Advertisement

ಕಟೀಲು ಮೇಳ: ದೇಗುಲದ ಮೊಕ್ತೇಸರರು, ಸೇವಾಕರ್ತರಿಗೆ ಹೈಕೋರ್ಟ್‌ ಅವಕಾಶ

09:40 AM Nov 23, 2019 | mahesh |

ಬೆಂಗಳೂರು: ಪಾರಂಪರಿಕ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳವನ್ನು ಈ ಹಿಂದೆ ದೇವಸ್ಥಾನದ ಪಾರಂಪರಿಕ ಮೊಕ್ತೇಸರರು ಮತ್ತು ಸೇವಾಕರ್ತರು ನಡೆಸಿಕೊಂಡು ಹೋಗುತ್ತಿದ್ದ ರೀತಿಯಲ್ಲೇ ಈ ವರ್ಷವೂ ನಡೆಸಿಕೊಂಡು ಹೋಗಲು ಹೈಕೋರ್ಟ್‌ ಅಸ್ತು ಎಂದಿದೆ.

Advertisement

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಪಾರಂಪರಿಕ ಮೊಕ್ತೇಸರರು ಸಲ್ಲಿಸಿದ್ದ ಅರ್ಜಿಯು ನ್ಯಾ| ಬಿ. ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು. ವಿಚಾರಣೆ ವೇಳೆ ವಾದ-ಪ್ರತಿವಾದ ಆಲಿಸಿದ ಬಳಿಕ ಯಕ್ಷಗಾನ ಮೇಳವನ್ನು ಈ ಹಿಂದೆ ದೇವಸ್ಥಾನದ ಪಾರಂಪರಿಕ ಮೊಕ್ತೇಸರರು ಮತ್ತು ಸೇವಾಕರ್ತರು ನಡೆಸಿಕೊಂಡು ಬಂದ ರೀತಿಯಲ್ಲೇ ಈ ವರ್ಷವೂ ಮುಂದುವರಿಸಲಿ. ಅದೇ ರೀತಿ ಈ ಮೇಳದ ಮೇಲ್ವಿಚಾರಣೆಯನ್ನು ಜಿಲ್ಲಾಧಿಕಾರಿಗಳು ನಡೆಸಲು ಮತ್ತು ಮೇಳದ ಲೆಕ್ಕಪತ್ರವನ್ನು ಪ್ರತಿ ಹದಿನೈದು ದಿನಗಳಿಗೊಮ್ಮೆ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು ಎಂದು ನಿರ್ದೇಶ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಡಿ.9ಕ್ಕೆ ಮುಂದೂಡಿತು.

ಗುರುವಾರದ ವಿಚಾರಣೆ ವೇಳೆ ಕೋರ್ಟ್‌ ಮುಂದೆ ಹಾಜರಾದ ಮುಜರಾಯಿ ಆಯಕ್ತರು, ತಾವು ಹೊರಡಿಸಿದ ಅಧಿಸೂಚನೆ ವಾಪಸ್‌ ಪಡೆಯುವುದಾಗಿ ಮುಚ್ಚಳಿಕೆ ಬರೆದುಕೊಟ್ಟರು. ನ್ಯಾಯಾಲಯದ ತಡೆಯಾಜ್ಞೆ ಇದ್ದಾಗಲೂ ಆದೇಶ ಹೊರಡಿಸಿರುವುದಕ್ಕೆ ಕೋರ್ಟ್‌ ಕ್ಷಮೆಯಾಚಿಸಿದ ಮುಜರಾಯಿ ಆಯುಕ್ತರು ಈ ಕುರಿತು ಶುಕ್ರವಾರ (ನ.22) ಅನುಪಾಲನ ವರದಿ ಸಲ್ಲಿಸುವುದಾಗಿ ಹೇಳಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಈ ಮೇಲಿನಂತೆ ನಿರ್ದೇಶ ನೀಡಿ ವಿಚಾರಣೆ ಮುಂದೂಡಿತು.

ಮೇಳದ ಆಯೋಜನೆ ಮತ್ತು ಲೆಕ್ಕಪತ್ರದ ಕುರಿತು ಕೆಲವೊಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸುವಂತೆ ಮುಜರಾಯಿ ಆಯುಕ್ತರು ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಅದನ್ನು ಆಧರಿಸಿ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದರು. ಆದರೆ ತನಿಖೆ ನಡೆಸುವಾಗ ಜಿಲ್ಲಾಧಿಕಾರಿಗಳು ದೇವಸ್ಥಾನದ ಆಕ್ಷೇಪಣೆಗಳನ್ನು ಪರಿಗಣಿಸಿಲ್ಲ ಮತ್ತು ಸೇವಾಕರ್ತರು ಸಲ್ಲಿಸಿದ್ದ ಮಧ್ಯಾಂತರ ಮನವಿಗಳನ್ನು ಮಾನ್ಯ ಮಾಡಿಲ್ಲ. ಏಕಪಕ್ಷೀಯವಾಗಿ ಅಧಿಕಾರ ವ್ಯಾಪ್ತಿ ಮೀರಿ ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ ಎಂಬುದು ಅರ್ಜಿದಾರರ ವಾದವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next