ಕಟಪಾಡಿ: ಬೀದಿ ಬದಿ ತ್ಯಾಜ್ಯ ಎಸೆತದಿಂದ ಬೇಸತ್ತ ಸೈಂಟ್ ವಿನ್ಸೆಂಟ್ ಪೌಲ್ ಚರ್ಚ್ ಜಂಕ್ಷನ್ ಬಳಿಯ ಸೈಂಟ್ ವಿನ್ಸೆಂಟ್ ವಾರ್ಡ್‌ನ ನಿವಾಸಿಗಳು ಸೋಮವಾರ ಬೀದಿಗಿಳಿದು ಸ್ವತ್ಛತೆ ನಡೆಸಿದರು.
ಸುಮಾರು 52 ಮನೆಗಳ ಹೆಂಗಸರು, ಗಂಡಸರು, ಮಕ್ಕಳು ಚರ್ಚ್ ಜಂಕ್ಷನ್‌ನಿಂದ ಮಣಿಪುರ ರೈಲ್ವೇ ಮೇಲ್ಸೇತುವೆ, ಶ್ಮಶಾನದವರೆಗೆ ಸುಮಾರು ಒಂದೂವರೆ ಕಿ.ಮೀ.ನಷ್ಟು ಪ್ರದೇಶದ ರಸ್ತೆಯ ಇಕ್ಕೆಲಗಳಲ್ಲಿ ಎಸೆದಿದ್ದ ತ್ಯಾಜ್ಯ ವಿಲೇವಾರಿ ಮಾಡಿದ್ದಾರೆ.
ಸೋಮವಾರ ಸಂಜೆ ಆರು ಗಂಟೆ ಸುಮಾರಿಗೆ ಈ ಚಟುವಟಿಕೆ ಆರಂಭಗೊಂಡಿದ್ದು ರಾತ್ರಿ ಎಂಟೂವರೆ ತನಕ ಕೆಲಸ ಸಾಗಿತ್ತು. ಪ್ಲಾಸ್ಟಿಕ್ ತ್ಯಾಜ್ಯ, ಹಸಿ ಮಾಂಸದ ತ್ಯಾಜ್ಯ ಸಹಿತ ಹೊಟೇಲು, ವ್ಯಾಪಾರ ಮಳಿಗೆ, ವಾಣಿಜ್ಯ ಮಳಿಗೆಗಳ ತ್ಯಾಜ್ಯಗಳು ಹೆಚ್ಚು ಕಂಡು ಬಂದಿವೆ .
ಇಲ್ಲಿ ತ್ಯಾಜ್ಯ ಎಸೆಯುವವರ ಬಗ್ಗೆ ತಂಡವಾಗಿ ಕಾವಲು ಕೂತು ಅನಾಗರಿಕರನ್ನು ಎಚ್ಚರಿಸುತ್ತೇವೆ. ಬೆಳಗ್ಗಿನ ಜಾವ ಮತ್ತು ರಾತ್ರಿಯ ಹೊತ್ತಿನಲ್ಲಿ ಹೆಚ್ಚಿನ ಮಂದಿ ತ್ಯಾಜ್ಯ ಎಸೆಯುತ್ತಾರೆ. ಇದರ ವಿರುದ್ಧ ನಾವು ತಂಡವಾಗಿಯೇ ಕಾರ್ಯಾಚರಣೆಯನ್ನು ನಡೆಸಲಿದ್ದೇವೆ ಎಂದು ತಂಡದ ಫ್ರೀಡಾ ಪಿಂಟೋ ಹೇಳಿದ್ದಾರೆ.
ಈ ಸಂದರ್ಭ ವಾರ್ಡ್ ಪ್ರಮುಖರಾದ ಸ್ಟಾÂನಿ ಪಿಂಟೋ, ಜೋಸೆಫ್ ಮೊಂತೆರೋ, ವಿನ್ಸೆಂಟ್ ಪಿರೇರಾ, ಗ್ರೇಸಿ ಮೊಂತೆರೋ, ಮಿಲ್ಟನ್ ಡಿ’ಸೋಜಾ ಪಾಲ್ಗೊಂಡಿದ್ದರು.
ನಿರ್ದಾಕ್ಷಿಣ್ಯ ಕ್ರಮ ಅಗತ್ಯ
ತ್ಯಾಜ್ಯ ಎಸೆಯುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮದ ಅನಿವಾರ್ಯವಿದೆ. ಹೊರ ಪ್ರದೇಶದ ಜನರೇ ಇಲ್ಲಿ ತ್ಯಾಜ್ಯ ಎಸೆದು ಪರಿಸರ ಹಾಳುಮಾಡುತ್ತಿದ್ದಾರೆ. ಇದರ ವಿರುದ್ಧ ಗ್ರಾಮಸ್ಥರು ತಂಡವಾಗಿ ನಡೆಸುತ್ತಿರುವ ಕಾರ್ಯಾಚರಣೆಗೆ ಕೈಜೋಡಿಸಲು ಸಿದ್ಧ .
-ಮೊಹಮ್ಮದ್ ನಯೀಂ, ಗ್ರಾ.ಪಂ. ಸದಸ್ಯ, ಕಟಪಾಡಿ ಗ್ರಾ.ಪಂ.