Advertisement
ಬಜಪೆ ಠಾಣೆ ಪೊಲೀಸರು ಕಟೀಲಿನ ಟ್ರಸ್ಟ್ ಅಧ್ಯಕ್ಷರ ಸಹಿತ ಆಡಳಿತ ಮಂಡಳಿ ವಿರುದ್ಧ ಶನಿವಾರ ಕೇಸು ದಾಖಲಿಸಿಕೊಂಡಿದ್ದಾರೆ. 10 ಜನರನ್ನು ಆರೋಪಿಗಳನ್ನಾಗಿ ಹೆಸರಿಸ ಲಾಗಿದೆ. ಟ್ರಸ್ಟ್ ಮೊದಲ ಆರೋಪಿ, ಅಧ್ಯಕ್ಷ ರಾಘವೇಂದ್ರ ಆಚಾರ್ಯ ದ್ವಿತೀಯ ಆರೋಪಿ. ಕಾರ್ಯದರ್ಶಿ ಶಿವಾಜಿ ಶೆಟ್ಟಿ, ಟ್ರಸ್ಟಿಗಳಾದ ಶ್ರೀನಿವಾಸ ಭಟ್, ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ರವಿರಾಜ್ ಆಚಾರ್ಯ, ಭುಜಂಗ ಶೆಟ್ಟಿ, ಸುಣ್ಣಂಬಳ ವಿಶ್ವೇಶ್ವರ ಭಟ್, ಉದಯಾನಂದ ಶೆಟ್ಟಿ ಮತ್ತು ರಾಮಣ್ಣ ಶೆಟ್ಟಿ ಇತರ ಎಂಟು ಮಂದಿ.
ಕಟೀಲು ಕ್ಷೇತ್ರದ ಆರು ಯಕ್ಷಗಾನ ಮೇಳಗಳನ್ನು ನಡೆಸುವ ಜವಾಬ್ದಾರಿಯನ್ನು ಧಾರ್ಮಿಕ ದತ್ತಿ ಇಲಾಖೆ ನಿಯಮಾನುಸಾರ ಟೆಂಡರ್ ಕರೆದು ಏಲಂ ಮಾಡುವ ಮೂಲಕ ಸೂಕ್ತ ವ್ಯಕ್ತಿಗಳಿಗೆ ವಹಿಸುವುದು ಸೂಕ್ತ. ಜತೆಗೆ ಟ್ರಸ್ಟ್‌ನ ಎಲ್ಲ ವ್ಯವಹಾರಗಳನ್ನು ಮುಟ್ಟುಗೋಲು ಹಾಕಿ ಅದನ್ನು ದೇವಸ್ಥಾನದ ಸುಪರ್ದಿಗೆ ಪಡೆದು ದೇವಸ್ಥಾನ ದಿಂದಲೇ ಮುಂದುವರಿಸಲು ಸೂಕ್ತ ಆದೇಶ ಹೊರಡಿಸಬೇಕು ಎಂದು ಕೋರಿ ಡಿಸಿ ಜುಲೈಯಲ್ಲಿ ವರದಿ ಸಲ್ಲಿಸಿ ದ್ದರು. ಸರಕಾರದಿಂದ ಅಂತಿಮ ತೀರ್ಮಾನ ಬಂದಿಲ್ಲ. ಶ್ರೀ ಕಟೀಲು ಯಕ್ಷಗಾನ ಮೇಳದಿಂದ ನೊಂದ ಕೆಲವು ಕಲಾವಿದರು ಹಾಗೂ ಸಂಘಟನೆಯವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಡಿಸಿ ಸಲ್ಲಿಸಿರುವ ವರದಿ ಆಧರಿಸಿ ಸೆ. 20ರಂದು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಕೆಯಾಗಿತ್ತು. ಪರಿಶೀಲನೆ ನಡೆಸಿದ ನ್ಯಾಯಾಲಯ ಸಿಆರ್‌ಪಿಸಿ ಸೆಕ್ಷನ್ 156 (3)ರಡಿ ದೂರನ್ನು ವಿಚಾರಣೆಗೆ ಸ್ವೀಕರಿಸಿದ್ದು, ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿದೆ. ಟ್ರಸ್ಟ್‌ಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಿಂದ ನಮ್ಮ ಠಾಣೆಗೆ ರೆಫರ್ ಆಗಿದೆ. ಎಫ್‌ಐಆರ್ ದಾಖಲಿಸಿದ್ದು, ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿ ತನಿಖೆ ನಡೆಸುವುದಾಗಿ ಬಜಪೆ ಠಾಣೆ ಪಿಐ ಪರಶಿವಮೂರ್ತಿ ತಿಳಿಸಿದ್ದಾರೆ.
