ಕಟಪಾಡಿ: ಮನೆಯ ಮೇಲ್ಛಾವಣಿಗೆ ಬಿದ್ದ ಮಳೆಯ ನೀರನ್ನು ಪೋಲು ಮಾಡದೆ ಪೈಪು ಅಳವಡಿಸಿ ಶುದ್ಧೀಕರಣದ ಮೂಲಕ ಬಾವಿಗೆ ಜಲ ಮರುಪೂರಣ ಮಾಡುವ ಚ್ಯಾನಿಸಂ ಮೂಲಕ ಮಳೆ ಕೊಯ್ಲು ಅಳವಡಿಸಿಕೊಳ್ಳಬಹುದು ಎಂದು ನಿವೃತ್ತ ಪ್ರಾಂಶುಪಾಲ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ನ ಸಂಪನ್ಮೂಲ ವ್ಯಕ್ತಿ ಪ್ರೊ| ಬಿ. ಸೀತಾರಾಮ ಶೆಟ್ಟಿ ಮಾಹಿತಿ ನೀಡಿದರು.
ಅವರು ಜು.15ರಂದು ಕಟಪಾಡಿ ಡಾ| ಎ. ರವೀಂದ್ರನಾಥ ಶೆಟ್ಟಿ ಅವರ ಮನೆಯ ಬಾವಿಗೆ ಅಳವಡಿಸಲಾದ ಚ್ಯಾನಿಸಂ ಮಾದರಿಯ ಮಳೆಗಾಲದ ನೀರು ಸಂಗ್ರಹಣೆಯ ಮಳೆ ಕೊಯ್ಲು ಬಗ್ಗೆ ಮಾಹಿತಿ ನೀಡುತ್ತಾ ಮಾತನಾಡಿದರು.
ರೈನ್ ವಾಟರ್ ರೀ ಚಾರ್ಜ್ ಮತ್ತು ಡಿಸಿಲ್ಟಿಂಗ್ ಮೂಲಕ ಅಂತರ್ಜಲ ಮಟ್ಟವನ್ನು ವೃದ್ಧಿಸಬಹುದು. ಪೋಲಾಗುವ ಹೆಚ್ಚಿನ ನೀರನ್ನು ಭೂಮಿಯೊಳಗೆ ಇಳಿಸಿ ಬಿಡಬಹುದು. ಕರಾವಳಿ ಭಾಗದಲ್ಲಿ ಸರಾಸರಿ 4 ಸಾವಿರ ಮಿ.ಲೀ. ಮಳೆಯಾಗುತ್ತಿದ್ದು, 1.6 ಕೋಟಿ ಲೀಟರ್ ನೀರು ಲಭ್ಯವಾಗುತ್ತದೆ. ಅದರ ಮೂರನೇ ಒಂದು ಅಂಶವನ್ನು ಇಂಗಿಸಿದಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಿ ನೀರಿನ ಸಮಸ್ಯೆಗೆ ಮುಕ್ತಿ ನೀಡಬಹುದು. ಅದರೊಂದಿಗೆ ತೊಟ್ಟಿಲು ಗುಂಡಿ, ಕತ್ತರಿ ಗುಂಡಿ, ಶೋಧಕ ಗುಂಡಿ, ಬಟ್ಟಲು ಗುಂಡಿಗಳ ನಿರ್ಮಾಣದ ಮೂಲಕವೂ ಜಲಮರುಪೂರಣ ಸಾಧ್ಯವಾಗುತ್ತದೆ ಎಂದರು.
ಡಾ| ಎ. ರವೀಂದ್ರನಾಥ ಶೆಟ್ಟಿ ಮಾಹಿತಿ ನೀಡುತ್ತಾ ತುಸು ಹೆಚ್ಚು ಬಾಳಿಕೆ ಬರುವ ಪಿವಿಸಿ ಪೈಪ್‌ಗ್ಳನ್ನು ಅಳವಡಿಸಿಕೊಂಡು ಮಳೆಯ ನೀರು ಪೋಲಾಗದಂತೆ ಬಾವಿಗೆ ಇಳಿಸುವ ಮೂಲಕ ಮಳೆಕೊಯ್ಲು ಅಳವಡಿಸಲಾಗಿದೆ. ಬಾವಿಯ ಒಳ ಭಾಗದಲ್ಲಿ ರಂಧ್ರ ಮಾಡಲ್ಪಟ್ಟ ಬಾಲ್ದಿಯನ್ನು ಬಳಸಿಕೊಂಡು ತಳದಲ್ಲಿ ಸಣ್ಣ ಜಲ್ಲಿ, ಇದ್ದಿಲು, ಹೊಯಿಗೆಯನ್ನು ತುಂಬಿ ಮಳೆಯ ನೀರನ್ನು ಶುದ್ಧೀಕರಣ ನಡೆಸಲಾಗುತ್ತದೆ. ಆ ಮೂಲಕ ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆಯನ್ನು ಸರಿದೂಗಿಸಲು ಯತ್ನಿಸಲಾಗುತ್ತಿದೆ ಎಂದರು. ಡಾ| ಯು.ಕೆ. ಶೆಟ್ಟಿ, ಹರಿಶ್ಚಂದ್ರ ಅಮೀನ್, ಸಮಾಜ ಸೇವಕ ಗಿರಿಧರ ಡಿ. ಕೋಟ್ಯಾನ್, ಗಿರೀಶ್ ಉಪಸ್ಥಿತರಿದ್ದರು.