ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ನಿಮಿತ್ತ ಆಯೋ ಜಿಸಿದ ಧಾರ್ಮಿಕ ಕಾರ್ಯಕ್ರಮದ ಅಂಗ ವಾಗಿ ಶ್ರೀ ಭ್ರಾಮರೀಗೆ ಪ್ರೀತ್ಯರ್ಥವಾಗಿ ಭ್ರಾಮರೀ ವನದಲ್ಲಿ ನಡೆಯುವ ಸಹಸ್ರ ಚಂಡಿಕಾ ಯಾಗದ ಪೂರ್ಣಾಹುತಿ ಸೋಮವಾರ ಜರಗಿತು. ಭ್ರಾಮರೀ ವನದಲ್ಲಿ ಬೆಳಗ್ಗೆ 7ರಿಂದ ಸಹಸ್ರಚಂಡಿಕಾ ಯಾಗ ಆರಂಭ ವಾಯಿತು. ಸುಮಾರು 180ಕ್ಕೂ ಅಧಿಕ ಅರ್ಚಕರು 11ಉಪ ಕುಂಡ ಸಹಿತ ಪ್ರಧಾನ ಹೋಮಕುಂಡದಲ್ಲಿ ಹವನ ನಡೆದು 12.30ಕ್ಕೆ ಪೂರ್ಣಾ ಹುತಿಯಾಯಿತು.
ದೇವಸ್ಥಾನ ಪ್ರಧಾನ ಅರ್ಚಕ ವೇ|ಮೂ| ವಾಸುದೇವ ಆಸ್ರಣ್ಣ, ಅರ್ಚಕ ವೃಂದ, ದೇವಸ್ಥಾನ ವೇದವ್ಯಾಸ ತಂತ್ರಿ, ಕೃಷ್ಣರಾಜ ತಂತ್ರಿಗಳು, ಆಡಳಿತ ಮಂಡಳಿಯ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಉಪಸ್ಥಿತಿಯಲ್ಲಿ ಯಾಗದ ಪ್ರಕ್ರಿಯೆಗಳು ಜರಗಿದವು. ಸುಮಾರು 4 ಲಾರಿಯಷ್ಟು ಹಲಸಿನಕಟ್ಟಿಗೆ ಸಹಿತ ವಿವಿಧ ಯಾಜ್ಞಕ ಸಮಿದೆಗಳು,ಅಷ್ಟೆ ಪ್ರಮಾಣದ ತುಪ್ಪ ಇನ್ನಿತರ ವಸ್ತುಗಳು ಹೋಮಿಸಿದವು.
ಭೂಮಿಯಲ್ಲಿ ಅತಿವೃಷ್ಟಿ, ಅನಾ ವೃಷ್ಟಿ, ಭೂಕಂಪ, ಮಹಾ ಮಾರಿಗಳು ಉಂಟಾದಾಗ, ರಾಜ ಕ್ಷೊಭೆ ಯಾದಾಗ, ರಾಜನಿಗೆ ವಿಪತ್ತು ಬಂದಾಗ, ದೇಶದಲ್ಲಿ ವಿಪ್ಲವ ಬಂದಾಗ, ವಂಶಕ್ಷಯದ ಲಕ್ಷಣ ಕಂಡುಬಂದಾಗ, ಯುದ್ಧಭೀತಿಗಳು ಪರಾಜಯದ ಭೀತಿಗಳು ಬಂದಾಗ ಸಹಸ್ರ ಚಂಡಿಕಾಯಾಗ ಮಾಡಬೇಕು ಎಂದು ಶಾಸ್ತ್ರಗಳು ತಿಳಿಸಿವೆ. ದೇವೀ ಮಹಾತ್ಮೆ, ಸಪ್ತಶತಿ ಪಾರಾಯಣವನ್ನು ಸಾವಿರ ಬಾರಿ ಪಠಿಸಿದ ಅನಂತರ ಇದರ ದಶಾಂಶದಷ್ಟು ಅಂದರೆ ನೂರು ಸಲ ಹೋಮ ತರ್ಪಣ ನಡೆಯಲಿದೆ. ಹದಿ ನೆಂಟು ಕ್ವಿಂಟಲ್‌ನಷ್ಟು ಪರಮಾನ್ನ ಹೋಮಿಸಲ್ಪಡುತ್ತದೆ. ಇದರಲ್ಲಿ ಪರಿವಾರವಾಗಿ ಗಣಪತಿ, ನವಗ್ರಹಗಳು, ಯೋಗಿನಿ ದೇವತೆಗಳಿಗೂ ಹೋಮ ಜರಗಿತು. ಇದರ ಒಂದು ಕುಂಡ ದಲ್ಲಿ ಹತ್ತು ಮಂದಿ ಹೋಮ ಮಾಡಲಿದ್ದು, ಒಂದು ಸಾವಿರ ಸಲ ಪಾರಾಯಣ ಮಾಡಿ ಪೂಜೆ ಸಲ್ಲಿಸಿದರು. ಚಂಡಿಕಾ ಯಾಗಕ್ಕೆ ಏಲಕ್ಕಿ, ಲವಂಗ, ರಕ್ತ ಚಂದನ, ಗುಗ್ಗುಳ, ಹಾಲು, ಬಾಳೆಹಣ್ಣು, ಕೂಷ್ಮಾಂಡ, ಕಬ್ಬು, ತೆಂಗಿನಕಾಯಿ, ಸಾಸಿವೆ, ಎಳ್ಳು ಪುಷ್ಪ, ಧಾನ್ಯ ಗಳು ಸಹಿತ 21 ಬಗೆಯ ದ್ರವ್ಯಗಳು ಸಮರ್ಪಿತವಾದವು.
ಚಂಡಿಕಾ ಹೋಮದಿಂದ ಪುಣ್ಯ ಪ್ರಾಪ್ತಿ
ಕಟೀಲು ಭ್ರಾಮರಿಗೆ ಚಂಡಿಕಾ ಹೋಮವು ಅತೀ ಪವಿತ್ರವಾದ ಸೇವೆಯಾಗಿದ್ದು, ಸಹಸ್ರ ಚಂಡಿಕಾಯಾಗದಿಂದ ಲಕ್ಷ ಅಶ್ವಮೇಧ ಯಾಗದ ಪುಣ್ಯ ಪ್ರಾಪ್ತಿಯಾಗುತ್ತದೆ. ಮುಖ್ಯವಾಗಿ ಭಯೋತ್ಪಾದನೆಯಂತಹ ವಿಪ್ಲವದಿಂದ ದೂರವಾಗಿ ನಾಡಿಗೆ ಸುಭಿಕ್ಷೆ ಯಾಗುತ್ತದೆ ಎಂಬ ಪ್ರತೀತಿ ಇದೆ.
- ವಿದ್ವಾನ್ ಪಂಜ ಭಾಸ್ಕರ ಭಟ್, ಜೋತಿಷಿ