Advertisement

ಕತಕನಹಳ್ಳಿ ಸದಾಶಿವ ಮುತ್ಯಾನ ರಥೋತ್ಸವ

02:48 PM Apr 05, 2022 | Kavyashree |

‌ವಿಜಯಪುರ: ತಾಲೂಕಿನ ಕತಕನಹಳ್ಳಿ ಶ್ರೀಗುರು ಚಕ್ರವರ್ತಿ ಸದಾಶಿವ ಶಿವಯೋಗಿಗಳ ಜಾತ್ರಾ ಮಹೋತ್ಸವ ಹಾಗೂ ಜಾತ್ರೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸರಳ ಸಾಮೂಹಿಕ ವಿವಾಹದಲ್ಲಿ 41 ನವಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

Advertisement

ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಪೀಠಾಧಿಪತಿ ಶಿವಯ್ಯ ಮುತ್ಯಾ ಶ್ರೀಗಳು ಮಾತನಾಡಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಶುದ್ಧ ಕಾಯಕ ಮಾಡಿ ಜೀವನ ನಡೆಸಬೇಕು. ಹಿರಿಯರ ಮಾರ್ಗದರ್ಶನ ಪಡೆಯಬೇಕು. ಸತಿ-ಪತಿಗಳು ಶರೀರಗಳು ಎರಡಾದರೂ ಹೃದಯ ಒಂದೇ ಎಂಬ ಭಾವದಿಂದ ಜೀವಿಸಬೇಕು. ಸಾಮೂಹಿಕ ವಿವಾಹದಲ್ಲಿ ಹೊಸ ಬಾಳಿಗೆ ಕಾಲಿಟ್ಟ ಜೋಡಿಗಳಿಗೆ ಸಾಮರಸ್ಯದ ದಾಂಪತ್ಯ ಜೀವನ ಸಂದೇಶ ನೀಡಿದರು.

ಅಲ್ಲದೇ ಕಾಲಜ್ಞಾನದ ಸಂದೇಶವನ್ನೂ ನೀಡಿದ ಶಿವಯ್ಯ ಮುತ್ಯಾ, ಮಹಿಳೆಯೇ ಸಮಾಜದ ಕಣ್ಣಾಗಿದ್ದು, ಮಹಿಳೆ ನಮ್ಮ ಮೂಲ ಸಂಸ್ಕೃತಿ ಆಚರಣೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.

ಆಶೀರ್ವಚನ ನೀಡಿದ ಅಗಡಿಯ ಆನಂದವನ ಶಂಕರ ಭಟ್‌ ಜೋಶಿ, ಹೆಣ್ಣು ಮಗಳಿಗೆ ಜನ್ಮತಾಳಿದ ಮನೆ ಒಂದಾದರೆ, ಪಡೆದ ಮನೆ ಇನ್ನೊಂದು, ಅದನ್ನು ಅರಿತು ಎಲ್ಲರೂ ನನ್ನವರೆಂದು ಬದುಕನ್ನು ಕಟ್ಟಿಕೊಂಡು ಎರಡು ಮನೆತನದ ಕೀರ್ತಿಯನ್ನು ತರುತ್ತಾಳೆ ಮಹಿಳೆ. ಶ್ರೀಮಠದ ಜಾತ್ರಾ ಮಹೋತ್ಸವ ಪ್ರಯುಕ್ತ ರೈತ ಪರ, ಸಾಮಾಜಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವುದು ಅರ್ಥಪೂರ್ಣ ಎಂದರು.

ಬಸಯ್ಯ ಗಚ್ಚಿನಮಠ ಮಾತನಾಡಿದರು. ರವಿವಾರ ರಾತ್ರಿ ಜರುಗಿದ ಗುರು ಚಕ್ರವರ್ತಿ ಸದಾಶಿವ ಮುತ್ಯಾನ ಜಾತ್ರಾ ಮಹೋತ್ಸವದಲ್ಲಿ ವಾದ್ಯಮೇಳ ಸಹಿತ ಪೂಜೆ ವಿಧಿ ವಿಧಾನಗಳೊಂದಿಗೆ ರಥೋತ್ಸವ ಜರುಗಿತು.

Advertisement

ಕಾರ್ಯಕ್ರಮದಲ್ಲಿ ಬಬಲಾದಿ, ಚಮಕೇರಿ, ಕತಕನಹಳ್ಳಿ ಶ್ರೀಮಠದ ಗುರುಗಳಾದ ಶಿವಯ್ಯ ಶ್ರೀಗಳು ಸೇರಿದಂತೆ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು. ಜಾತ್ರೆ ನಿಮಿತ್ತ ಮುತ್ತೈದೆಯರಿಗೆ ಉಡಿ ತುಂಬಲಾಯಿತು. ರಥೋತ್ಸವ ಸಂದರ್ಭದಲ್ಲಿ ಭಕ್ತರು ಚುರುಮುರಿ, ಉತ್ತತ್ತಿ, ಬಾಳೆಹಣ್ಣು, ಬೆಂಡು ಬತ್ತಾಸು. ಶೇಂಗಾದ ಕಾಳು ಎಸೆದು ಭಕ್ತಿಯನ್ನು ಸಮರ್ಪಿಸಿದರು. ಜಾತ್ರೆ ಹಾಗೂ ಸಾಮೂಹಿಕ ವಿವಾಹದ ಸಂದರ್ಭದಲ್ಲಿ ಭಕ್ತರಿಗಾಗಿ ಶ್ರೀಮಠದಿಂದ 8 ಸಾವಿರ ಲೀಟರ್‌ ಹಾಲಿನಲ್ಲಿ ತಯಾರಿಸಿದ ಬಾಸುಂದಿ, ಪೂರಿ, ಅನ್ನ ಪ್ರಸಾದ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next