Related Articles
ದೂರುದಾರರ ಪರ ವಕೀಲ ರಾಜೇಶ್ ಕುಮಾರ್ ಅಮಾrಡಿ ಪ್ರತಿಕ್ರಿಯಿಸಿ, ಶ್ರೀ ಕಟೀಲು ದೇವಸ್ಥಾನದ ಯಕ್ಷಧರ್ಮ ಬೋಧಿನಿ ಟ್ರಸ್ಟ್ ವ್ಯವಹಾರಗಳು ಅಸಮರ್ಪಕವಾಗಿದ್ದು, ಸರಕಾರಿ ಹಣ ದುರ್ಬಳಕೆಯಾಗುತ್ತಿದೆ. ಪ್ರಕರಣದಲ್ಲಿ ಟ್ರಸ್ಟ್ ಅನ್ನು ಸರಕಾರ ಮುಟ್ಟುಗೋಲು ಹಾಕುವಂತೆ ಜಿಲ್ಲಾಧಿಕಾರಿಗಳು ಈಗಾಗಲೇ ವರದಿ ನೀಡಿದ್ದು, ಅದನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ. ಟ್ರಸ್ಟ್ ಮೇಲಿನ ಆರೋಪದ ಬಗ್ಗೆ ಈಗ ನ್ಯಾಯಾಲಯದ ಪರಿಧಿಯಲ್ಲಿ ಪೊಲೀಸರಿಂದ ತನಿಖೆ ನಡೆಯಲಿದೆ. ಪೊಲೀಸರು ಕ್ರಿಮಿನಲ್ ಕೇಸ್ ದಾಖಲಿಸಿಕೊಂಡು ತನಿಖೆ ಮಾಡಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಬೇಕಾಗುತ್ತದೆ. ಸರಕಾರದವರೇ ನೀಡಿರುವ ವರದಿ ಆಧರಿಸಿ ಕೋರ್ಟ್‌ಗೆ ಖಾಸಗಿ ದೂರು ದಾಖಲಿಸಿರುವ ಕಾರಣ ಇದೊಂದು ಅಪರೂಪದ ಮತ್ತು ಗಂಭೀರ ಪ್ರಕರಣವಾಗಲಿದೆ. ಈ ದೂರಿನಲ್ಲಿ ಜಿಲ್ಲಾಧಿಕಾರಿಯನ್ನೂ ಸಾಕ್ಷಿದಾರರನ್ನಾಗಿ ಮಾಡಲಾಗಿದೆ ಎಂದಿದ್ದಾರೆ.
Advertisement
ನಮಗೆ ಮಾಹಿತಿ ಬಂದಿಲ್ಲನಮ್ಮ ಅಥವಾ ಟ್ರಸ್ಟ್ ವಿರುದ್ಧ ಕೇಸ್ ದಾಖಲು ಮಾಡಿರುವ ಬಗ್ಗೆ ನಮಗೆ ಇಲ್ಲಿಯ ವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಈ ಹಿಂದೆ ದೇವಸ್ಥಾನದ ಕಡೆಯಿಂದ ಒಂದು ನೋಟಿಸ್ ಬಂದಿದ್ದು, ಅದಕ್ಕೆ ಸೂಕ್ತ ಉತ್ತರ ನೀಡಲಾಗಿದೆ. ಈಗ ಕೋರ್ಟ್‌ನಲ್ಲಿ ದೂರು ದಾಖಲಾಗಿರುವ ಬಗ್ಗೆ ಅಥವಾ ನಮ್ಮ ವಿರುದ್ಧ ತನಿಖೆಗೆ ಸೂಚಿಸಿರುವ ಬಗ್ಗೆ ಗೊತ್ತಿಲ್ಲ.
– ರಾಘವೇಂದ್ರ ಆಚಾರ್ಯ, ಯಕ್ಷಧರ್ಮ ಬೋಧಿನಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