ಕಟೀಲು: ದೇವತಾರಾಧನೆ ಮಾನವನಲ್ಲಿ ಸಂತಸ, ನೆಮ್ಮದಿ ನೀಡುತ್ತದೆ ಎಂದು ಕಾಸರಗೋಡು ಎಡನೀರು ಮಠದ ಶ್ರೀ ಕೇಶವಾ ನಂದಭಾರತೀ ತೀರ್ಥ ಸ್ವಾಮೀಜಿ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸೋಮವಾರ ಭ್ರಾಮರೀ ಸಭಾಂಗಣದಲ್ಲಿ ನಡೆದ 6ನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸವೇ ನಿಜವಾದ ಕೆಲಸ. ಭಕ್ತಿ ಮಾರ್ಗದಿಂದ ಭಗವಂತನ ಕೃಪೆಗೆ ಪಾತ್ರರಾದಾಗ ಸುಖೀ ಜೀವನ ಪ್ರಾಪ್ತವಾಗುತ್ತದೆ ಎಂದು ಬೆಂಗಳೂರು ಭೀಮನಕಟ್ಟೆ ಭೀಮಸೇತು ಮುನಿವೃಂದ ಮಠದ ಶ್ರೀ ರಘುವರೇಂದ್ರತೀರ್ಥ ಸ್ವಾಮೀಜಿ ತಿಳಿಸಿದರು.
ಅರಬಿಂದೊ ಪಿಯು ಕಾಲೇಜು ಉಪನ್ಯಾಸಕ ನಟೇಶ್ ಶಿವಮೊಗ್ಗ ಅವರು “ಬದುಕಿನೊಳಗಿನ ಕಗ್ಗ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಮೂಡುಬಿದಿರೆ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕುಲದೀಪ್ ಎಂ. ಅಧ್ಯಕ್ಷತೆ ವಹಿಸಿದ್ದರು.ಮಾಣಿಲ ಮೋಹನದಾಸ ಸ್ವಾಮೀಜಿ, ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇಗುಲದ ಆನುವಂಶಿಕ ಅರ್ಚಕ ಕೆ. ಕೃಷ್ಣ ಭಟ್, ಪೊಳಲಿ ದೇಗುಲದ ಆನುವಂಶಿಕ ಅರ್ಚಕ ಮತ್ತು ಮೊಕ್ತೇಸರ ಮಾಧವ ಭಟ್, ಎಡಪದವು ಗೋಪಾಲಕೃಷ್ಣ ದೇಗುಲದ ಮುರಳಿ ತಂತ್ರಿ, ಮೂಡಬಿದಿರೆ ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಅಡಿಗಳ್ ಶ್ರೀನಿವಾಸ ಭಟ್ ಮೊದವಲಾದವರು ಉಪಸ್ಥಿತರಿದ್ದರು.
ಕಟೀಲು ದೇಗುಲದ ಆನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ಉದ್ಯಮಿ ಗಿರೀಶ್ ಶೆಟ್ಟಿ ಕಟೀಲು ವಂದಿಸಿದರು. ಉಪನ್ಯಾಸಕ ಸಂತೋಷ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.