Advertisement

ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66 ಬಾಯ್ದೆರೆದ ಮೃತ್ಯುಕೂಪಕ್ಕೆ ಮುಕ್ತಿ !

10:07 AM Nov 01, 2019 | Team Udayavani |

ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ತೇಕಲ್‌ತೋಟ ಪ್ರದೇಶದಲ್ಲಿ ಪ್ರಾಣಾಂತಿಕವಾಗಿ ಬಾಯ್ದೆರೆದಿರುವ ಗುಂಡಿಯ ಪ್ರದೇಶದಲ್ಲಿ ಅ.29ರಂದು ಹೆದ್ದಾರಿಯನ್ನು ಅಗೆದು ಮರು ಡಾಮರೀಕರಣ ಮಾಡುವ ಮೂಲಕ ನವಯುಗ ಕಂಪೆನಿಯು ವಾಹನ ಮತ್ತು ಜನರ ಸಂಚಾರಕ್ಕೆ ಸುರಕ್ಷತೆಯನ್ನು ಕಲ್ಪಿಸಿದ್ದು, ಪ್ರಜ್ಞಾವಂತ ನಾಗರೀಕರು, ನಿತ್ಯ ಸಂಚಾರಿಗಳು, ವಾಹನ ಸವಾರರು ನಿರಾಳರಾಗಿದ್ದಾರೆ.

Advertisement

ಈ ಪ್ರದೇಶದಲ್ಲಿ ಹೆದ್ದಾರಿಯ ತಳ ಭಾಗದಲ್ಲಿ ನೀರು ನಿಂತು ಕಂದಕ ನಿರ್ಮಾಣವಾಗಿ ಸಂಚಾರಕ್ಕೆ ಸಂಚಕಾರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಪೊಲೀಸ್‌ ಇಲಾಖೆಯೂ ಸರಿಪಡಿಸುವಂತೆ ಹೆಚ್ಚಿನ ಒತ್ತಡವನ್ನು ಹೇರಿತ್ತು. ಈ ಗುಂಡಿಯು ಮೃತ್ಯುಕೂಪವಾಗಿ ಪರಿಣಮಿಸಬಲ್ಲುದು ಎಂಬ ಜನಪರ ಕಾಳಜಿಯ ಉದಯವಾಣಿ ವರದಿಯನ್ನು ಪ್ರಕಟಿಸಿತ್ತು.

ಇದಕ್ಕೆ ಸ್ಪಂದಿಸಿದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ನವಯುಗ ಕಂಪೆನಿಯು ಸ್ಪಂದಿಸಿದ್ದು, ಈ ಭಾಗದಲ್ಲಿ ಗುಂಡಿ ಮುಚ್ಚುವುದು ಸೂಕ್ತ ಪರಿಹಾರ ಅಲ್ಲ ಎಂಬುದನ್ನು ಮನಗಂಡು 40 ಮೀ.ನಷ್ಟು ಉದ್ದ, 3.7 ಮೀ. ಅಗಲ ಹಾಗೂ 3 ಇಂಚಿನಷ್ಟು ಸಿಆರ್‌ಎಂಬಿ. 65 ರಬ್ಬರ್‌ ಮಿಶ್ರಿತ ಡಾಮರು ಬಳಸಿ ಮರು ಡಾಮರೀಕರಣ ಕಾಮಗಾರಿಯನ್ನು ಕೈಗೊಳ್ಳುವ ಮೂಲಕ ಹೆದ್ದಾರಿಯಲ್ಲಿ ಸುರಕ್ಷತೆಯನ್ನು ಕಲ್ಪಿಸಿರುತ್ತದೆ.

ಅಪಾಯಕಾರಿಯಾಗಿತ್ತು
ಕಟಪಾಡಿಯ ಹಳೆ ಎಂಬಿಸಿ ರಸ್ತೆಯೂ ಸಂಧಿಸುವ ಸ್ಥಳ ಮತ್ತು ಇಳಿಜಾರಿನಿಂದ ಕೂಡಿದ ಜಂಕ್ಷನ್‌ ಪ್ರದೇಶ ಇದಾಗಿದ್ದು, ಇಲ್ಲಿ ವಾಹನಗಳು ತುಸು ಹೆಚ್ಚು ವೇಗದಲ್ಲಿ ಧಾವಿಸುವ ಧಾವಂತದಲ್ಲಿ ಈ ಗುಂಡಿಯು ಚಾಲಕನ ಗಮನಕ್ಕೆ ಬಾರದೇ ಅಪಘಾತ ಸಂಭವಿಸುವ ಪ್ರಮೇಯವೇ ಹೆಚ್ಚಿತ್ತು. ಕಾಪು ಪೊಲೀಸರು ಬ್ಯಾರಿಕೇಡ್‌ ಅಳವಡಿಸಿ ಸಂಚಾರಿಗಳನ್ನು ಎಚ್ಚರಿಸುವ ಪ್ರಯತ್ನ ನಡೆಸಿದ್ದರು. ಗುಂಡಿ ಮುಚ್ಚಲು ತುಂಬಿಸಿದ ಕಲ್ಲು, ಜಲ್ಲಿಗಳೂ ಮೇಲೆದ್ದು ಮತ್ತಷ್ಟು ಅಪಾಯಕಾರಿಯಾಗಿತ್ತು. ಅ.25ರಂದು ಕಾಲೇಜ್‌ ಬಸ್ಸೊಂದು ಗುಂಡಿಗೆ ಬಿದ್ದು ಚಾಲಕನ ನಿಯಂತ್ರಣ ಕಳೆದುಕೊಂಡು ಡಿವೈಡರ್‌ ಮೇಲೇರಿತ್ತು., ವಾಹನಗಳ ಟಯರ್‌ ಪಂಕ್ಚರ್‌ ಆಗುತ್ತಿತ್ತು.

