Advertisement

“ಅನ್ನದಾನ ಪ್ರಿಯೆ’ಮಡಿಲಲ್ಲಿ ಲಕ್ಷಾಂತರ ಭಕ್ತರಿಗೆ ಮಹಾ ಅನ್ನದಾನ

11:44 AM Jan 31, 2020 | mahesh |

ಮಹಾನಗರ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಅನ್ನದಾನ ಹಾಗೂ ವಿದ್ಯಾದಾನಕ್ಕೆ ಹೆಸರುವಾಸಿ. ಪ್ರತೀನಿತ್ಯ ಮಧ್ಯಾಹ್ನ ಹಾಗೂ ರಾತ್ರಿ ಸಾವಿರಾರು ಭಕ್ತರಿಗೆ ಅನ್ನದಾನ ಸೇವೆ ಇಲ್ಲಿ ನಡೆಯುತ್ತದೆ. ಹೀಗಾಗಿ ತಾಯಿ ಭ್ರಾಮರಿ “ಅನ್ನದಾನ ಪ್ರಿಯೆ’ ಎಂಬ ಪ್ರತೀತಿಯೂ ಇದೆ. ಇಂತಹ ಪುಣ್ಯ ಆಲಯದಲ್ಲಿ ಈಗ ಬ್ರಹ್ಮಕಲಶೋತ್ಸವದ ನಿಮಿತ್ತ ಮಹಾ ಅನ್ನದಾನ ಸೇವೆ ಅತ್ಯಂತ ಯಶಸ್ಸಿನಿಂದ ನಡೆಯುತ್ತಿದೆ.

Advertisement

ಗುರುವಾರ ಬ್ರಹ್ಮಕಲಶೋತ್ಸವದ ದಿನ ದಂದು ಸರಿಸುಮಾರು 1.50 ಲಕ್ಷ ಭಕ್ತರು ಮಧ್ಯಾಹ್ನ ಅನ್ನಪ್ರಸಾದ ಸ್ವೀಕರಿಸಿದ್ದಾರೆ. ಉಪಾಹಾರ ಹಾಗೂ ಅನ್ನದಾನ ವ್ಯವಸ್ಥೆ ಯನ್ನು ಅತ್ಯಂತ ಶಿಸ್ತುಬದ್ಧವಾಗಿ ನಡೆಸ ಲಾಗಿದೆ. ಸ್ವಯಂಸೇವಕರ ತಂಡ ಹಗಲು- ರಾತ್ರಿಯೆನ್ನದೆ ನಿತ್ಯ ತೊಡಗಿ ಸಿಕೊಂಡಿದೆ. ಫೆ. 3ರ ವರೆಗೂ ಅನ್ನದಾನ ಸೇವೆ ಮಧ್ಯಾಹ್ನ ಹಾಗೂ ರಾತ್ರಿ ನಡೆಯಲಿದೆ.

ಲಕ್ಷಾಂತರ ಮಂದಿಗೆ ಅನ್ನದಾನ
ಕಟೀಲು ಕ್ಷೇತ್ರದಲ್ಲಿ ಜ. 22ರಿಂದ ಪ್ರತಿನಿತ್ಯ ಬೆಳಗ್ಗೆ ಸಂಜೆ ಉಪಾಹಾರ ಹಾಗೂ ಮಧ್ಯಾಹ್ನ-ರಾತ್ರಿ ಅನ್ನಪ್ರಸಾದ ವಿತರಣೆ ನಡೆಯಿತು. ಅಂದು ಬೆಳಗ್ಗೆ 8,000 ಜನರು ಉಪಾಹಾರ, ಮಧ್ಯಾಹ್ನ 15,000 ಜನರು ಅನ್ನಪ್ರಸಾದ, ಸಂಜೆ 5,000 ಜನರು ಉಪಾಹಾರ, ರಾತ್ರಿ 7,000 ಜನರು ಅನ್ನಪ್ರಸಾದ ಸ್ವೀಕರಿಸಿದರು. ಜ. 23ರಂದು ಬೆಳಗ್ಗೆ 6,000 ಜನರು ಉಪಾಹಾರ, ಮಧ್ಯಾಹ್ನ 15,000 ಜನರು ಅನ್ನಪ್ರಸಾದ, ಸಂಜೆ 3,000 ಜನರು ಉಪಾಹಾರ, ರಾತ್ರಿ 7,000 ಜನರು ಅನ್ನಪ್ರಸಾದ ಸ್ವೀಕರಿಸಿದ್ದಾರೆ.

