒಂದಲ್ಲ, ಒಂದು ವಿಚಾರದಲ್ಲಿ ಸುದ್ದಿಯಲ್ಲಿದ್ದ ಈ ಸಿನಿಮಾ ಇಂದು ತೆರೆಕಾಣುತ್ತಿದೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ ಎಂಬುದು ವಿಶೇಷ. ಸಾಮಾನ್ಯವಾಗಿ ತುಳು ಸಿನಿಮಾಗಳು ದಕ್ಷಿಣ ಕನ್ನಡ ಹಾಗೂ ಸುತ್ತಮುತ್ತಲ ಕೆಲವು ಚಿತ್ರಮಂದಿರಗಳಷ್ಟೇ ತೆರೆಕಾಣುತ್ತವೆ. ಆದರೆ, “ಕಟಪಾಡಿ ಕಟ್ಟಪ್ಪ’ ಮಾತ್ರ ದಕ್ಷಿಣ ಕನ್ನಡವಷ್ಟೇ ಅಲ್ಲದೇ, ಬೇರೆ ಬೇರೆ ಕಡೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕರ್ನಾಟಕ ಹಾಗೂ ಬೇರೆ ಬೇರೆ ರಾಜ್ಯಗಳಲ್ಲೂ ಚಿತ್ರ ಪ್ರದರ್ಶನ ಕಾಣಲಿದೆ. ದೆಹಲಿ, ಚಂಡಿಗಡ್‌, ಭೋಪಾಲ್‌, ನೋಯ್ಡಾ, ಸೂರತ್‌, ಹೈದರಾಬಾದ್‌, ಮಹಾರಾಷ್ಟ್ರ, ಕೋಲ್ಕತ್ತಾ, ಶ್ರೀಲಂಕಾ, ಸಿಂಗಾಪೂರ್‌ನಲ್ಲೂ ಪ್ರದರ್ಶನ ಕಾಣಲಿದೆ. ಜೊತೆಗೆ ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ, ಹಾವೇರಿ, ಬೆಳಗಾವಿಯಲೂ “ಕಟ್ಟಪ್ಪ’ ಪ್ರೇಕ್ಷಕರಿಗೆ ದರ್ಶನ ನೀಡಲಿದ್ದಾನೆ. ಬೇರೆ ಬೇರೆ ಕಡೆಗಳಲ್ಲಿರುವ ತುಳು ಸಿನಿಮಾ ಪ್ರಿಯರಿಗಾಗಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

Advertisement

ರಾಜೇಶ್‌ ಬ್ರಹ್ಮಾವರ್‌ ನಿರ್ಮಾಣದ ಈ ಚಿತ್ರವನ್ನು ಜೆಪಿ ತುಮಿನಾಡು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಯಜ್ಞೆಶ್ವರ್‌ ಬರ್ಕೆ, ವಿಜಯ್‌ ಕುಮಾರ್‌ ಕೊಡಿಯಾಲ್‌ ಬೈಲ್‌, ಉದಯ್‌, ಭೋಜರಾಜ ವಾಮಂಜೂರು, ಅರವಿಂದ್‌ ಬೋಳಾರ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರದಲ್ಲಿ ಚರಿಷ್ಮಾ ಸಾಲ್ಯಾನ್‌ ನಾಯಕಿ. ಎಲ್ಲಾ ಓಕೆ, ಇದು ಯಾವ ಜಾನರ್‌ಗೆ ಸೇರಿದ ಸಿನಿಮಾ ಎಂದು ನೀವು ಕೇಳಬಹುದು. ಚಿತ್ರತಂಡ ಹೇಳುವಂತೆ, ಇದು ರೆಗ್ಯುಲರ್‌ ಪ್ಯಾಟರ್ನ್ ಬಿಟ್ಟ ಸಿನಿಮಾ. ಅತಿಯಾದ ಕಾಮಿಡಿ, ಸೆಂಟಿಮೆಂಟ್‌ ಇಲ್ಲದೇ, ಜಿದ್ದಾಜಿದ್ದಿಯೊಂದಿಗೆ ಚಿತ್ರ ಸಾಗುತ್ತದೆ. ಹಗರಣವೊಂದರ ಸುತ್ತ ಬಹುತೇಕ ಸಿನಿಮಾ ಸಾಗಲಿದೆ. ಚುನಾವಣೆ ಗೆಲ್ಲಲು ಇಬ್ಬರ ನಡುವೆ ನಡೆಯುವ ಜಿದ್ದಾಜಿದ್ದಿ ಚಿತ್ರದ ಹೈಲೈಟ್‌ ಎನ್ನುವುದು ಚಿತ್ರತಂಡದ ಮಾತು. ಈಗಾಗಲೇ ಚಿತ್ರದ ಹಾಡು, ಟ್ರೇಲರ್‌ಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿರುವುದರಿಂದ ಜನ ಸಿನಿಮಾವನ್ನು ಅದೇ ರೀತಿ ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next