ಇದೀಗ ಮರುಡಾಮರೀಕರಣಗೊಳ್ಳುವ ಮೂಲಕ ವಾಹನ ಸಂಚಾರರಿಗೆ ಸುರಕ್ಷತೆಯನ್ನು ಕಲ್ಪಿಸಿರುತ್ತಾರೆ ಎಂದು ಸ್ಥಳೀಯರು ತಿಳಿಸುತ್ತಿದ್ದಾರೆ.
ನವಯುಗ ಕಂಪೆನಿಯಿಂದ ಆಗಮಿಸಿದ್ದವರು ಅ.28ರಂದು ಸ್ಥಳ ಪರಿಶೀಲನೆಯನ್ನು ನಡೆಸಿದ್ದು, ಸಂಪೂರ್ಣ ಸಿದ್ಧತೆಯೊಂದಿಗೆ ಅ.29ರಂದು ಸಂಜೆಯ ವರೆಗೆ ಮರುಡಾಮರೀಕರಣ ಕಾಮಗಾರಿ ನಡೆಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ಮೂಲಕ ವಾಹನ ಸವಾರರು ನಿರಾಳರಾಗಿದ್ದಾರೆ.

Advertisement

ಮೃತ್ಯುಕೂಪಕ್ಕೆ ಮೋಕ್ಷ
ಉದಯವಾಣಿ ಪತ್ರಿಕೆಯು ನಿರಂತರ ಜನಪರ ಕಾಳಜಿಯ ವರದಿಯನ್ನು ಪ್ರಕಟಿಸಿದ ಪ್ರಯತ್ನದಿಂದ ಇಂದು ಮೃತ್ಯುಕೂಪಕ್ಕೆ ಮೋಕ್ಷ ಲಭಿಸಿದೆ.
– ಭಾಸ್ಕರ ಪೂಜಾರಿ, ಗ್ರಾ.ಪಂ. ಸದಸ್ಯ, ರಿಕ್ಷಾ ಚಾಲಕ, ಕಟಪಾಡಿ

ಸಂಚಾರ ಸುಗಮ
ವಾಹನ ಸಂಚಾರಕ್ಕೆ ಪ್ರತಿಕೂಲ ಪರಿಸ್ಥಿತಿಯ ಸಚಿತ್ರ ವರದಿಯ ಮೂಲಕ ಇಲಾಖೆಯನ್ನು ಎಚ್ಚರಿಸಿ ಜನಪರ ಕಾಳಜಿಯನ್ನು ಪ್ರಕಟಿಸಿದ ಉದಯವಾಣಿ ವರದಿಗೆ ಸೂಕ್ತ ಸ್ಪಂದನೆಯ ಮೂಲಕ ನಿತ್ಯ ಸಂಚಾರ ಸುಗಮವಾಗಿದೆ.
– ಬಿ.ಸಿ. ರಾಜೇಶ್‌ ಆಚಾರ್ಯ, ನಿತ್ಯ ಸಂಚಾರಿ

ಸರ್ವಿಸ್‌ ರಸ್ತೆಯೂ ದುರಸ್ತಿ
ಬಿ.ಸಿ. ವರ್ಕ್‌ ಮುಗಿಸಲಾಗಿದೆ. ಮಳೆಯ ತೊಡಕಿನಿಂದ ಸ್ವಲ್ಪ ವಿಳಂಬವಾಗಿತ್ತು. ಹೆದ್ದಾರಿಯ ತಳ ಭಾಗದಲ್ಲಿ ನೀರು ತುಂಬಿ ಡಾಮರು ಕಿತ್ತು ಬಂದು ಗುಂಡಿ ನಿರ್ಮಾಣವಾಗಿತ್ತು. ಇದೀಗ ಸುಮಾರು 40 ಮೀ ಪ್ರದೇಶದಲ್ಲಿ ಸಿಆರ್‌ಎಂಬಿ65 ಡಾಮರೀಕರಣಗೊಳಿಸಲಾಗಿದೆ. ಇನ್ನುಳಿದಂತೆ ಐದು ದಿನಗಳೊಳಗಾಗಿ ಉದ್ಯಾವರದಿಂದ ಮುಕ್ಕದವರೆಗಿನ ಹೊಂಡಗುಂಡಿಗಳನ್ನು ಮುಚ್ಚಲಾಗುತ್ತದೆ. ಕಟಪಾಡಿ ಸರ್ವಿಸ್‌ ರಸ್ತೆಯ ಗುಂಡಿಗಳನ್ನೂ ಸರಿಪಡಿಸಲಾಗುತ್ತದೆ.
– ಶಿವಪ್ರಸಾದ್‌ ರೈ, ಟೋಲ್‌ ಮ್ಯಾನೇಜರ್‌, ನವಯುಗ ಕಂಪೆನಿ

Advertisement

Udayavani is now on Telegram. Click here to join our channel and stay updated with the latest news.

Next