ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನಿಗಮದ ( ಕೆಐಎಡಿಬಿ) ಭೂ ಹಗರಣದಲ್ಲಿ ಪ್ರಕರಣದ ಸಾಕ್ಷಿಯೊಬ್ಬರಿಗೆ 1 ಲಕ್ಷ ರೂ. ಲಂಚ ನೀಡಿದ ಆರೋಪ ಪ್ರಕರಣದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಹಾಗೂ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಪುತ್ರ ಕಟ್ಟಾ ಜಗದೀಶ್ ನಾಯ್ಡು ಅವರನ್ನು ದೋಷಮುಕ್ತಗೊಳಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶಿಸಿದೆ.
2010ರಲ್ಲಿ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಲಂಚ ನೀಡಿದ ಆರೋಪ ಪ್ರಕರಣದಿಂದ ತಮ್ಮ ಹೆಸರನ್ನು ಕೈ ಬಿಡುವಂತೆ ಕೋರಿ ಕಟ್ಟಾ ಜಗದೀಶ್ ನಾಯ್ಡು ಹಾಗೂ ಮತ್ತೋರ್ವ ಆರೋಪಿ ರುದ್ರೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯ ಗುರುವಾರ ಈ ಆದೇಶ ನೀಡಿದೆ.
ಪ್ರಕರಣದ ಆರೋಪಿ ಹಾಗೂ ದೂರುದಾರ ಇಬ್ಬರೂ ಸರ್ಕಾರಿ ನೌಕರರು ಆಗಿಲ್ಲದಿರುವುದರಿಂದ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಕಲಂ 10ರ ಅನ್ವಯ ಹೊರಿಸಲಾಗಿರುವ ಲಂಚ ನೀಡಿಕೆ ಆರೋಪ ಮಾನ್ಯವಾಗುವುದಿಲ್ಲ ಎಂಬ ಜಗದೀಶ್ ಪರ ವಕೀಲರ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿದೆ.
ಆದರೆ, ಆರೋಪಿಗಳ ವಿರುದ್ಧ ಐಪಿಸಿ ಕಲಂ 214, 109ರ ಅನ್ವಯ ದಾಖಲಿಸಿರುವ ದೋಷಾರೋಪಗಳಿಗೆ ಸಂಬಂಧಿಸಿದ ವಿಚಾರಣೆಯನ್ನು ಚೀಫ್ ಮೆಟ್ರೋಪಾಲಿಟನ್ ಕೋರ್ಟ್‌ಗೆ ವರ್ಗಾಯಿಸಿದೆ. ಕಟ್ಟಾ ಜಗದೀಶ್ ಪರ ವಕೀಲ ಪಿ.ಪ್ರಸನ್ನಕುಮಾರ್ ವಾದ ಮಂಡಿಸಿದ್ದರು.
ಪ್ರಕರಣವೇನು?: ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ತಮಗೆ ನೆರವಾಗುವಂತೆ ಸಾಕ್ಷಿ ಹೇಳಲು ಹಾಗೂ ತನಿಖೆಯ ದಿಕ್ಕು ತಪ್ಪಿಸುವ ಸಲುವಾಗಿ ಪ್ರಕರಣದ ದೂರುದಾರ ಹಾಗೂ ಸಾಕ್ಷಿಯಾಗಿರುವ ತಮಗೆ ಪಾಲಿಕೆ ಸದಸ್ಯ ಕಟ್ಟಾಜಗದೀಶ್ ಲಂಚದ ಆಮಿಷವೊಡ್ಡಿದ್ದರು ಎಂದು ರಾಮಾಂಜಿನಪ್ಪ ಎಂಬುವವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಜಗದೀಶ್ ಸೂಚನೆಯಂತೆ ರುದ್ರೇಶ್ ಕುಮಾರ್ ಸದಾಶಿವನಗರದ ನಿವಾಸದಲ್ಲಿ ರಾಮಾಂಜಿನಪ್ಪ ಅವರಿಗೆ 1 ಲಕ್ಷ ರೂ. ನೀಡುತ್ತಿದ್ದ ವೇಳೆ ದಾಳಿ ನಡೆಸಿದ್ದ ಪೊಲೀಸರು ಹಣ ಜಪ್ತಿ ಮಾಡಿಕೊಂಡಿದ್ದರು. ಆದರೆ, ರುದ್ರೇಶ್ ಸ್ಥಳದಿಂದ ಪರಾರಿಯಾಗಿದ್ದ. ಇದೇ ವೇಳೆ ಗಾಂಧಿನಗರದ ತಮ್ಮ ಕಚೇರಿಯಲ್ಲಿದ್ದ ಕಟ್ಟಾ ಜಗದೀಶ್‌ರನ್ನು ಮತ್ತೂಂದು ತಂಡ ಬಂಧಿಸಿತ್ತು.