Advertisement

Kateel: ಕಟೀಲಮ್ಮನ ಮಡಿಲಿನಲ್ಲಿ 2,000 ವೇಷಗಳ ನರ್ತನ

03:23 PM Oct 10, 2024 | Team Udayavani |

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನಡೆಯುವ ನವರಾತ್ರಿ ಉತ್ಸವದ ವೈಭವ ಒಂದು ಕಡೆಯಾದರೆ, ಹುಲಿ, ಸಿಂಹ ಸೇರಿದಂತೆ ಸಾವಿರಾರು ವೇಷಗಳು ಕಟೀಲಿಗೆ ಬಂದು ಸೇವೆ ಸಲ್ಲಿಸುವ ಸೊಬಗು ಇನ್ನೊಂದು ಕಡೆ.

Advertisement

ಹಲವಾರು ತಂಡಗಳು ಹುಲಿ ವೇಷ ಹಾಕಿ ತಿರುಗಾಟ ನಡೆಸಿ ಅಂತಿಮವಾಗಿ ಕಟೀಲಿಗೆ ಬಂದು ದೇವಾಲಯದ ಆವರಣದಲ್ಲಿ ನರ್ತಿಸಿ ವೇಷ ಕಳಚಿ ಬಳಿಕ ನಂದಿನಿ ನದಿಯಲ್ಲಿ ಮಿಂದು ಹೋಗುವುದು ರೂಢಿ. ಹಲವಾರು ಮಂದಿ ವೇಷ ಹಾಕುವಾಗಲೇ ಕಟೀಲಿನಲ್ಲಿ ವೇಷ ಬಿಚ್ಚುತ್ತೇನೆ ಎಂದು ಹರಕೆ ಹೊರುವವರೂ ಇದ್ದಾರೆ. ಕೆಲವರು ಕಟೀಲು ಕ್ಷೇತ್ರದಲ್ಲೇ ಸೇವೆ ಸಲ್ಲಿಸಿ ಮರಳಿ ಅಲ್ಲೇ ವೇಷ ಬಿಚ್ಚುವುದೂ ಇದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಲವಾರು ಹುಲಿ ವೇಷದ ತಂಡಗಳು ಮತ್ತು ಇತರ ವೇಷಗಳು ಈ ಪರಿಪಾಠ ಇಟ್ಟುಕೊಂಡಿವೆ. ಅದರ ನಡುವೆ ಕೆಲವರು ಕಟೀಲಿಗೆ ಬಂದು ಸೇವೆ ಸಲ್ಲಿಸಿ ಹೋಗುವುದೂ ಇದೆ.

ಹೀಗಾಗಿ ಕಟೀಲು ದೇವಾಲಯದ ಆವರಣದಲ್ಲಿ ನಿತ್ಯವೂ ಹತ್ತಾರು ವೇಷಗಳು, ಹುಲಿ ತಂಡಗಳ ನರ್ತನ ಇರುತ್ತದೆ. ಒಂದು ಲೆಕ್ಕಾಚಾರದ ಪ್ರಕಾರ 2000ಕ್ಕೂ ಅಧಿಕ ವೇಷಗಳು, 70ರಿಂದ 80 ತಂಡಗಳು ಕಟೀಲಿನ ಸನ್ನಿಧಿಗೆ ಬರುತ್ತವೆ.

ಎಕ್ಕಾರು, ಕೊಡೆತ್ತೂರು ಮೆರವಣಿಗೆ
ಎಕ್ಕಾರು ಮತ್ತು ಕೊಡೆತ್ತೂರಿನಿಂದ ಹುಲಿ ವೇಷಗಳು, ನೂರಾರು ಅನ್ಯ ವೇಷಗಳ ಹುಲಿ ಕುಣಿತ ತಂಡಗಳು ಆಗಮಿಸುವುದು ಕಳೆದ ಹಲವಾರು ದಶಕಗಳ ವಾಡಿಕೆ. ಎಕ್ಕಾರು ಹುಲಿಗೆ 66 ವರ್ಷವಾದರೆ, ಕೊಡತ್ತೂರಿನಿಂದ 60 ವರ್ಷಗಳಿಂದ ಊರಿನ ಜನರೇ ಮೆರವಣಿಗೆ ಬರುತ್ತಾರೆ.

ಮುಂಬಯಿಯಿಂದ ಬಂದು ವೇಷ ಹಾಕುತ್ತಾರೆ
ಕಟೀಲು ದೇವಿಯ ಸೇವೆ ಮಾಡಬೇಕು ಎನ್ನುವ ತುಡಿತ ಕೆಲವರಿಗೆ ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ ದೂರದ ಮುಂಬಯಿಯಿಂದ ನವರಾತ್ರಿ ಸಂದರ್ಭದಲ್ಲಿ ಬಂದು ಹುಲಿ ಸೇರಿದಂತೆ ಅವರಿಗಿಷ್ಟವಾದ ಯಾವುದೇ ವೇಷ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವರಂತೂ 30- 40 ವರ್ಷಗಳಿಂದ ವೇಷ ಹಾಕುತ್ತಲೇ ಇದ್ದಾರೆ.

Advertisement

ಸುಮಾರು 150 ವರ್ಷಗಳ ಹಿಂದೆ ಕಟೀಲಿನ ಒಂದು ಭಾಗದಲ್ಲಿ ಕಾಡು ಪ್ರದೇಶವಿದ್ದು ಹುಲಿಗಳು ನೀರು ಕುಡಿಯಲು ಬರುತ್ತಿದ್ದವು ಎನ್ನಲಾಗುತ್ತಿದೆ. ಇನ್ನೊಂದು ಬದಿಯಲ್ಲಿ ದೇವಸ್ಥಾನ ಪೂಜಾ ಕೈಂಕರ್ಯದ ಅರ್ಚಕರು ಜಳಕ ಮಾಡುತ್ತಿದ್ದರು ಎಂಬುದು ಪ್ರತೀತಿ.

-ರಘುನಾಥ ಕಾಮತ್‌ ಕೆಂಚನಕರೆ

Advertisement

Udayavani is now on Telegram. Click here to join our channel and stay updated with the latest news.

Next