Advertisement

ನಾಳೆಯಿಂದ ಬಾನುಲಿಯಲ್ಲಿ “ಕಥಾ ಕಣಜ’ಸರಣಿ ಮಾಲಿಕೆ

06:55 AM May 27, 2018 | |

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆಕಾಶವಾಣಿ ಜತೆಗೂಡಿ ಬಾನುಲಿ ಕೇಳುಗರಿಗಾಗಿ “ಕಥಾ
ಕಣಜ’ ಸರಣಿ ಮಾಲಿಕೆ ರೂಪಿಸಿದ್ದು “ಶತಮಾನದ ಸಣ್ಣ ಕಥೆಗಳು’ ಆಗರದಿಂದ ಆರಿಸಿದ ಅತ್ಯುತ್ತಮ ಕಥೆಗಳು
ಮೇ 28ರಿಂದ ಆಕಾಶವಾಣಿಯಲ್ಲಿ ಮೂಡಿಬರಲಿವೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್‌.ಆರ್‌.ವಿಶುಕುಮಾರ್‌, ಈ ಹಿಂದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ರಾಷ್ಟ್ರಕವಿ ಡಾ.ಜಿ.ಎಸ್‌.ಶಿವರುದ್ರಪ್ಪ ಅವರಪ್ರಧಾನ ಸಂಪಾದಕತ್ವದಲ್ಲಿ ಮತ್ತು ಡಾ.ಗಿರಡ್ಡಿ  ಗೋವಿಂದರಾಜು ಹಾಗೂ ಬೋಳುವಾರು ಮೊಹಮದ್‌ ಕುಂಞ ಅವರ ಸಂಪಾದಕತ್ವ ದಲ್ಲಿ “ಶತಮಾನದ
ಸಣ್ಣ ಕಥೆಗಳು’ ಕಥಾ ಸಂಕಲನವನ್ನು ಹೊರತಂದಿತ್ತು. ಈ ಕಥಾ ಕಣಜದಲ್ಲಿರುವ ಕೆಲವು ಉತ್ತಮ ಕಥೆಗಳು ಈಗ
ಬಾನುಲಿಯಲ್ಲಿ ಮಾಲಿಕೆ ರೂಪದಲ್ಲಿ ಮೂಡಿ ಬರಲಿವೆ ಎಂದು ಹೇಳಿದರು.

ಸರಣಿ ಮಾಲಿಕೆಯಲ್ಲಿ ಪ್ರತಿವಾರ ಒಂದು ಕಥೆಯಂತೆ ಒಂದು ವರ್ಷ 52 ಕಥೆಗಳು ಪ್ರಸಾರವಾಗಲಿವೆ. ಕಥೆಗಾರನ ಮಾತು, ಕಥೆಯ ಓದು, ಹಿರಿಯ ಸಾಹಿತಿಗಳಿಂದ ವಿಮರ್ಶೆ ಮತ್ತು ಪೂರಕ ಸಂಗೀತವನ್ನು ಕಾರ್ಯಕ್ರಮ ಒಳಗೊಂಡಿರುತ್ತದೆ. ಹಿರಿಯ ಸಾಹಿತಿಗಳಾದ ಎಚ್‌.ಎಸ್‌.ವೆಂಕಟೇಶ ಮೂರ್ತಿ, ಕುಂ.ವೀರಭದ್ರಪ್ಪ, ಜಯಂತ್‌ ಕಾಯ್ಕಿಣಿ ಸೇರಿ ಸುಮಾರು 19 ಮಂದಿ ಕಥಾ ವಿಮರ್ಶಕರು ಇದರಲ್ಲಿ ಭಾಗವಹಿಸಲಿದ್ದಾರೆ. ಆಕಾಶವಾಣಿ ಕೇಳುಗರಲ್ಲಿ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಯಾವೆಲ್ಲ ಕಥೆಗಳನ್ನು ಕೇಳಬಹುದು?
15 ನಿಮಿಷಗಳ ಕಾರ್ಯಕ್ರಮದಲ್ಲಿ ಮೊದಲ ಮೂರ್‍ನಾಲ್ಕು ನಿಮಿಷಗಳು ಕಥೆಯನ್ನು ವಾಚಕರಿಂದ ಓದಿಸಲಾಗುವುದು. ನಂತರ, ಕಥೆ ಕುರಿತು ವಿಮರ್ಶಕರು ತಮ್ಮ ಮಾತುಗಳನ್ನಾಡಲಿದ್ದಾರೆ. ಸಣ್ಣ ಕಥೆಗಳ ಜನಕ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ “ಜೋಗ್ಯರ ಅಂಜಪ್ಪನ ಕೋಳಿಕಥೆ’,ಬಸವರಾಜ ಕಟ್ಟಿàಮನಿ ಅವರ “ಅಜ್ಞಾತವಾಸಿ’, ತ್ರಿವೇಣಿ ಅವರ “ಬೆಡ್‌ ನಂ-7′, ಗಿರಡ್ಡಿ ಗೋವಿಂದರಾಜು ಅವರ “ಹಂಗು’, ಪಿ.ಲಂಕೇಶ್‌ ಅವರ “ರೊಟ್ಟಿ’,ಜಯಂತ್‌ ಕಾಯ್ಕಿಣಿ ಅವರ “ದಗಡು ಪರಬನ ಅಶ್ವಮೇಧ’ ಸೇರಿದಂತೆ ವಿವಿಧ ಕಥೆಗಳನ್ನು ಶ್ರೋತೃಗಳು ಕೇಳಬಹುದು.

ಕಾರ್ಯಕ್ರಮ ಪ್ರಸಾರ: ಪ್ರತಿ ಸೋಮವಾರ ಬೆಳಗ್ಗೆ 8.20ಕ್ಕೆ ಎಫ್‌ .ಎಂ ರೈನ್‌ ಬೋ 101.3ರಲ್ಲಿ ಮತ್ತು ಪ್ರತಿ ಬುಧವಾರ ಬೆಳಗ್ಗೆ 7.15ಕ್ಕೆ ರಾಜ್ಯದ ಎಲ್ಲಾ 13 ಆಕಾಶವಾಣಿ ಕೇಂದ್ರಗಳಲ್ಲಿ ಮತ್ತು ಬೆಂಗಳೂರು ಆಕಾಶವಾಣಿ ಮುಖ್ಯ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಪ್ರತಿ ಶುಕ್ರವಾರ ಬೆಳಗ್ಗೆ 8.30ಕ್ಕೆ ವಿವಿಧ ಭಾರತಿಯಲ್ಲಿ ಮೂಡಿಬರಲಿದೆ. ಪ್ರತಿ ತಿಂಗಳ ಮೊದಲ ಶನಿವಾರ, ಕಥಾಕಣಜದ ನೇರ ಫೋನ್‌ ಇನ್‌ ರಸಪ್ರಶ್ನೆ ಕಾರ್ಯಕ್ರಮ ಇರಲಿದ್ದು ಸಾಹಿತಾಸಕ್ತರು ಇದರಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next