ಮಂಗಳೂರು: ಕಟೀಲು ಮೇಳದ 2017ನೇ ಸಾಲಿನ ತಿರುಗಾಟದ ಆರಂಭದಲ್ಲಿ ಕೈಬಿಟ್ಟಿದ್ದ 10 ಮಂದಿ ಕಲಾವಿದರನ್ನು ಮುಂದಿನ ತಿರುಗಾಟದಲ್ಲಿ ಮೇಳಕ್ಕೆ ಸೇರಿಸಿಕೊಳ್ಳಬೇಕು. ಜತೆಗೆ ಮೇಳದ ಪ್ರಸ್ತುತ ಇರುವ ಯಜಮಾನರನ್ನು ಬದಲಾಯಿಸಿ ಬೇರೆ ಅರ್ಹ ವ್ಯಕ್ತಿಯನ್ನು ನೇಮಕಗೊಳಿಸಬೇಕು ಎಂದು ಫ್ರೆಂಡ್ಸ್ ಬಲ್ಲಾಳ್ ಬಾಗ್-ಬಿರುವೆರ್ ಕುಡ್ಲ ಆಗ್ರಹಿಸಿದೆ.
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಬಿರುವೆರ್ ಕುಡ್ಲ ಸಂಘಟನೆಯ ಮಾಧ್ಯಮ ಪ್ರಮುಖ ನಿತೇಶ್ ಕುಮಾರ್ ಮಾರ್ನಾಡ್ ಮಾತನಾಡಿ, ಕಳೆದ ತಿರುಗಾಟದ ಆರಂಭದಲ್ಲಿ 5ನೇ ಮೇಳದ ಭಾಗವತರನ್ನು ವರ್ಗಾವಣೆ ಮಾಡಬಾರದು ಎಂದು ಮನವಿ ಮಾಡಿದ್ದ 30 ಮಂದಿ ಕಲಾವಿದರ ಪೈಕಿ 10 ಮಂದಿಯನ್ನು ಮಾತ್ರ ಉಚ್ಚಾಟಿಸಲಾಗಿದೆ. ಆದರೆ ಅವರು ಕ್ಷಮಾಪಣೆ ಕೇಳಿದ ಬಳಿಕವೂ ಅವರನ್ನು ಮೇಳಕ್ಕೆ ಸೇರಿಸಿಕೊಂಡಿಲ್ಲ. ಪ್ರಸ್ತುತ ಅವರು ಹೊಟ್ಟೆಪಾಡಿಗಾಗಿ ಇತರ ಮೇಳಗಳಲ್ಲಿ ದುಡಿಯುವ ಸ್ಥಿತಿ ನಿರ್ಮಾಣವಾಗಿದೆ.
ಮೇಳದಲ್ಲಿ ಹತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಕಲಾವಿದರ ಮನವಿಗೂ ಬೆಲೆ ನೀಡಿಲ್ಲ. ಜತೆಗೆ ಯಜಮಾನರನ್ನು ಸಂಪರ್ಕಿಸಲು ಕೂಡ ಅವಕಾಶ ನೀಡಿಲ್ಲ. ಮೇಳಕ್ಕೆ ಸೇರಿಸುವಂತೆ ಆಸ್ರಣ್ಣರು ಮತ್ತು ಯಕ್ಷಧರ್ಮ ಪ್ರಬೋಧಿನಿ ಟ್ರಸ್ಟ್ ಸೂಚಿಸಿದರೂ, ಅವರ ಮಾತಿಗೂ ಯಜಮಾನರು ಬೆಲೆ ಕೊಟ್ಟಿಲ್ಲ. ಹೀಗಾಗಿ ಮುಂದಿನ ತಿರುಗಾಟದಲ್ಲಿ ಮೇಳಕ್ಕೆ ಸೇರಿಸಿಕೊಳ್ಳದೇ ಇದ್ದಲ್ಲಿ ಬಿರುವೆರ್ ಕುಡ್ಲ ಸಂಘಟನೆ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.
ಮೇಳದಿಂದ ಉಚ್ಚಾಟಿತ ಕಲಾವಿದ ಮಾಧವ ಬಂಗೇರ ಕೊಳತ್ತಮಜಲು ಮಾತನಾಡಿ, ಕಟೀಲು ಕ್ಷೇತ್ರ, ಮೇಳದ ಕುರಿತು ಕಲಾವಿದರಾದ ನಮಗೆ ಯಾವುದೇ ಅಸಮಾಧಾನವಿಲ್ಲ. ಆದರೆ ಮೇಳದ ಯಜಮಾನರ ಕಾರ್ಯವೈಖರಿಯ ಕುರಿತು ವಿರೋಧವಿದೆ. ಒಮ್ಮೆ ಯಜಮಾನರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಎರಡು ದಿನಗಳಲ್ಲಿ ಮೇಳಕ್ಕೆ ಸೇರಿಸುವುದಾಗಿ ತಿಳಿಸಿದ್ದರು. ಈ ರೀತಿ ಹೇಳಿ 2 ತಿಂಗಳು ಕಳೆದರೂ ಮೇಳಕ್ಕೆ ಸೇರ್ಪಡೆ ಮಾಡಿಲ್ಲ. ಕಟೀಲು ಮೇಳದಲ್ಲಿ ವೇತನ ಕಡಿಮೆಯಿದ್ದರೂ, ಅಲ್ಲಿ ಸೇವೆ ಸಲ್ಲಿಸಿದಾಗ ಮಾನಸಿಕ ತೃಪ್ತಿ ಸಿಗುತ್ತದೆ.
ಮುಂದೆ ಕಟೀಲಿನ ಯಾವುದೇ ಮೇಳದಲ್ಲಿ ಅವಕಾಶ ನೀಡಿದರೂ, ಸೇವೆ ಸಲ್ಲಿಸಲು ನಾವು ಸಿದ್ಧರಿದ್ದೇವೆ. ಜತೆಗೆ ಯಾವುದೇ ವೇಷ ಹಾಕುವುದಕ್ಕೂ ನಾವು ಸಿದ್ಧ. ಮೇಳದ ಇಂತಹ ಗೊಂದಲಗಳಿಗೆ ಯಜಮಾನರೇ ಕಾರಣವಾಗಿದ್ದು, ಅವರ ಬದಲು ಟಿ.ಶ್ಯಾಮ್ ಭಟ್ ಅಂತವರನ್ನು ಯಜಮಾನ ರನ್ನಾಗಿ ನೇಮಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಚ್ಚಾಟಿತ ಕಲಾವಿದರಾದ ದಿವಾಣ ಶಿವಶಂಕರ ಭಟ್, ಉಜಿರೆ ನಾರಾಯಣ ಹಾಸ್ಯಗಾರ, ರವಿ ಶೆಟ್ಟಿ ಕಿದೂರು, ಬಿರುವೆರ್ ಕುಡ್ಲ ಪ್ರಧಾನ ಕಾರ್ಯದರ್ಶಿ ಕಿಶೋರ್ ಬಾಬು, ಮಹಿಳಾ ವಿಭಾಗ ಅಧ್ಯಕ್ಷೆ ವಿದ್ಯಾ ರಾಕೇಶ್, ಹಿರಿಯ ಕಲಾವಿದ ಮಧೂರು ರಾಧಾಕೃಷ್ಣ ನಾವಡ ಮೊದಲಾದವರು ಉಪಸ್ಥಿತರಿದ್ದರು.