Advertisement

ಶ್ರೀ ಕ್ಷೇತ್ರ ಕಟೀಲಿನಲ್ಲಿ ಬ್ರಹ್ಮಕಲಶಾಭಿಷೇಕದ ಮಹಾವೈಭವ; ನಾಳೆ ನಾಗಮಂಡಲ

09:50 AM Feb 01, 2020 | mahesh |

ಮಂಗಳೂರು: ಭಕ್ತರ ಇಷ್ಟಾರ್ಥ ಗಳನ್ನು ಕರುಣಿಸುವ ಮಹಾಮಾತೆ, ನಂದಿನಿ ನದಿಯ ಮಡಿಲಲ್ಲಿ ಪವಡಿಸಿದ ಸಾವಿರ ಸೀಮೆಯ ಆದಿಮಾಯೆ, ಭ್ರಾಮರಿ ಅವತಾರಿಣಿ ಶ್ರೀ ದುರ್ಗಾಪರಮೇಶ್ವರಿಗೆ ಗುರುವಾರ ಪರಮ ಪವಿತ್ರ ಬ್ರಹ್ಮ ಕಲಶೋತ್ಸವ ವೈಭವದಿಂದ ನೆರವೇರಿತು. ಈ ಪುಣ್ಯ ಸಂಭ್ರಮವನ್ನು ಸಹಸ್ರಾರು ಭಕ್ತರು ಕಣ್ತುಂಬಿ ಕೊಂಡು ಭಕ್ತಿಭಾವದಿಂದ ಪುನೀತರಾದರು.

Advertisement

ಸೂರ್ಯೋದಯಕ್ಕೆ ಮುನ್ನವೇ ವೈದಿಕ ವಿಧಿ ವಿಧಾನಗಳು ಆರಂಭವಾದವು. ಹಲವು ಭಕ್ತರು ನೇರವಾಗಿ ವೀಕ್ಷಿಸಿದರೆ, ಲಕ್ಷಾಂತರ ಮಂದಿ ಕ್ಷೇತ್ರದ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಎಲ್‌ಇಡಿ ಪರದೆ ಮತ್ತು ಸ್ಥಳೀಯ ವಾಹಿನಿಗಳ ನೇರಪ್ರಸಾರದ ಮೂಲಕ ಕಣ್ತುಂಬಿಕೊಂಡರು.

ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಗಳ ಆಚಾರ್ಯತ್ವ, ಶಿಬರೂರು ಕೃಷ್ಣರಾಜ ತಂತ್ರಿಗಳ ಸಹಯೋಗದೊಂದಿಗೆ ವಿಧಿವಿಧಾನಗಳು ನೆರವೇ ರಿದವು. ಬ್ರಹ್ಮಕಲಶೋತ್ಸವದ ಬಳಿಕ ಸಾವಿರಾರು ಭಕ್ತರು ಸರತಿಯಲ್ಲಿ ನಿಂತು ಶ್ರೀ ದೇವಿಯ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.

ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಆನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟ ರಮಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ ಅವರ ನೇತೃತ್ವದಲ್ಲಿ ಬ್ರಹ್ಮಕಲಶದ ವಿಧಿವಿಧಾನಗಳು ನೆರವೇರಿದವು. ಸಂಸದ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಆಡಳಿತ ಸಮಿತಿ ಅಧ್ಯಕ್ಷ ಸನತ್‌ ಕುಮಾರ್‌ ಶೆಟ್ಟಿ ಕೊಡೆತ್ತೂರುಗುತ್ತು ಸೇರಿದಂತೆ ಹಲವು ಗಣ್ಯರು, ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

