Advertisement

ಅಕಟಕಟಾ…ಎಷ್ಟೊಂದು ವಿಚಿತ್ರ-ವಿನೋದ!

11:52 AM Oct 15, 2017 | |

ಚಿತ್ರ: ಕಟಕ ನಿರ್ಮಾಣ: ಎನ್‌.ಎಸ್‌.ರಾಜಕುಮಾರ್‌  ನಿರ್ದೇಶನ: ರವಿಬಸ್ರೂರ್‌ ಮತ್ತು ತಂಡ
ತಾರಾಗಣ: ಅಶೋಕ್‌ರಾಜ್‌, ಸ್ಪಂದನಾ, ಬೇಬಿ ಶ್ಲಾಘ, ಮಾಧವ ಕಾರ್ಕಡ, ಉಗ್ರಂ ಮಂಜು, ಓಂ ಗುರು, ವಿಜಯ್‌ ಬಸ್ರೂರ್‌, ರವೀಂದ್ರ ಇತರರು.

Advertisement

“ದೇವರನ್ನ ನಂಬಿ ಯಾರು ಏನನ್ನು ಪಡಕೊಂಡಿದ್ದಾರೋ ಗೊತ್ತಿಲ್ಲ. ಆದರೆ, ದೇವರನ್ನ ನಂಬಿ ಯಾರೂ ಏನನ್ನು ಕಳಕೊಂಡಿಲ್ಲ…’ ಸ್ವಾಮೀಜಿಯೊಬ್ಬ ಈ ಡೈಲಾಗ್‌ ಹೇಳುವ ಹೊತ್ತಿಗೆ, ಆ ಊರಲ್ಲಿ ವಿಚಿತ್ರ ಘಟನೆಗಳು ನಡೆದು ಹೋಗಿರುತ್ತವೆ. ಆ ಮನೆಯಲ್ಲಿರೋ ಆ ಮುಗ್ಧ ಹೆಣ್ಣು ಮಗು ಕೂಡ ವಿಚಿತ್ರವಾಗಿ ವರ್ತಿಸುತ್ತಿರುತ್ತೆ. ಆ ಮನೆಯಲ್ಲಿ ದೆವ್ವ ಇದೆಯಾ,ಅಲ್ಲಿ ಅತೃಪ್ತ ಆತ್ಮಗಳು ಅಲೆದಾಡುತ್ತಿವೆಯಾ ಅನ್ನೋ ಗೊಂದಲದಲ್ಲೇ, ಕಥೆ ನೋಡುಗರನ್ನು ಗಂಭೀರತೆಗೆ ದೂಡುತ್ತದೆ. ಹಾಗೆ ಹೋಗುತ್ತಲೇ ಕುತೂಹಲದ ಘಟ್ಟಕ್ಕೂ ತಳ್ಳುತ್ತದೆ..! ಹಾಗಾದರೆ, ಆ ಮನೆಯಲ್ಲಿ ದೆವ್ವ ಉಂಟಾ, ಆ ಸಣ್ಣ ಹೆಣ್ಣು ಮಗುವನ್ನು ಆವರಿಸಿದ್ದು ಏನು? ಪ್ರಶ್ನೆಗೆ ಉತ್ತರ ಸಿಗೋಕೆ ಕೊನೆಯ ಇಪ್ಪತ್ತು ನಿಮಿಷವರೆಗೂ ಕಾಯಬೇಕು. ಅಂಥದ್ದೊಂದು ವಿಭಿನ್ನ, ವಿಚಿತ್ರ ಕಥೆ ಹೇಳುವ ಹಾಗೂ ಅಷ್ಟೇ “ಭಯಾನಕ’ವಾಗಿ ತೋರಿಸುವ ಮೂಲಕ ಒಂದು ವಿಶಿಷ್ಟ ಪ್ರಯೋಗ ಮಾಡಿದ್ದಾರೆ ನಿರ್ದೇಶಕರು.

