ಕಥುವಾ , ಜಮ್ಮು ಕಾಶ್ಮೀರ : ಎಂಟು ವರ್ಷ ಪ್ರಾಯದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬಳಿಕ ಆಕೆಯನ್ನು ಕೊಂದ ಪ್ರಕರಣದ ಎಂಟು ಮಂದಿ ಬಂಧಿತ ಆರೋಪಿಗಳು ತಾವು ನಿರಪರಾಧಿಗಳೆಂದು ಕೋರ್ಟ್ ಮುಂದೆ ಬಿನ್ನವಿಸಿಕೊಂಡಿದ್ದಾರೆ ಮಾತ್ರವಲ್ಲದೆ ತಮ್ಮನ್ನು ಸುಳ್ಳು ಪತ್ತೆ (ಮಂಪರು) ಪರೀಕ್ಷೆಗೆ ಒಳಪಡಿಸುವಂತೆ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯವನ್ನು ಕೇಳಿಕೊಂಡಿದ್ದಾರೆ.
ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶರು ಇಂದು ಕಥುವಾ ರೇಪ್ ಆ್ಯಂಡ್ ಮರ್ಡರ್ ಕೇಸಿನ ವಿಚಾರಣೆಯನ್ನು ಆರಂಭಿಸಿ ಆರೋಪಿಗಳಿಗೆ ಚಾರ್ಜ್ ಶೀಟಿನ ಪ್ರತಿಗಳನ್ನು ನೀಡುವಂತೆ ಕ್ರೈಮ್ ಬ್ರಾಂಚ್‌ಗೆ ಆದೇಶಿಸಿದರು. ಬಳಿಕ ಪ್ರಕರಣದ ಮುಂದಿನ ವಿಚಾರಣೆಯನ್ನು ಎಪ್ರಿಲ್ 28ಕ್ಕೆ ನಿಗದಿಸಿದರು.
ಕಥುವಾ ರೇಪ್ ಆ್ಯಂಡ್ ಮರ್ಡರ್ ಕೇಸಿನ ಎಂಟು ಮಂದಿ ಬಂಧಿತ ಆರೋಪಿಗಳಲ್ಲಿ ಒಬ್ಟಾತನ ಅಪ್ರಾಪ್ತ ವಯಸ್ಸಿನವನಾಗಿದ್ದಾನೆ. ಆತನು ತನ್ನ ಜಾಮೀನು ಕೋರಿಕೆ ಅರ್ಜಿಯನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟರಿಗೆ ಸಲ್ಲಿಸಿದ್ದಾನೆ. ಅದರ ಮೇಲಿನ ವಿಚಾರಣೆ ಇಂದು ಮಧ್ಯಾಹ್ನ ನಡೆಯಲಿದೆ.
ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ ಸಣ್ಣ ಗ್ರಾಮವೊಂದರ ದೇವಸ್ಥಾನದಲ್ಲಿ ಈ ವರ್ಷ ಜನವರಿಯಲ್ಲಿ ಎಂಟು ವರ್ಷ ಪ್ರಾಯದ, ಅಲೆಮಾರಿ ಸಮುದಾಯದ, ಬಾಲಕಿಯೋರ್ವಳನ್ನು ಅಪಹರಿಸಿ ತಂದು ಆಕೆಯನ್ನು ಒಂದು ವಾರ ಕಾಲ ಕೂಡಿ ಹಾಕಿ ಮಾದಕ ವಸ್ತು ತಿನ್ನಿಸಿ ಆಕೆಯ ಮೇಲೆ ಗ್ಯಾಂಗ್ ರೇಪ್ ನಡೆಸಿ ಬಳಿಕ ಆಕೆಯನ್ನು ಕೊಂದು ಕಾಡಿನಲ್ಲಿ ಬಿಸಾಡಲಾಗಿತ್ತು.
ಈ ಪ್ರಕರಣದಲ್ಲಿ ಶಾಮೀಲಾದರೆನ್ನಲಾದ ಇಬ್ಬರು ಬಿಜೆಪಿ ಸಚಿವರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಕಥುವಾ ರೇಪ್ ಆ್ಯಂಡ್ ಮರ್ಡರ್ ಕೇಸ್ ದೇಶಾದ್ಯಂತ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು ವ್ಯಾಪಕ ಪ್ರತಿಭಟನೆಗಳನ್ನು ಕಾಣುತ್ತಿದೆ.