Advertisement

Katpadi: ತ್ಯಾಜ್ಯ ಗುಂಡಿಯಾಗುತ್ತಿದೆ ಕುರ್ಕಾಲು ಮದಗ

03:52 PM Oct 18, 2024 | Team Udayavani |

ಕಟಪಾಡಿ: ಇಡೀ ಊರಿಗೆ ನೀರುಣಿಸುತ್ತಿದ್ದ ಕುರ್ಕಾಲು ಮದಗ ಸಮರ್ಪಕ ನಿರ್ವಹಣೆ ಇಲ್ಲದೆ ರೋಗ ಉತ್ಪತ್ತಿಯ ತಾಣವಾಗಿ ಊರಿಗೆ ಹಾಲಾಹಲ ಉಣಿಸುವ ಹಾದಿಯಲ್ಲಿದೆ!

Advertisement

ಕಾಪು ತಾಲೂಕಿನ ಕುರ್ಕಾಲು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಈ ಮದಗ ಸುಮಾರು ಅರ್ಧ ಎಕರೆಗೂ ಪ್ರದೇಶವನ್ನು ಆವರಿಸಿದೆ. ಇದೀಗ ಹೂಳು ತುಂಬಿ, ಗಿಡಗಂಟಿಗಳು, ಹುಲ್ಲುಗಳು ಬೆಳೆದು ನಿಂತಿದೆ. ಮಾತ್ರವಲ್ಲದೇ ಸ್ಥಳೀಯ ಕೆಲವು ಪ್ರಾಣಿಗಳ ಸಾಕಾಣಿಕೆ ಕೇಂದ್ರಗಳ ಹಸಿ ತ್ಯಾಜ್ಯಗಳು ಈ ಮದಗವನ್ನು ಸೇರುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಡೆಂಗ್ಯೂ, ಕಾಲರಾ ಮೊದಲಾದ ರೋಗಗಳು ಬಂದಾಗ ನೀರು ನಿಲ್ಲದಂತೆ ನೋಡಿಕೊಳ್ಳಿ ಎನ್ನುವ ಅಧಿಕಾರಿಗಳು ಕೆಲವು ಕಾಲೊನಿಗಳಿಗೆ ತೆರಳಿ ಪಾತ್ರೆ ಪಗಡೆಗಳನ್ನು ನೀರು ನಿಲ್ಲದಂತೆ ಕವುಚಿ ಹಾಕಿ ಎಂಬ ಸೂಚನೆ ನೀಡುತ್ತಾರೆ. ಆದರೆ ಇಲ್ಲಿ ತ್ಯಾಜ್ಯವನ್ನು ರಾಜಾರೋಷವಾಗಿ ಮದಗಕ್ಕೆ ಹಾಕಲಾಗುತ್ತಿದೆ. ನೀರಿನ ಆಸರೆಯು ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಬೆಳೆಯುತ್ತಿರುವ ಜತೆಗೆ ಗಬ್ಬು ನಾರುತ್ತಿದ್ದರೂ ಸ್ಥಳೀಯಾಡಳಿತ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಇಡೀ ಊರಿನ ಕೃಷಿಗೆ, ಕುಡಿಯುವ ನೀರಿನ ಅಂತರ್ಜಲ ಮಟ್ಟ ವೃದ್ಧಿಗೆ ಕಾರಣವಾಗಿದ್ದ ಕುರ್ಕಾಲು ಮದಗ ನಿರ್ವಹಣೆ ಇಲ್ಲದೆ ಶೋಚನೀಯ ಪರಿಸ್ಥಿತಿಯಲ್ಲಿದ್ದು, ಅದನ್ನು ತುರ್ತಾಗಿ ಸರಿಪಡಿಸಬೇಕೆಂಬ ಆಗ್ರಹವಿದೆ.

ರಾಸಾಯನಿಕ ಸಿಂಪಡಣೆ
ಈ ಬಗ್ಗೆ ಗ್ರಾಮಸ್ಥರಿಂದ ಗಮನಕ್ಕೆ ಬಂದಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದಂತೆ ಮುನ್ನಚ್ಚೆರಿಕೆ ಕ್ರಮವಾಗಿ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ರಾಸಾಯನಿಕ ಸಿಂಪಡಣೆಯನ್ನು ಮಾಡಲಾಗಿದೆ. ಸೂಕ್ತವಾಗಿ ಪರಿಶೀಲಿಸಿ ಸ್ಥಳೀಯವಾಗಿ ಹಸಿ ತ್ಯಾಜ್ಯ ಸುರಿಯುವವರನ್ನು ಗುರುತಿಸಿ ಕಟ್ಟು ನಿಟ್ಟಿನ ಕ್ರಮ ವಹಿಸಲಾಗುತ್ತದೆ.
-ಯೋಗಿತಾ, ಪಿಡಿಒ, ಕುರ್ಕಾಲು ಗ್ರಾ.ಪಂ.