ಅಸಲಿಗೆ ಇದೊಂದು ಹಾರರ್‌ ಸಿನಿಮಾನಾ ಎಂಬ ಅನುಮಾನ ಮೂಡಿದರೂ, ಇಲ್ಲೊಂದು ತಿರುವಿದೆ. ಆ ತಿರುವಿನಲ್ಲಿ ನಿಂತರೆ ಮಾತ್ರ, ಇದು ಯಾವ ಜಾತಿಗೆ ಸೇರಿದ ಸಿನಿಮಾ ಅನ್ನೋದು ಗೊತ್ತಾಗುತ್ತೆ. ನೋಡುವ ಆರಂಭದಲ್ಲಿ ಸಾಮಾನ್ಯ ಸಿನಿಮಾ ಎನಿಸುತ್ತಲೇ ಸಾಗುತ್ತದೆಯಾದರೂ, ಕಿವಿಗಪ್ಪಳಿಸುವ ಹಿನ್ನೆಲೆ ಸಂಗೀತ, ಆಗಾಗ ಕಣ್‌ ಮುಂದೆ ಮೂಡುವ ಭಯಾನಕ “ಗ್ರಾಫಿಕ್ಸ್‌’ ಚಿತ್ತಾರ, ಎಲ್ಲೂ ಕದಡದಂತೆ ಮಾಡುವ ಹೊಸಬಗೆಯ ನಿರೂಪಣೆ ಶೈಲಿ “ಕಟಕ’ವನ್ನು ಮತ್ತಷ್ಟು ಕುತೂಹಲದಿಂದ ನೋಡುವಂತೆ ಮಾಡುವುದು ಸುಳ್ಳಲ್ಲ. ಕನ್ನಡದಲ್ಲಿ ಹಾರರ್‌ ಸಿನಿಮಾಗಳಿಗೆ ಕೊರತೆ ಇಲ್ಲ. ಬಂದ ಅಷ್ಟೂ ಸಿನಿಮಾಗಳು ಒಂದೇ ಫಾರ್ಮುಲ ಬಿಟ್ಟರೆ ಬೇರೆ ಪ್ರಯೋಗಕ್ಕೆ ಒಗ್ಗಿಕೊಂಡಿಲ್ಲ. ಆದರೆ, “ಕಟಕ’ ಹೊಸ ಪ್ರಯೋಗದ ಸಿನಿಮಾ ಅಂತ ಕರೆಯಲ್ಲಡ್ಡಿಯಿಲ್ಲ. ಯಾಕೆಂದರೆ, ಇಲ್ಲಿ ಒಂದು ಭಯಹುಟ್ಟಿಸುವ, ಅಲ್ಲಲ್ಲಿ ಗಂಭೀರವೆನಿಸುವ ವಿಷಯವಿದೆ. ಅಂತಹ ಪ್ರಯೋಗ ಕೂಡ ಮಾನವ ಕುಲವನ್ನು ನರಳಿಸಿ, ಬೆವರಿಳಿಸುತ್ತೆ ಎಂಬುದೇ ಹೈಲೈಟ್‌.

ಸಾಮಾನ್ಯವಾಗಿ ಹಾರರ್‌ ಚಿತ್ರಗಳಿಗೆ ಹಿನ್ನೆಲೆ ಸಂಗೀತ,ಗ್ರಾಫಿಕ್ಸ್‌ ನೋಟ, ಕತ್ತಲು ಬೆಳಕಿನಾಟ ಜೀವಾಳ. “ಕಟಕ’ ಇವೆಲ್ಲದರ ಜತೆಗೆ ಗಟ್ಟಿ ಕಥೆವುಳ್ಳ, ಅದರಲ್ಲೂ ಜಾಗೃತಿಯಾಗಬೇಕೆನಿಸುವ ವಿವರ ಕೊಡುತ್ತಲೇ ಅಲ್ಲಲ್ಲಿ ಕಣ್ಣು ಒದ್ದೆಯಾಗಿಸಿ, ಮನಸ್ಸನ್ನು ಭಾರವಾಗಿಸುತ್ತದೆ.

ಇಲ್ಲಿ ಕಥೆಯ ಎಳೆ ಸರಳ ಎನಿಸಿದರೂ, ಹೇಳುವ ವಿಧಾನದಲ್ಲಿ ಹೊಸತನವಿದೆ, ತೋರಿಸುವ ದೃಶ್ಯಗಳಲ್ಲಿ ಜಾಣತನವಿದೆ. ಆ ಕಾರಣಕ್ಕೆ “ಕಟಕ’ “ಭಯಾನಕ’ ಕಷ್ಟಗಳ ನಡುವೆ ಕೊಂಚ ಇಷ್ಟವಾಗುತ್ತೆ. ಇಲ್ಲಿ ಅರಚಾಟ, ಕಿರುಚಾಟ, ಆತ್ಮಗಳ ನರಳಾಟ, ಮುಗ್ಧ ಮನಸ್ಸುಗಳ ಆಕ್ರಂದನ ಏನೇ ಇದ್ದರೂ, ಒಂದು ಪ್ರಯೋಗವಾಗಿ ಒಪ್ಪಿಕೊಳ್ಳಬೇಕೆನಿಸುತ್ತೆ.