1,001 ಕಲಶಗಳ ಮೂಲಕ ಬ್ರಹ್ಮಕಲಶ
ಪ್ರಧಾನ ಸ್ವರ್ಣಕಲಶ ಸಹಿತ 1,001 ಬೆಳ್ಳಿಯ ಕಲಶಗಳಿಂದ ಕಟೀಲಿನ ಭ್ರಮರಾಂಬಿಕೆಗೆ ಬ್ರಹ್ಮಕಲಶಾಭಿಷೇಕ ನೆರವೇರಿತು. ಕಲಶ ಮಂಡಲ ಪೂಜೆಯ ವೇಳೆ ಪ್ರಧಾನ ಸ್ವರ್ಣ ಕಲಶವನ್ನು ಮಂಡಲದ ಮಧ್ಯೆ ಪ್ರತಿಷ್ಠಾಪಿಸ ಲಾಯಿತು. 24 ದೊಡ್ಡ ಗಾತ್ರದ ಬೆಳ್ಳಿಯ ಖಂಡ ಕಲಶಗಳು ಮತ್ತು 976 ಬೆಳ್ಳಿಯ ಸಣ್ಣ ಕಲಶಗಳನ್ನು ಮಂಡಲದಲ್ಲಿ ಇರಿಸಿ ಪೂಜಿಸಿ ಬಳಿಕ ದೇವಿಗೆ ಅಭಿಷೇಕ ನಡೆಸಲಾಯಿತು. ಬ್ರಹ್ಮಕಲಶ ಖಂಡದಲ್ಲಿ ಅಧಿವಾಸ ಮಾಡಲ್ಪಟ್ಟ ಬ್ರಹ್ಮಕಲಶ ಸೇರಿದಂತೆ ಒಟ್ಟು 1,001 ಕಲಶಗಳನ್ನು ಅಭಿಷೇಕ ಮಾಡ ಲಾಯಿತು. ಧಾತುಗಳು, ಮೂಲಗಳು, ರತ್ನ ಗಳು, ಕಷಾಯ ಗಳು, ಪಂಚಾಮೃತ ದ್ರವ್ಯಗಳು, ಪಂಚಗವ್ಯ, ಫಲೋದಕ ಮುಂತಾದ 25 ದ್ರವ್ಯಗಳ ಸಹಿತ ಕಲಶಾಭಿಷೇಕವನ್ನು ಸಮರ್ಪಿಸಲಾಯಿತು.

Advertisement

ವಿವಿಧ ಮಂತ್ರಗಳ ಮೂಲಕ ಚೈತನ್ಯ ಗಳನ್ನು ಕಲಶಗಳಲ್ಲಿ ಕ್ರೋಡೀಕರಿಸಿ ಸಮರ್ಪಿಸ ಲಾಯಿತು. ಬ್ರಹ್ಮಕಲಶದ ರಕ್ಷೆಗಾಗಿರುವ ಕರ್ಕರಿ ಕಳಶ, ಬ್ರಹ್ಮಕಲಶಾಭಿಷೇಕದಷ್ಟೇ ಪ್ರಾಧಾನ್ಯ ಹೊಂದಿರುವ ಕುಂಭೇಶ ಕಲಶಾದಿಗಳನ್ನು ಕೂಡ ದೇವರಿಗೆ ಅಭಿಷೇಕ ಮಾಡಿ ಲೋಕಕ್ಕೆ ಕ್ಷೇಮವಾಗಲೆಂದು ಪ್ರಾರ್ಥಿಸಲಾಯಿತು ಎಂದು “ಉದಯವಾಣಿ’ಗೆ ವಿದ್ವಾನ್‌ ಪಂಜ ಭಾಸ್ಕರ ಭಟ್‌ ಅವರು ತಿಳಿಸಿದರು.
ಸಂಜೆ ದೇವರ ಉತ್ಸವ ಬಲಿ ಹೊರಟು, ರಾತ್ರಿ ಬ್ರಹ್ಮರಥೋತ್ಸವ ನೆರವೇರಿತು. ಬಳಿಕ ಶಯನದ ಬಲಿ ಉತ್ಸವ ನಡೆದು, ಕವಾಟ ಬಂಧನ ನೆರವೇರಿತು.