ಜ. 24ರಂದು ಬೆಳಗ್ಗೆ 10,000 ಜನರು ಉಪಾಹಾರ, ಮಧ್ಯಾಹ್ನ 35,000 ಜನರು ಅನ್ನಪ್ರಸಾದ, ಸಂಜೆ 6,000 ಜನರು ಉಪಾಹಾರ, ರಾತ್ರಿ 10,000 ಜನರು ಅನ್ನಪ್ರಸಾದ ಸ್ವೀಕರಿಸಿದ್ದಾರೆ. ಜ. 25ರಂದು ಬೆಳಗ್ಗೆ 10,000 ಜನರು ಉಪಾಹಾರ, ಮಧ್ಯಾಹ್ನ 35,000 ಜನರು ಅನ್ನಪ್ರಸಾದ, ಸಂಜೆ 10,000 ಜನರು ಉಪಾಹಾರ, ರಾತ್ರಿ 30,000 ಜನರು ಅನ್ನಪ್ರಸಾದ ಸ್ವೀಕರಿಸಿದ್ದಾರೆ. ಜ. 26ರಂದು ಬೆಳಗ್ಗೆ 9,000 ಜನರು ಉಪಾಹಾರ, ಮಧ್ಯಾಹ್ನ 50,000 ಜನರು ಅನ್ನಪ್ರಸಾದ, ಸಂಜೆ 15,000 ಜನರು ಉಪಾಹಾರ, ರಾತ್ರಿ 25,000 ಜನರು ಅನ್ನಪ್ರಸಾದ ಸ್ವೀಕರಿಸಿದ್ದಾರೆ.

ಜ. 27ರಂದು ಬೆಳಗ್ಗೆ 6,000 ಜನರು ಉಪಾಹಾರ, ಮಧ್ಯಾಹ್ನ 25,000 ಜನರು ಅನ್ನಪ್ರಸಾದ, ಸಂಜೆ 2,000 ಜನರು ಉಪಾಹಾರ, ರಾತ್ರಿ 10,000 ಜನರು ಅನ್ನಪ್ರಸಾದ, ಜ. 28ರಂದು ಬೆಳಗ್ಗೆ 7,000 ಜನರು ಉಪಾಹಾರ, ಮಧ್ಯಾಹ್ನ 35,000 ಜನರು ಅನ್ನಪ್ರಸಾದ, ಸಂಜೆ 2,000 ಜನರು ಉಪಾಹಾರ, ರಾತ್ರಿ 25,000 ಜನರು ಅನ್ನಪ್ರಸಾದ ಹಾಗೂ ಜ. 29ರಂದು ಬೆಳಗ್ಗೆ 8,000 ಜನರು ಉಪಾಹಾರ, ಮಧ್ಯಾಹ್ನ 40,000 ಜನರು ಅನ್ನಪ್ರಸಾದ, ಸಂಜೆ 10,000 ಜನರು ಉಪಾಹಾರ, ರಾತ್ರಿ 25,000 ಜನರು ಅನ್ನಪ್ರಸಾದ ಸ್ವೀಕರಿಸಿದ್ದಾರೆ ಎಂದು ಪಾಕಶಾಲೆಯ ಮುಖ್ಯಸ್ಥ ವೆಂಕಟೇಶ್‌ ಭಟ್‌ ಪಾವಂಜೆ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

