ಇತ್ತೀಚೆಗೆ ಕೆಜಿಎಫ್ ಸಿನೆಮಾ ದೇಶ- ವಿದೇಶದಲ್ಲಿ ರಿಲೀಸ್ ಆಗುವ ಮೂಲಕ ಸ್ಯಾಂಡಲ್‌ವುಡ್ ಸಿನೆಮಾ ಜಾಗತಿಕ ಮಟ್ಟದಲ್ಲಿ ಸುದ್ದಿ ಪಡೆದಿತ್ತು. ಸಿನೆಮಾ ಹವಾ ಅಂದರೆ ಹೀಗಿರಬೇಕು ಎಂದು ಎಲ್ಲರೂ ಮಾತನಾಡುವಂತಾಗಿದೆ. ವಿಶೇಷವೆಂದರೆ, ನಿಗದಿತ ಆಜುಬಾಜಿನಲ್ಲಿ ಮಾತ್ರ ತೆರೆಕಾಣುತ್ತಿರುವ ತುಳು ಸಿನೆಮಾ ಈಗ ಇಂತಹುದೇ ದೊಡ್ಡ ಸಾಹಸಕ್ಕೆ ಕೈಹಾಕಿದೆ. ಕೋಸ್ಟಲ್‌ವುಡ್‌ನಲ್ಲಿ ಮಾತ್ರವಲ್ಲ; ಸ್ಯಾಂಡಲ್‌ವುಡ್‌ನಲ್ಲಿಯೇ ಒಂದು ಕ್ರೇಜ್ ಹುಟ್ಟಿಸುವ ಹಾಗೆ ಮಾಡಿದ ಸಿನೆಮಾ ‘ಕಟಪಾಡಿ ಕಟ್ಟಪ್ಪೆ’.
ಹೇಗೆಂದರೆ ಈ ಸಿನೆಮಾ ದೇಶ- ವಿದೇಶದ 200ಕ್ಕೂ ಅಧಿಕ ಸೆಂಟರ್ ನಲ್ಲಿ ಮಾ. 29ಕ್ಕೆ ರಿಲೀಸ್ ಆಗುವ ಹುಮ್ಮಸ್ಸಿನಲ್ಲಿದೆ. ಇದು ಕೋಸ್ಟಲ್ ವುಡ್‌ನಲ್ಲಿಯೇ ಅಚ್ಚರಿ ಹಾಗೂ ಕುತೂಹಲದ ಸಂಗತಿ. ಅದರಲ್ಲೂ ಕಟ್ಟಪ್ಪ ಶ್ರೀಲಂಕಾದಲ್ಲಿಯೂ ರಿಲೀಸ್ ಆಗಲಿದೆ. ಜತೆಗೆ ಸಿಂಗಾಪುರ, ಮಲೇಶಿಯಾ, ದುಬಾಯಿ, ಅಬುಧಾಬಿ, ಶಾರ್ಜಾ, ಬಹ್ರೈನ್ ನಲ್ಲಿಯೂ ಕಟಪಾಡಿ ಕಟ್ಟಪ್ಪ ಸಿನೆಮಾ ಅದೇ ದಿನ ರಿಲೀಸ್ ಆಗಲಿದೆ ದಿಲ್ಲಿ, ಸೂರತ್, ಗುಜರಾತ್,
ಉತ್ತರಪ್ರದೇಶ, ಮಧ್ಯಪ್ರದೇಶ, ಹೈದರಾಬಾದ್, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಲಸಹಿತ ಹೊರರಾಜ್ಯದಲ್ಲಿಯೂ ಸಿನೆಮಾ ರಿಲೀಸ್ ಆಗಲಿದೆ. ಕರ್ನಾಟಕದ ಮೂವತ್ತೂ ಜಿಲ್ಲೆಗಳಲ್ಲಿ ಬಿಡುಗಡೆ ಕಾಣುವ ಈ ಸಿನೆಮಾ ಬೆಂಗಳೂರಿನ 24 ಸೆಂಟರ್‌ಗಳಲ್ಲಿ ರಿಲೀಸ್ ಮಾಡಲು ಸಿನೆಮಾ ತಂಡ ನಿರ್ಧರಿಸಿದೆ. ಇದೆಲ್ಲವೂ ಕೋಸ್ಟಲ್‌ವುಡ್ ಪಾಲಿಗೆ ಮೊದಲ ಅನುಭವ.
ರಾಜೇಶ್ ಬ್ರಹ್ಮಾವರ್ ನಿರ್ಮಿಸಿರುವ ಈ ಚಿತ್ರ ಯುವ ನಿರ್ದೇಶಕ ಜೆ.ಪಿ. ತೂಮಿನಾಡ್ ಅವರ ನಿರ್ದೇಶನದ ಮೊದಲ ಚೊಚ್ಚಲ ಚಿತ್ರವಾಗಿದ್ದು, ಛಾಯಾಚಿತ್ರಗ್ರಾಹಕರಾಗಿ ರುದ್ರಮುನಿ ಅವರು ಕೈಚಳಕ ತೋರಿಸಿದ್ದಾರೆ. ಸಂಕಲನದಲ್ಲಿ ಗಣೇಶ್ ನೀರ್ಚಾಲ್, ಸಂಗೀತ ಪ್ರಕಾಶ್ ನೀಡಿದ್ದಾರೆ. ಜತೆಗೆ ತುಳುರಂಗ ಭೂಮಿಯ ದಿಗ್ಗಜರ ದಂಡು ಚಿತ್ರದಲ್ಲಿ ಅಭಿನಯಿಸಿದೆ. ಪ್ರಥಮ ಬಾರಿಗೆ ಉದಯ ಪೂಜಾರಿ ಬಲ್ಲಾಳ್‌ಬಾಗ್ ನಾಯಕ ನಟರಾಗಿ, ಚರೀಶ್ಮಾ ಅಮೀನ್ ಪರಂಗಿಪೇಟೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಯಜ್ಞೆಶ್ವರ್ ಬರ್ಕೆ, ವಿಜಯ್ ಕುಮಾರ್ ಕೊಡಿಯಾಲಬೈಲ್, ಪಮ್ಮಿ ಕೊಡಿಯಾಲಬೈಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ದೀಪಕ್ ರೈ ಪಾಣಾಜೆ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸೂರಜ್ ಪಾಂಡೇಶ್ವರ, ಧೀರಜ್ ನೀರುಮಾರ್ಗ, ಪ್ರಶಾಂತ್ ಅಂಚನ್ ಸಹಿತ ಹಲವು ಕಲಾವಿದರು ಸಿನೆಮಾದಲ್ಲಿ ಅಭಿನಯಿಸಿದ್ದಾರೆ.