Advertisement

ಅತ್ಯಾಚಾರ ಮತ್ತು ಹತ್ಯೆ: ನ್ಯಾಯಾಂಗ ಮಧ್ಯಪ್ರವೇಶ

06:00 AM Apr 14, 2018 | |

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕಥುವಾ ಮತ್ತು ಉತ್ತರ ಪ್ರದೇಶದ ಉನ್ನಾವ್‌ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿ ನ್ಯಾಯಾಂಗ ಮಧ್ಯಪ್ರವೇಶ ಮಾಡಿದೆ. ಕಥುವಾ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌, ಜಮ್ಮು ಬಾರ್‌ ಅಸೋಸಿಯೇಶನ್‌ ಸದಸ್ಯರಿಗೆ ಕಾನೂನು ಪ್ರಕ್ರಿಯೆಗೆ ತಡೆಯೊಡ್ಡದಂತೆ ತಾಕೀತು ಮಾಡಿದೆ. ಅಲಹಾಬಾದ್‌ ಹೈಕೋರ್ಟ್‌ ಉನ್ನಾವ್‌ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲದೀಪ್‌ ಸಿಂಗ್‌ ಸೆನಾರ್‌ರನ್ನು ವಶಕ್ಕೆ ತೆಗೆದುಕೊಂಡರೆ ಸಾಲದು, ಅವರನ್ನು ಬಂಧಿಸಬೇಕು ಎಂದು ಆದೇಶಿಸಿದೆ. ಅದರಂತೆ ಸಿಬಿಐ ಬಂಧಿಸಿದೆ.

Advertisement

ಈ ನಡುವೆ ಶಾಸಕನನ್ನು ರಕ್ಷಿಸಲಾಗುತ್ತಿದೆ ಎಂಬ ಆರೋಪದ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಪ್ರತಿಕ್ರಿಯೆ ನೀಡಿದ್ದು, ಯಾರನ್ನೇ ಆಗಲಿ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ವಕೀಲರಿಗೆ ಎಚ್ಚರಿಕೆ: ಕಥುವಾದಲ್ಲಿ 8 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಜಮ್ಮು ಬಾರ್‌ ಅಸೋಸಿಯೇಶನ್‌ ಸದಸ್ಯರಿಗೆ ನ್ಯಾಯಾಂಗ ಪ್ರಕ್ರಿಯೆ ಮೇಲೆ ತಡೆಯೊಡ್ಡದಂತೆ ಸುಪ್ರೀಂ ತಾಕೀತು ಮಾಡಿದ್ದು, ಬಾಲಕಿ ಪರ ವಾದ ಮಂಡಿಸಲು ಮುಂ ದಾದ ವಕೀಲರಿಗೆ ತಡೆಯೊಡ್ಡಿದ್ದಕ್ಕೂ ಆಕ್ಷೇಪ ಮಾ ಡಿದೆ. ಇದರ ಜತೆಗೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲು ಮುಂದಾದ ಪೊಲೀಸರನ್ನು ಎಳೆದಾಡಿದ್ದನ್ನೂ ಪ್ರಶ್ನಿಸಿದೆ. ಸಿಜೆಐ ದೀಪಕ್‌ ಮಿಶ್ರಾ, ನ್ಯಾ| ಎ.ಎಂ.ಖಾನ್ವಿಲ್ಕರ್‌ ಮತ್ತು ಡಿ.ವೈ.ಚಂದ್ರಚೂಡ್‌ ಅವರನ್ನೊಳಗೊಂಡ ಪೀಠ ಈ ಬಗ್ಗೆ ಬಾರ್‌ ಕೌನ್ಸಿಲ್‌ ಆಫ್ ಇಂಡಿಯಾ ಮತ್ತು ಇತರ ವಕೀಲರ ಸಂಘಟನೆಗಳಿಂದ ಪ್ರತಿಕ್ರಿಯೆ ಕೋರಿದೆ. 

ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದ ಪರವಾಗಿ ವಾದಿಸಿದ ನ್ಯಾಯವಾದಿ ಸೊಹೇಬ್‌ ಆಲಂ, ಸಿಬಿಐನಿಂದ ಪ್ರಕರಣದ ವಿಚಾರಣೆ ಬೇಡ. ಸ್ಥಳೀಯ ಕೋರ್ಟಲ್ಲಿ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಹೀಗಾಗಿ ತನಿಖೆಯನ್ನು ವರ್ಗಾಯಿಸಲಾಗದು ಎಂದು ಅರಿಕೆ ಮಾಡಿದ್ದಾರೆ.