ಕಟೀಲಮ್ಮನ ಮಡಿಲಲ್ಲಿ ಲಕ್ಷಾಂತರ ಭಕ್ತ ಸಂದೋಹ
ಜ.22ರಿಂದ ಆರಂಭವಾದ ಶ್ರೀ ಕ್ಷೇತ್ರ ಕಟೀಲಿನ ಬ್ರಹ್ಮಕಲಶೋತ್ಸವಕ್ಕೆ ಹತ್ತೂರುಗಳಿಂದ ಲಕ್ಷಾಂತರ ಜನರು ಆಗಮಿಸಿ, ತಾಯಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಬ್ರಹ್ಮಕಲಶೋತ್ಸವ ನಡೆದ ಗುರುವಾರ ಶ್ರೀ ಕ್ಷೇತ್ರದಲ್ಲಿ ಜನಸಾಗರವೇ ನೆರೆದಿತ್ತು. ಎತ್ತ ನೋಡಿದರೂ ಜನಜಾತ್ರೆಯೇ ಮೇಳೈಸಿತ್ತು. ಮಧ್ಯಾಹ್ನ ಸುಮಾರು 1.50 ಲಕ್ಷ ಜನರು ಅನ್ನಪ್ರಸಾದ ಸ್ವೀಕರಿಸಿದರು. ಸಾವಿರಾರು ಸ್ವಯಂಸೇವಕರ ತಂಡ ಹಗಲಿರುಳು ದುಡಿದು ಕ್ಷೇತ್ರದ ಮಂಗಲ ಕಾರ್ಯವನ್ನು ಯಶಸ್ವಿಯಾಗಿ ನಡೆಸುವಲ್ಲಿ ವಿಶೇಷವಾಗಿ ತೊಡಗಿಸಿಕೊಂಡಿದ್ದಾರೆ. ಕಟೀಲಿನ ಜಗನ್ಮಾತೆಯು ಪುಷ್ಪಪ್ರಿಯೆ ಆಗಿರುವುದರಿಂದ ಶ್ರೀ ಕ್ಷೇತ್ರವನ್ನು ಬಗೆಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿದೆ. ಕ್ಷೇತ್ರಕ್ಕೆ ಬಂದ ಹೊರೆಕಾಣಿಕೆಯು ಕರಾವಳಿಯ ದೇಗುಲಗಳ ಬ್ರಹ್ಮಕಲಶೋತ್ಸವದ ಪೈಕಿ ದಾಖಲೆ ಎಂದು ಕ್ಷೇತ್ರದ ಪ್ರಮುಖರು ಉಲ್ಲೇಖೀಸಿದ್ದಾರೆ.

ನಾಳೆ ನಾಗಮಂಡಲ; ನಾಡಿದ್ದು ಕೋಟಿ ಜಪ ಯಜ್ಞ
ಕಟೀಲಿನಲ್ಲಿ ಜ.31ರಂದು ವಿವಿಧ ವೈದಿಕ-ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.1ರಂದು ಭ್ರಾಮರೀ ವನದಲ್ಲಿ ಸಂಜೆ 7ರಿಂದ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿ, ಮದ್ದೂರು ಶ್ರೀ ಕೃಷ್ಣಪ್ರಸಾದ ವೈದ್ಯ ಬಳಗದವರ ಸಹಭಾಗಿತ್ವದಲ್ಲಿ ನಾಗಮಂಡಲೋತ್ಸವ ನಡೆಯಲಿದೆ. ಫೆ. 2ರಂದು ಭ್ರಾಮರಿ ವನದಲ್ಲಿ ಬೆಳಗ್ಗೆ ಕೋಟಿ ಜಪಯಜ್ಞ ಆರಂಭವಾಗಿ ಸಂಜೆ ಪರಿಸಮಾಪ್ತಿಯಾಗಲಿದೆ. ಫೆ.3ರಂದು ಭ್ರಾಮರಿ ವನದಲ್ಲಿ ಮುಂಜಾನೆ 7ರಿಂದ ಸಹಸ್ರಚಂಡಿಕಾಯಾಗ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next