250 ಬಾಣಸಿಗರು; ಸಾವಿರಾರು ಸ್ವಯಂಸೇವಕರು!
ಕಟೀಲಿನ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಅನ್ನಪ್ರಸಾದ, ಚಾ-ತಿಂಡಿ ತಯಾರಿಗೆ ಸುಮಾರು 250 ಬಾಣಸಿಗರು ದಿನದ 24ಗಂಟೆ ಅವಧಿಯ ಆಧಾರದಲ್ಲಿ ಸೇವೆ ಮಾಡುತ್ತಿದ್ದಾರೆ. ಪಾಕಶಾಲೆಯ ಮುಖ್ಯಸ್ಥ ವೆಂಕಟೇಶ್‌ ಭಟ್‌ ಪಾವಂಜೆ ಅವರ ನೇತೃತ್ವದಲ್ಲಿ ಅಡುಗೆ ತಯಾರಿಯ ಜವಾಬ್ದಾರಿಯನ್ನು ವಹಿಸಲಾಗಿದೆ. ಇದರಂತೆ, ಪಲ್ಯ ತಯಾರಿ ರಾಘವೇಂದ್ರ ಭಟ್‌ ನಂದಿಕೂರು, ಅನ್ನ ತಯಾರಿ ಕೊಡಂಗಳ ವಾಸುದೇವ ಸರಳಾಯ, ಪಾಯಸ ರಾಮಚಂದ್ರ ಭಟ್‌ ಕೃಷ್ಣಾಪುರ, ಕಾಫಿ-ಉಪಾಹಾರ ವಿಷ್ಣುಮೂರ್ತಿ ಭಟ್‌ ಉಡುಪಿ ಅವರಿಗೆ ಜವಾಬ್ದಾರಿ ವಹಿಸಲಾಗಿದ್ದು, ಅವರ ನೇತೃತ್ವದಲ್ಲಿ ಉಳಿದ ಬಾಣಸಿಗರು ಕಾರ್ಯ ನಡೆಸುತ್ತಿದ್ದಾರೆ. ಇವರಿಗೆ ಸಾವಿರಾರು ಸ್ವಯಂ ಸೇವಕರ ತಂಡ ಸಹಕಾರ ನೀಡುತ್ತಿದೆ.

ಅನ್ನ, ಸಾರು, ಸಾಂಬಾರು, ಪಾಯಸ!
ಗುರುವಾರ ಬೆಳಗ್ಗಿನ ಉಪಾಹಾರದಲ್ಲಿ ಚಾ-ಕಾಫಿ, ಅವಲಕ್ಕಿ, ಬಿಸಿ ಬೇಳೆಬಾತ್‌, ಶ್ಯಾವಿಗೆ, ಹೆಸರು ಬೇಳೆ, ಕಡಿ, ಬಾಳೆ ಹಣ್ಣು ನೀಡಲಾಗಿತ್ತು. ಮಧ್ಯಾಹ್ನ ಅನ್ನಪ್ರಸಾದದಲ್ಲಿ ಉಪ್ಪಿನಕಾಯಿ, ಮುಳ್ಳು ಸೌತೆಕಾಯಿ, ಸುವರ್ಣಗಡ್ಡೆ ಕಡ್ಲೆ ಸುಕ್ಕ, ಬಿಟ್ರೂಟ್‌-ಬಟಾಟೆ ಮಿಕ್ಸ್ಡ್ ಗಸಿ, ಅನ್ನ, ಸಾರು, ಬೂದಿ ಕುಂಬಳಕಾಯಿ ಸಾಂಬಾರು, ಮಜ್ಜಿಗೆ, ಮೈಸೂರು ಪಾಕ್‌ ಸ್ವೀಟ್‌, ಗುಡಾನ್ನ ನೀಡಲಾಗಿತ್ತು.

20 ಸಾವಿರ ಸ್ವಯಂಸೇವಕರ ನೋಂದಣಿ
ಬ್ರಹ್ಮಕಲಶೋತ್ಸವದ ಸೇವಾ ಕಾರ್ಯಕ್ಕೆ ಈವರೆಗೆ 20 ಸಾವಿರ ಕ್ಕಿಂತ ಹೆಚ್ಚು ಮಂದಿ ಸ್ವಯಂ ಸೇವಕರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ರಾಷ್ಟ್ರೀಯ ಕೇಸರಿ ಕ್ರಾಂತಿ ಸಂಘಟನೆಯ 200 ಸ್ವಯಂ ಸೇವಕ ಮಹಿಳೆಯರು ಹಾಗೂ ಪುರುಷರು ಸಮವಸ್ತ್ರದಲ್ಲಿ ಆಗಮಿಸಿದ್ದರು. ಶಾಸಕ ವೇದವ್ಯಾಸ ಕಾಮತ್‌ ಅವರ ತಂಡದಲ್ಲಿ ಸುಮಾರು 100 ಮಂದಿ ಮಹಿಳೆಯರು ಸಮವಸ್ತ್ರದಲ್ಲಿ ಆಗಮಿಸಿದ್ದರು. ಸ್ವ-ಸಹಾಯ ಗುಂಪುಗಳಿಗೆ ಹೆಚ್ಚಿನ ಪ್ರಾಶಸ್ಥ್ಯ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next