ಶಾಸಕನ ಬಂಧಿಸಿ: ಉನ್ನಾವ್‌ನಲ್ಲಿ ಯುವತಿ ಅತ್ಯಾಚಾರಕ್ಕೆ ಸಂಬಂಧಿಸಿ ಅಲಹಾಬಾದ್‌ ಹೈಕೋರ್ಟ್‌, ಶಾಸಕ ಕುಲದೀಪ್‌ ಸಿಂಗ್‌ ಸೆನಾರ್‌ರನ್ನು ಬಂಧಿಸು ವಂತೆ ಸೂಚಿಸಿದ್ದು, ಮೇ 2ರ ಒಳಗಾಗಿ ತನಿಖಾ ಸ್ಥಿತಿಗತಿ ವರದಿ ಸಲ್ಲಿಸುವಂತೆ ಆದೇಶಿಸಿದೆ. 

Advertisement

ಸಿಎಂ ಜತೆ ಚರ್ಚೆ: ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಮಾತನಾಡಿ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ನ್ಯಾಯ ನೀಡಲಾಗುತ್ತದೆ ಎಂದಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಜಮ್ಮು ಮತ್ತು ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಜತೆ ಮಾತನಾಡಿದ್ದಾಗಿ ಹೇಳಿದ್ದಾರೆ. ಈ ನಡುವೆ ಕಥುವಾ ಪ್ರಕರಣ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ಮಾಡಲು ಕಾರ್ಯಕರ್ತರಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸೂಚಿಸಿದ್ದಾರೆ. 

ಗಲ್ಲು ಶಿಕ್ಷೆಯಾಗಲಿ
12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಮರಣ ದಂಡನೆ ವಿಧಿಸಬೇಕು ಎಂದಿದ್ದಾರೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ. ಕಥುವಾ ಪ್ರಕರಣದ ಬಳಿಕ ಪೋಕ್ಸೋ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ತಮ್ಮ ಸಚಿವಾಲಯದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ. 

ಸಚಿವರ ರಾಜೀನಾಮೆ
ಮೆಹಬೂಬಾ ಸಂಪುಟಕ್ಕೆ ಬಿಜೆಪಿಯ ಇಬ್ಬರು ಸಚಿ ವರು ಶುಕ್ರವಾರ ರಾತ್ರಿ ರಾಜೀನಾಮೆ ನೀಡಿದ್ದಾರೆ. ಕಥುವಾ ಪ್ರಕರಣ ಸಂಬಂಧ ಆಪಾದಿತರ ಪರ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಭಾಗವಹಿಸಿದ ಅರಣ್ಯ ಸಚಿವ ಚೌಧರಿ ಲಾಲ್‌ ಸಿಂಗ್‌ ಮತ್ತು ಕೈಗಾರಿಕಾ ಸಚಿವ ಚಂದ್ರ ಪ್ರಕಾಶ್‌ ರಾಜೀನಾಮೆ ನೀಡಿದವರು. 

ಉನ್ನಾವ್‌ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥರು ಯಾರೇ ಇರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇ ಬೇಕು. ಕೆಲವರು ಪ್ರಕರಣ ರಾಜಕೀಯ ಗೊಳಿಸುವ ಪ್ರವೃತ್ತಿ ಬಿಡಬೇಕು.
ಸ್ಮತಿ ಇರಾನಿ, ಕೇಂದ್ರ ಸಚಿವೆ

ಈ ಪ್ರಕರಣ ಕೋಪ ತರಿಸಿದೆ. ದಯವಿಟ್ಟು ಕ್ಷಮಿಸು ಮಗಳೇ. ನಿನ್ನಂಥ ಮಕ್ಕಳಿಗೆ ನ್ಯಾಯ ಒದಗಿಸಲು ಹೋರಾಡುವೆ.
ಕಮಲ್‌ಹಾಸನ್‌, ಎಂಎನ್‌ಎಂ ಸ್ಥಾಪಕ

ಎರಡೂ ಪ್ರಕರಣಗಳಲ್ಲಿ ಪ್ರತಿಪಕ್ಷಗಳು ಆಯ್ಕೆ ಮಾಡಿ ವಿವಾದ ಮಾಡುತ್ತಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಸಚಿವರು ಪೊಲೀಸರ ವಿರುದ್ಧ ಪ್ರತಿಭಟಿಸಿದ್ದು ಸಮರ್ಥನೀಯ.
ಮೀನಾಕ್ಷಿ ಲೇಖೀ, ಬಿಜೆಪಿ ನಾಯಕಿ

2012ರಲ್ಲಿ ನನ್ನ ಮಗಳ ಮೇಲೆ ಅತ್ಯಾಚಾರ ನಡೆದಾಗಿನಿಂದಲೂ ಬದಲಾವಣೆಯೆಂಬುದು ಆಗೇ ಇಲ್ಲ. ಮಗಳ ಹತ್ಯೆಗೈದವರಿಗೆ ಶಿಕ್ಷೆಯಾಗಿದ್ದರೆ, ದೇಶದ ಹೆಣ್ಣುಮಕ್ಕಳು ಸುರಕ್ಷಿತವಾಗಿರುತ್ತಿದ್ದರು.
ಆಶಾ ದೇವಿ, ನಿರ್ಭಯಾ ತಾಯಿ

Advertisement

Udayavani is now on Telegram. Click here to join our channel and stay updated with the latest news.

Next