ಕಟಪಾಡಿ: ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟಕ್ಕೆ ಜಿಲ್ಲಾಧಿಕಾರಿ ಅವರು ಅನುಮತಿ ನೀಡಿದ್ದಾರೆ. ಬೆಳೆದು ನಿಂತ ಭತ್ತದ ಪೈರು ಕಟಾವಿಗೆ ಕಟಾವು ಯಂತ್ರ ಬರಲಿಕ್ಕೆ ತಡೆಯಾಗುತ್ತದೆ ಎಂಬ ಮಾಹಿತಿ ಆಧರಿಸಿ, ಆ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಆದೇಶ ಹೊರಡಿಸಿ ಕಟಾವು ಯಂತ್ರ ತರಲು ವ್ಯವಸ್ಥೆ ಮಾಡಲಾಗುತ್ತಿದೆ. ಮುಂದಿನ ಎ.14ರ ವರೆಗೂ ಸಾರ್ವಜನಿಕರು ಇದೇ ಸಹಕಾರವನ್ನು ನೀಡುವಂತೆ ಕಾಪು ತಾಲೂಕು ತಹಶೀಲ್ದಾರ್ ಮಹಮ್ಮದ್ ಇಸಾಕ್ ವಿನಂತಿಸಿಕೊಂಡರು.
ಕಟಪಾಡಿಯ ಎಸ್‍ವಿಎಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ತೆರೆಯಲಾಗಿದ್ದ ಗಂಜಿ ಕೇಂದ್ರಕ್ಕೆ ಮತ್ತೆ ಎಂಟು ಮಂದಿ ಹೊರಜಿಲ್ಲಾ ನಿರಾಶ್ರಿತ ದಿನಗೂಲಿ ನೌಕರರ ಪ್ರವೇಶಾತಿಯೊಂದಿಗೆ ಒಟ್ಟು 16 ಮಂದಿ ಆಶ್ರಯ ಪಡೆದಿದ್ದ ಬಗ್ಗೆ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ ಸಂದರ್ಭ ಉದಯವಾಣಿಯೊಂದಿಗೆ ಮಾತನಾಡಿದರು.
ಕಾಪು ತಾಲೂಕಿನಾದ್ಯಂತ ಜನರ ಸಂಪೂರ್ಣ ಸಹಕಾರದಿಂದ ಈ ಲಾಕ್‍ಡೌನ್ ಬಹಳಷ್ಟು ಉತ್ತಮ ಸ್ಪಂದನೆ ಲಭಿಸಿದೆ. ಮೊದಲೇ ತಿಳಿಸಿದಲ್ಲಿ ಮುಜರಾಯಿ ಇಲಾಖೆಯಡಿ ಕಾಪು ಹೊಸಮಾರಿಗುಡಿ ದೇವಸ್ಥಾನದಲ್ಲಿ ಊಟದ ವ್ಯವಸ್ಥೆಯನ್ನು ಕಲ್ಪಿಸಬಹುದಿತ್ತು. ಸಾಮಾಜಿಕ ಅಂತರ ಕಾಯ್ದುಕೊಂಡು ನಿಗದಿತ ಅವಧಿಯೊಳಗೆ ಅವಶ್ಯಕ ವಸ್ತು ಖರೀದಿಗೆ ಅವಕಾಶ ನೀಡಲಾಗಿದ್ದು, ಔಷಧಿ ಅಂಗಡಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಸೇವೆಯನ್ನು ನೀಡಲಿದೆ ಎಂದರು.
ಕಟಪಾಡಿ ಗಂಜಿ ಕೇಂದ್ರದ ನೋಡಲ್ ಅಧಿಕಾರಿಯಾದ ಕಟಪಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕೆ.ಎನ್. ಇನಾಯತ್ ಉಲ್ಲಾ ಬೇಗ್ ಸೂಕ್ತ ಮೂಲಭೂತ ಸೌಕರ್ಯವನ್ನು ಒದಗಿಸುವ ಮೂಲಕ ನೋಂದಾಯಿತರ ಮೇಲ್ವಿಚಾರಣೆಯನ್ನು ನಡೆಸುತ್ತಿದ್ದು, ನೋಂದಾಯಿತ ನಿರಾಶ್ರಿತರನ್ನು ಆರೋಗ್ಯ ಸಹಾಯಕರು ಆರೋಗ್ಯ ಪರಿಶೀಲನೆ, ಶುಶ್ರೂಷೆಯನ್ನು ನಡೆಸುತ್ತಿದ್ದಾರೆ.