Advertisement

Pub license: ಕಾಟೇರ ಟೀಂ ಪಾರ್ಟಿ: ಪಬ್‌ ಲೈಸೆನ್‌ 25 ದಿನ ರದ್ದು

11:06 AM Jan 17, 2024 | Team Udayavani |

ಬೆಂಗಳೂರು: ಅವಧಿ ಮೀರಿ ಕಾರ್ಯಾಚರಣೆ ನಡೆಸಿದ ಆರೋಪದಡಿ ಯಶವಂತಪುರದ ಜೆಟ್‌ ಲ್ಯಾಗ್‌ ಪಬ್‌ನ ಬಾರ್‌ ಪರವಾನಗಿಯನ್ನು 25 ದಿನಗಳ ಕಾಲ ಅಮಾನತುಗೊಳಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ದಯಾನಂದ ಆದೇಶ ಹೊರಡಿಸಿದ್ದಾರೆ.

Advertisement

ಉತ್ತರ ವಿಭಾಗದ ಸುಬ್ರಹ್ಮಣ್ಯನಗರ ಪೊಲೀಸರು ನೀಡಿದ್ದ ವರದಿಯನ್ನು ಆಧರಿಸಿ 25 ದಿನಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದರು. ಕಾಟೇರ ಸಿನಿಮಾ ಯಶಸ್ಸಿನ ಹಿನ್ನೆಲೆಯಲ್ಲಿ ನಟರಾದ ದರ್ಶನ್‌, ನಿನಾಸಂ ಸತೀಶ್‌, ಡಾಲಿ ಧನಂಜಯ್‌, ಅಭಿಷೇಕ್‌ ಅಂಬರೀಷ್‌, ಚಿಕ್ಕಣ್ಣ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನಿರ್ದೇಶಕ ತರುಣ್‌ ಸುಧೀರ್‌, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಜೆಟ್‌ಲ್ಯಾಗ್‌ ಪಬ್‌ನಲ್ಲಿ ಜ.3ರಂದು ನಿಯಮ ಉಲ್ಲಂಘಿಸಿ ಮುಂಜಾನೆವರೆಗೆ ಪಾರ್ಟಿ ಮಾಡಿದ್ದರು. ಈ ಸಂಬಂಧ ಸುಬ್ರಮಣ್ಯನಗರ ಠಾಣೆ ಪೊಲೀಸರು ಪಬ್‌ನ ವಿರುದ್ಧ ಕರ್ನಾಟಕ ಪೊಲೀಸ್‌ ಕಾಯ್ದೆ ಮತ್ತು ಅಬಕಾರಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು.

ಸಾಮಾನ್ಯವಾಗಿ ಮೂರು ಬಾರಿ ಅಬಕಾರಿ ನಿಯಮ ಉಲ್ಲಂಘಿಸಿದರೆ ಲೈಸೆನ್ಸ್‌ ರದ್ದುಪಡಿಸಲಾಗುತ್ತದೆ. ಅಬಕಾರಿ ಕಾಯ್ದೆ ಉಲ್ಲಂಘನೆ ಸಂಬಂಧ ಜೆಟ್‌ಲ್ಯಾಗ್‌ ಪಬ್‌ ವಿರುದ್ಧ ಇದೇ ಮೊದಲ ಬಾರಿಗೆ ದೂರು ದಾಖಲಾಗಿದ್ದು, ಜಿಲ್ಲಾಧಿಕಾರಿ ಅವರು ಪಬ್‌ನ ಲೈಸೆ‌ನ್ಸ್‌ ಅಮಾನತು ಮಾಡಿ 25 ದಿನಗಳ ಮದ್ಯದ ವಹಿವಾಟು ನಡೆಸದಂತೆ ಆದೇಶಿಸಿದ್ದಾರೆ.

ಏನಿದು ಪ್ರಕರಣ: ಜ.3ರಂದು ಕಾಟೇರ ಸಿನಿಮಾ ಯಶಸ್ಸು ಸಂಭ್ರಮಿಸಲು, ಶಶಿರೇಖಾ ಜಗದೀಶ್‌ ಮಾಲೀಕತ್ವದ ಜೆಟ್‌ಲ್ಯಾಗ್‌ ಪಬ್‌ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ತಡರಾತ್ರಿ 1 ಗಂಟೆವರೆಗೆ ಮಾತ್ರ ಪಬ್‌ ತೆರೆಯಲು ಸರ್ಕಾರ ಆದೇಶವಿದೆ. ಆದರೆ, ಡಿ.4ರ ನಸುಕಿನ 3.30ರವರೆಗೆ ಎಲ್ಲ ಸ್ಟಾರ್‌ ನಟರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಅದಕ್ಕೆ ಪಬ್‌ನ ಮಾಲೀಕರು ನಟರಿಗೆ ಮದ್ಯ ಹಾಗೂ ಊಟದ ವ್ಯವಸ್ಥೆ ಕಲ್ಪಿಸಿದ್ದರು. ಅದಕ್ಕೂ ಮೊದಲು ಗಸ್ತು ಪೊಲೀಸರು ಎರಡು ಬಾರಿ ಬಂದು ಪಬ್‌ ಮುಚ್ಚುವಂತೆ ಸೂಚಿಸಿದ್ದರು. ಆದರೂ ನಸುಕಿನ ಜಾವ 3.30 ವರೆಗೂ ಪಬ್‌ನಲ್ಲಿ ಸೇವೆ ಒದಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಬ್‌ ಮಾಲೀಕರಾದ ಶಶಿರೇಖಾ ಜಗದೀಶ್‌ ಹಾಗೂ ಮ್ಯಾನೇಜರ್‌ ಪ್ರಶಾಂತ್‌ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ಬಳಿಕ ಪಬ್‌ನ ಸಿಸಿ ಕ್ಯಾಮೆರಾ ಆಧರಿಸಿ ಎಲ್ಲಾ ಸ್ಟಾರ್‌ ನಟರಿಗೆ ನೋಟಿಸ್‌ ನೀಡಲಾಗಿದ್ದು, ಎಲ್ಲರೂ ವಿಚಾರಣೆಗೆ ಹಾಜರಾಗಿದ್ದರು.

ಜೆಟ್‌ಲ್ಯಾಗ್‌ ಪಬ್‌ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಲು ಅವಕಾಶ ನೀಡಿರುವುದು ಮತ್ತು ಅಬಕಾರಿ ನಿಯಮ ಉಲ್ಲಂಘಿಸಿದ ಆರೋಪದಡಿ ಅಬಕಾರಿ ಇಲಾಖೆ ಉಪ ಆಯುಕ್ತರು ವರದಿ ನೀಡಿದ್ದರು. ಈ ವರದಿ ಆಧರಿಸಿ 25 ದಿನಗಳ ಕಾಲ ಜೆಟ್‌ಲ್ಯಾಗ್‌ ಪಬ್‌ನ ಪರವಾನಗಿ ಅಮಾನತು ಮಾಡಲಾಗಿದೆ. -ಕೆ.ಎ.ದಯಾನಂದ, ಜಿಲ್ಲಾಧಿಕಾರಿ

Advertisement

 

Advertisement

Udayavani is now on Telegram. Click here to join our channel and stay updated with the latest news.

Next