ಪ್ರಸ್ತಾವನೆ ಸಲ್ಲಿಕೆ
ಮದಗ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಗೆ ಈಗಾಗಲೇ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ವಾಕಿಂಗ್‌ ಟ್ರಾಫಿಕ್‌ ಸಹಿತ ಕೆರೆದಂಡೆ ನಿರ್ಮಾಣ, ಹೂಳೆತ್ತುವ ಜತೆಗೆ ಪರಿಸರದ ನೂರಾರು ಎಕರೆ ಭೂ ಪ್ರದೇಶದಲ್ಲಿ ಸ್ವತ್ಛ ಅಂತರ್ಜಲ ಮಟ್ಟ ಕಾಯ್ದುಕೊಳ್ಳಲು ಕೋರಿಕೊಳ್ಳಲಾಗಿದೆ.
– ಪ್ರಶಾಂತ್‌ ಆನಂದ ಪೂಜಾರಿ, ಅಧ್ಯಕ್ಷರು, ಕುರ್ಕಾಲು ಗ್ರಾ.ಪಂ.

Advertisement

ನೂರಾರು ಮನೆಗಳಿಗೆ ಸಮಸ್ಯೆ

  • ಅಂಗನವಾಡಿ ಕೇಂದ್ರ, ಆರೋಗ್ಯ ಕೇಂದ್ರ ಹಾಗೂ ಸುಮಾರು 100ಕ್ಕೂ ಅಧಿಕ ಮನೆಗಳು ಇರುವ ಜನವಸತಿ ಪ್ರದೇಶದಲ್ಲಿ ಈ ಸಮಸ್ಯೆಯು ಜನರನ್ನು ಹೈರಾಣಾಗಿಸಿದೆ.
  • ಈ ಮದಗಕ್ಕೆ ಕೆಲವೊಂದು ಕಡೆಯಿಂದ ತ್ಯಾಜ್ಯ ನೀರು ಹರಿಸಲಾಗುತ್ತಿದೆ. ಇದನ್ನು ತಡೆಯಬೇಕು.
  • ಸೋಕ್‌ ಪಿಟ್‌, ಎಸ್‌ಟಿಪಿ ಪ್ಲಾಂಟ್‌ ನಿರ್ಮಿಸಲೇಬೇಕೆಂಬ ಕಟ್ಟುನಿಟ್ಟಿನ ಸೂಚನೆ ನೀಡುವುದಲ್ಲದೆ ಸಂಬಂಧಿತ ಇಲಾಖೆಗಳು ಇದರ ಬೆನ್ನುಹತ್ತಬೇಕು.
  • ಸಣ್ಣ ನೀರಾವರಿ ಇಲಾಖೆ ಎಚ್ಚೆತ್ತು ಮದಗದ ಸುತ್ತಲಿನ ಒತ್ತುವರಿಯನ್ನೂ ತೆರವುಗೊಳಿಸಿ, ನೀರನ್ನು ಮಲಿನಗೊಳಿಸುವವರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು.

ಏನು ಮಾಡಬಹುದು?

  • ಈ ಮದಗಕ್ಕೆ ತ್ಯಾಜ್ಯ ಸುರಿಯುವುದನ್ನು ನಿಲ್ಲಿಸಬೇಕು, ಒತ್ತುವರಿಯನ್ನು ತೆರವುಗೊಳಿಸಬೇಕು.
  • ಮದಗವನ್ನು ಹೂಳೆತ್ತಿ, ಸ್ವತ್ಛಗೊಳಿಸಿ ಅದರಲ್ಲಿರುವ ಎಲ್ಲ ಕಸ ಕಡ್ಡಿಗಳನ್ನು ತೆಗೆಯಬೇಕು.
  • ಮದಗದ ಸುತ್ತ ಸಾಕಷ್ಟು ಜಾಗವಿದ್ದು ಅದರಲ್ಲಿ ವಾಕಿಂಗ್‌ ಟ್ರ್ಯಾಕ್‌, ಉದ್ಯಾನ ನಿರ್ಮಿಸಿದರೆ ಊರಿಗೆ ಶೋಭೆ.
  • ಇದು ಊರಿನ ಅಂತರ್ಜಲದ ಮೂಲವಾಗಿ ಗಮನ ಸೆಳೆಯಲಿದೆ.
Advertisement

Udayavani is now on Telegram. Click here to join our channel and stay updated with the latest news.

Next