ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ಹೆಸರು ‘ಉರಿ’ ಖ್ಯಾತಿಯ ನಟ ವಿಕ್ಕಿ ಕೌಶಾಲ್ ಜೊತೆ ತಳುಕು ಹಾಕಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಜೋಡಿ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಗುಸುಗುಸು ಮಾತು ಎಲ್ಲರ ಕಿವಿಗಳಿಗೂ ತಲುಪಿದ್ದುಂಟು. ಇದೀಗ ಈ ಲವ್ ಬರ್ಡ್ಸ್ ಕುರಿತಾದ ಮತ್ತೊಂದು ವಿಚಾರ ತೇಲಿ ಬಂದಿದೆ. ಅದು ಏನು ಅಂತೀರಾ ? ಹಾಗಾದರೆ ಈ ಸ್ಟೋರಿ ಓದಿ…
ಹೌದು, ಬಿಟೌನ್ ಕ್ಯಾಟ್ ಕತ್ರಿನಾ ಕದ್ದು ಮುಚ್ಚಿ ವಿಕ್ಕಿ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರಂತೆ. ಖಾಸಗಿಯಾಗಿ ನಡೆದ ಈ ನಿಶ್ಚಿತಾರ್ಥದಲ್ಲಿ ಆಪ್ತರಷ್ಟೆ ಹಾಜರಾಗಿದ್ದರಂತೆ. ಹೀಗೆ ಕತ್ರಿನಾ ನಿಶ್ಚಿತಾರ್ಥದ ಕುರಿತಾದ ಸುದ್ದಿಯೊಂದು ಬಿಟೌನ್ ನಲ್ಲಿ ಹರಿದಾಡುತ್ತಿದ್ದು, ಅದು ಎಷ್ಟು ಸತ್ಯ ಎಂಬ ಪ್ರಶ್ನೆಗೆ ಈ ಜೋಡಿಯೆ ಉತ್ತರ ನೀಡಬೇಕಿದೆ.
ನಿನ್ನೆ ದಿನವಿಡೀ ಸೋಷಿಯಲ್ ಮೀಡಿಯಾದಲ್ಲಿ ವಿಕ್ಕಿ-ಕತ್ರಿನಾ ಅವರ ಎಂಗೇಜ್ ಆಗಿರುವ ಸುದ್ದಿ ಸಂಚಲನ ಮೂಡಿಸಿತ್ತು. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಕತ್ರಿನಾ ಕೈಫ್ ಆಪ್ತರು, ಎಂಗೇಜ್ಮೆಂಟ್ ಸುದ್ದಿ ಕೇವಲ ರೂಮರ್. ಯಾವುದೇ ಎಂಗೇಜ್ಮೆಂಟ್ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸದ್ಯ ಬಾಲಿವುಡ್ ನಲ್ಲಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಅವರ ಲವ್ ವಿಚಾರ ಹಾಟ್ ಟಾಪಿಕ್ ಆಗಿದೆ. ಚಾಟ್ ಶೋವೊಂದರಲ್ಲಿ ಮೀಟ್ ಆಗಿದ್ದ ಕ್ಯಾಟ್ ಹಾಗೂ ವಿಕ್ಕಿಯ ನಡುವೆ ಸ್ನೇಹ ಚಿಗುರೊಡೆಯಿತು. ಅಲ್ಲಿಂದು ಡೇಟಿಂಗ್ ಚಾಟಿಂಗ್ ಶುರುವಾಯಿತು. ಹಲವಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡ ಇವರು ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಗುಲ್ಲು ಕೇಳಿ ಬಂದಿದೆ. ಇದೀಗ ಎಂಗೇಜ್ಮೆಂಟ್ ಸುದ್ದಿ ಕೂಡ ಹರಿದಾಡುತ್ತಿದ್ದು, ಶೀಘ್ರದಲ್ಲಿ ಕತ್ರಿನಾ ಕಲ್ಯಾಣ ನಡೆಯಲಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.