ಹೊಸದಿಲ್ಲಿ: ಕಥುವಾದಲ್ಲಿ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ನಡುವೆಯೇ, ಬಾಲಕಿಯ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಜಮ್ಮು- ಕಾಶ್ಮೀರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಬಾಲಕಿಯ ಕುಟುಂಬ ಸದಸ್ಯರು, ಆಕೆಯ ಪರ ವಾದಿಸುವ ವಕೀಲೆ ಹಾಗೂ ಈ ಕೇಸಿನಲ್ಲಿ ಅವರಿಗೆ ಸಹಾಯ ಮಾಡುತ್ತಿರುವ ವ್ಯಕ್ತಿಗೆ ಭದ್ರತೆ ಕಲ್ಪಿಸಿ ಎಂದು ಸೋಮವಾರ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪೀಠ ಆದೇಶಿಸಿದೆ. ಜತೆಗೆ, ಪ್ರಕರಣವನ್ನು ಬೇರೆ ರಾಜ್ಯಕ್ಕೆ(ಚಂಡೀಗಡ) ವರ್ಗಾಯಿಸುವಂತೆ ಕುಟುಂಬ ಮಾಡಿದ್ದ ಮನವಿಗೆ ಸಂಬಂಧಿಸಿ ರಾಜ್ಯ ಸರಕಾರದ ಪ್ರತಿಕ್ರಿಯೆಯನ್ನೂ ಕೋರಿದೆ. ವಿಚಾರಣೆ ವೇಳೆ ಹಾಜರಿದ್ದ ಮೃತ ಬಾಲಕಿಯ ತಂದೆ, ಜಮ್ಮು- ಕಾಶ್ಮೀರ ಪೊಲೀಸರು ನಡೆಸುತ್ತಿ ರುವ ತನಿಖೆ ತೃಪ್ತಿ ತಂದಿದ್ದು, ಸಿಬಿಐ ತನಿಖೆಯ ಅಗತ್ಯವಿಲ್ಲ ಎಂದಿದ್ದಾರೆ. ಬಳಿಕ ನ್ಯಾಯಪೀಠ ವಿಚಾರಣೆಯನ್ನು ಎ.27ಕ್ಕೆ ಮುಂದೂಡಿತು.
ಮಂಪರು ಪರೀಕ್ಷೆಗೆ ಒಳಪಡಿಸಿ: ಇನ್ನೊಂದೆಡೆ, ಕಥುವಾದ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರ ಮುಂದೆ 8 ಮಂದಿ ಆರೋಪಿಗಳನ್ನು ಸೋಮವಾರ ಹಾಜರುಪಡಿಸಲಾಗಿದೆ. ಈ ವೇಳೆ ಅವರು, ನಾವು ಯಾವುದೇ ತಪ್ಪು ಮಾಡಿಲ್ಲ. ನಮ್ಮನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಎಂದು ಮನವಿ ಮಾಡಿದ್ದಾರೆ.
ನನ್ನನ್ನೂ ರೇಪ್ ಮಾಡಿ, ಕೊಲ್ಲುವ ಸಾಧ್ಯತೆಯಿದೆ: ‘ನಾನು ಎಷ್ಟು ದಿನ ಬದುಕುತ್ತೇನೆ ಎಂಬುದು ನನಗೆ ಗೊತ್ತಿಲ್ಲ. ನನ್ನನೂ ಅತ್ಯಾ ಚಾರ ಮಾಡಬಹುದು ಅಥವಾ ಕೊಲ್ಲಬಹುದು. ನಿನ್ನನ್ನು ಕ್ಷಮಿಸುವುದಿಲ್ಲ ಎಂಬ ಬೆದರಿಕೆ ಕರೆಗಳೂ ನನಗೆ ಬಂದಿವೆ. ನಾನು ಅಪಾಯದಲ್ಲಿದ್ದೇನೆ.’ ಹೀಗೆಂದು ಹೇಳಿದ್ದು ಕಥುವಾ ಪ್ರಕರಣದಲ್ಲಿ ಬಾಲಕಿ ಪರ ವಾದಿಸಲು ಮುಂದಾಗಿರುವ ವಕೀಲೆ ದೀಪಿಕಾ ಎಸ್. ರಾಜಾವತ್. ತಮಗೆ ಬಂದಿರುವ ಬೆದರಿಕೆ ಕರೆಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ದೀಪಿಕಾ, ಪ್ರಕರಣದ ವಿಚಾರಣೆ ನಡೆಸಲು ಕಥುವಾ ಯೋಗ್ಯ ಸ್ಥಳವಲ್ಲ ಎಂದೂ ಹೇಳಿದ್ದಾರೆ. ಇದೇ ವೇಳೆ, ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಮತ್ತು ಅಕ್ರಮ ರೋಹಿಂಗ್ಯಾಗಳ ಗಡಿಪಾರಿಗೆ ಆಗ್ರಹಿಸಿ 12 ದಿನಗಳಿಂದ ಕೋರ್ಟ್ ಕಲಾಪ ಬಹಿಷ್ಕರಿಸಿದ್ದ ಜಮ್ಮು ಹೈಕೋರ್ಟ್ ವಕೀಲರು ಸೋಮವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಇನ್ನೊಂದೆಡೆ, ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಯುವತಿ ತನಗೆ 16 ವರ್ಷವೆಂದು ಹೇಳಿಕೊಂಡಿದ್ದು, ಆಕೆ ಅಪ್ರಾಪ್ತ ವಯಸ್ಕಳಲ್ಲ ಎಂದು ವೈದ್ಯರೊಬ್ಬರು ಹೇಳಿಕೆ ನೀಡಿರುವ ವಿಡಿಯೋವೊಂದು ಬಹಿರಂಗವಾಗಿದೆ. ಅದರಲ್ಲಿ ಅವರು ಆಕೆಗೆ 19 ವರ್ಷ ಆಗಿದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆಯ ವಯಸ್ಸು ದೃಢಪಡಿಸಲು ಸಿಬಿಐ ಮುಂದಾಗಿದೆ.
ಹುಸಿ ಹರತಾಳಕ್ಕೆ ಕೇರಳ ಸ್ತಬ್ಧ
ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಲಾಗಿದ್ದ ಹುಸಿ ಹರತಾಳವೊಂದು ಸೋಮವಾರ ಕೇರಳದ ಶಾಂತಿಯನ್ನು ಕದಡಿದೆ. ಕಥುವಾ ಪ್ರಕರಣ ಖಂಡಿಸಿ ರಾಜ್ಯಾದ್ಯಂತ ಹರತಾಳ ನಡೆಸಬೇಕೆಂಬ ಕರೆಯ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಪ್ರತಿಭಟನಾಕಾರರು ಬಸ್ಸುಗಳ ಸಂಚಾರಕ್ಕೆ ಅಡ್ಡಿ ಮಾಡಿದ್ದಲ್ಲದೆ, ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದು, ಕಲ್ಲು ತೂರಾಟ ನಡೆಸಿದ್ದು ಕಂಡುಬಂತು. ಕಣ್ಣೂರಿನಲ್ಲಿ ಲಾಠಿಚಾರ್ಜ್ ಮಾಡಿ ಪ್ರತಿಭಟನಾಕಾರರನ್ನು ಚದುರಿಸಬೇಕಾಯಿತು. ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ನಡೆದ ಘರ್ಷಣೆಯಲ್ಲಿ ಕೆಲವು ಪೊಲೀಸರೂ ಗಾಯಗೊಂಡರು. ಕಾಸರಗೋಡಿನಲ್ಲಿ ಕಲ್ಲುತೂರಾಟದಿಂದ ಅಲ್ಲಿನ ಸರಕಾರಿ ಬಸ್ ಚಾಲಕನಿಗೂ ಗಾಯಗಳಾದವು. ನೂರಾರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಯಾವ ಸಂಘಟನೆಯೂ ಬಂದ್‌ಗೆ ಕರೆ ನೀಡಿರಲಿಲ್ಲ ಎಂದಿದ್ದಾರೆ.
ಇಂದು ಗಡಿಯಲ್ಲಿ ನಮ್ಮ ಯೋಧರು ಸುರಕ್ಷಿತವಾಗಿಲ್ಲ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ನಮ್ಮ ಹೆಣ್ಣುಮಕ್ಕಳೂ ಸುರಕ್ಷಿತವಾಗಿಲ್ಲ. ಹೀಗಿದ್ದರೂ, ಪ್ರಧಾನಿ ಮೋದಿ ಅವರು ಮಾತ್ರ ವಿದೇಶ ಪ್ರವಾಸ ಕೈಗೊಂಡಿದ್ದಾರೆ.
– ಪ್ರವೀಣ್ ತೊಗಾಡಿಯಾ, ವಿ.ಎಚ್.ಪಿ. ಮಾಜಿ ಅಧ್ಯಕ್ಷ