ಪುಣೆ: ಕಾತ್ರಜ್ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ವಾರ್ಷಿಕ ನಾಗರ ಪಂಚಮಿ ಆಚರಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಬಹಳ ಶ್ರದ್ಧಾ ಭಕ್ತಿಯಿಂದ ಜರಗಿತು.
ಈ ಶುಭ ದಿನದಂದು ಅಯ್ಯಪ್ಪ ಸ್ವಾಮಿ ಮಂದಿರದ ಪ್ರಾಂಗಣದಲ್ಲಿರುವ ನಾಗ ಸನ್ನಿಧಿಯಲ್ಲಿ ಮಂದಿರದ ಪ್ರಧಾನ ಅರ್ಚಕರಾದ ಹರೀಶ್ ಭಟ್ ಮತ್ತು ಸಂಗಡಿಗರ ಪೌರೋಹಿತ್ಯದಲ್ಲಿ ಬೆಳಗ್ಗೆ 7.30 ರಿಂದ ನಾಗ ದೇವರಿಗೆ ಪಂಚಾಮೃತ ಅಭಿಷೇಕ, ನಾರಿಕೇಳಾಭಿಷೇಕ, ತನು ತಂಬಿಲ, ಆಶ್ಲೇಷ ಬಲಿ ಪೂಜೆ, ಪ್ರಧಾನ ಹೋಮ, ಪ್ರಸನ್ನ ಕಲೊ³àಕ್ತ ಪೂಜೆ ವಿಧಿವತ್ತಾಗಿ ನಡೆಯಿತು. ಭಕ್ತರು ಹಾಲು, ಸೀಯಾಳ ಹೂ ಹಿಂಗಾರವನ್ನು ಅರ್ಪಿಸುವ ಮೂಲಕ ನಾಗ ದೇವರಿಗೆ ತನು ತಂಬಿಲ ಪೂಜೆ ಸಲ್ಲಿಸಿದರು.
ಅಲ್ಲದೆ ನಾಗರ ಪಂಚಮಿ ವೃತ ಕೈಗೊಂಡ ಭಕ್ತರು ಆಶ್ಲೇಷ ಬಲಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಅನಂತರ ಮಂದಿರದ ಪ್ರಧಾನ ದೇವರಿಗೆ ಸೇರಿದಂತೆ ಪರಿವಾರ ದೇವರಿಗೆ ಮಹಾ ಪೂಜೆ, ಮಂಗಳಾರತಿ ನಡೆಯಿತು. ಭಕ್ತಾದಿಗಳು ಸೇವಾ ರೂಪದಲ್ಲಿ ಅಕ್ಕಿ, ಕಾಯಿ, ತುಪ್ಪ,$ ಹೂ ಹಿಂಗಾರ ಸೀಯಾಳವನ್ನು ಅರ್ಪಿಸಿದರು. ಅಪಾರ ಸಂಖ್ಯೆಯಲ್ಲಿ ಸೇರಿದ ಭಕ್ತರು ಗಂಧ ಪ್ರಸಾದ ಸ್ವೀಕರಿಸಿ ನಾಗದೇವರ ಕೃಪೆಗೆ ಪಾತ್ರರಾದರು. ಅನಂತರ ಬಂಟರ ಸಂಘ ಪುಣೆ ಇದರ ದಕ್ಷಿಣ ವಲಯ ಪ್ರಾದೇಶಿಕ ಸಮಿತಿಯ ವತಿಯಿಂದ ಅಧ್ಯಕ್ಷ ವಸಂತ ಶೆಟ್ಟಿ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರ ಸೇವಾ ರೂಪದಲ್ಲಿ ಅನ್ನಸಂತರ್ಪಣೆ ಸೇವೆ ಜರಗಿತು. ಸೇವಾರ್ಥಿಗಳಿಗೆ ಪುರೋಹಿತರು ಗಂಧಪ್ರಸಾದ ವಿತರಿಸಿ ಹರಸಿದರು.
ಮಂದಿರದ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಸುಭಾಷ್ ಶೆಟ್ಟಿ, ಕಾರ್ಯದರ್ಶಿ ರಘುರಾಮ ರೈ, ಕೋಶಾಧಿಕಾರಿ ಜಗದೀಶ ಶೆಟ್ಟಿ, ಮಾಜಿ ಅಧ್ಯಕ್ಷ ಶೇಖರ್ ಪೂಜಾರಿ ಮತ್ತು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಹರೀಶ್ ಪೂಜಾರಿ ಮತ್ತು ಪದಾಧಿಕಾರಿಗಳು, ಶ್ರೀ ಅಯ್ಯಪ್ಪ ಸ್ವಾಮೀ ಮಹಿಳಾ ಮಂಡಳಿಯ ಅಧ್ಯಕ್ಷೆ ವಿನೋದಾ ಶೆಟ್ಟಿ ಮತ್ತು ಪದಾಧಿಕಾರಿಗಳು ಮತ್ತು ಭಕ್ತರ ಸಹಕಾರದೊಂದಿಗೆ ಈ ಧಾರ್ಮಿಕ ಕಾರ್ಯಕ್ರಮವು ನೆರವೇರಿತು.
ಚಿತ್ರ-ವರದಿ : ಹರೀಶ್ ಮೂಡಬಿದ್ರಿ ಪುಣೆ