Advertisement

ಇಲ್ಲಿರುವ ತಾಣ, ಆತ್ಮಗಳೇ ವಾಸವಿರುವಂತೆ ಕಾಣುವ ಕಾಡು ನಡುವಿನ ಮನೆ, ಹರಿದಾಡುವ
ಕುಂದಾಪುರ ಭಾಷೆ, ಆಗಾಗ ಬಿಂಬಿತವಾಗುವ ಅಲ್ಲಿನ ಆಚರಣೆ … ಇತ್ಯಾದಿ ಅಂಶಗಳು ಕಥೆಗೆ ಪೂರಕವಾಗಿವೆ.

ಎಲ್ಲದ್ದಕ್ಕಿಂತ ಹೆಚ್ಚಾಗಿ ಬರುವ ಪ್ರತಿಯೊಂದು ಪಾತ್ರಗಳಿಗೂ ಆದ್ಯತೆ ಇರುವುದರಿಂದಲೇ ಒಂದು ಪರಿಪೂರ್ಣ ಸಿನಿಮಾ ಎನಿಸಿಕೊಳ್ಳಲು ಸಾಧ್ಯವಾಗಿದೆ. ಹಾಗಂತ, ಪುಟ್ಟ ಮಕ್ಕಳು ಹಾಗೂ ಕುಟುಂಬ ಸಮೇತ ನೋಡುವ ಸಿನಿಮಾ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ.ಆದರೆ, ನಂಬಿಕೆ ಮತ್ತು ಮೂಢನಂಬಿಕೆ ವಿಚಾರಧಾರೆಗಳನ್ನು ಚಿಂತನೆಗೆ ಹಚ್ಚುತ್ತಲೇ “ಕಟಕ’ ನೋಡಿಸಿಕೊಂಡು ಹೋಗುತ್ತದೆ. ಹಾಗಾದರೆ, ಇದು ಓಡುವ ಸಿನಿಮಾನ, ಕಾಡುವ ಸಿನಿಮಾನ ಅಥವಾ ಭಯಪಡಿಸುವ ಸಿನಿಮಾನ ಎಂಬ ಪ್ರಶ್ನೆ ಇದ್ದರೆ, “ಕಟಕ’ ರಾಶಿಯ ಸಾಧಕ-ಬಾಧಕ ಬಗ್ಗೆ ತಿಳಕೊಳ್ಳಬಹುದು.

ಕುಮಾರ್‌ (ಅಶೋಕ್‌ರಾಜ್‌) ಸಿಟಿ ಲೈಫ‌ು ಬೋರ್‌ ಎನಿಸಿ, ತನ್ನೂರಲ್ಲೇ ಮೇಷ್ಟ್ರು ಕೆಲಸ ಮಾಡಬೇಕು ಅಂತ ಕುಂದಾಪುರ ಸಮೀಪದ ಹಳ್ಳಿಗೆ ವರ್ಗಾವಣೆ ಮಾಡಿಸಿಕೊಂಡು ತನ್ನ ಪತ್ನಿ ವಂದನಾ (ಸ್ಪಂದನಾ) ಹಾಗು ಪುತ್ರಿ ಕಾವ್ಯಾ (ಶ್ಲಾಘ) ಜತೆ ಬರುತ್ತಾನೆ. ಆ ಊರಲ್ಲಿ ಅವನಿಗೆ ವಿಚಿತ್ರ ಅನುಭವಗಳು ಆಗೋಕೆ ಶುರುವಾಗುತ್ತವೆ. ಅಷ್ಟೇ ಅಲ್ಲ, ತನ್ನ ಮುಗ್ಧ ಮಗಳಲ್ಲೂ ಸಾಕಷ್ಟು ಬದಲಾವಣೆ ಕಾಣುತ್ತಾನೆ. ಕೊನೆಗೆ ಮಗಳ ಮೇಲೆ ಯಾರೋ ಒಬ್ಬರು “ವಾಮಚಾರ’ದ ಪ್ರಯೋಗ ಮಾಡಿರುತ್ತಾರೆ. ಅಲ್ಲಿಂದ ಮಗಳನ್ನು ಒಂದಷ್ಟು ಅತೃಪ್ತ ಆತ್ಮಗಳು ಆವರಿಸಿಕೊಳ್ಳುತ್ತವೆ.

ಎಷ್ಟೋ ಮಂತ್ರವಾದಿಗಳು ಬಂದರೂ ಪವರ್‌ಫ‌ುಲ್‌ ಆತ್ಮಗಳು ತೊಲಗುವುದಿಲ್ಲ. ಕಾರಣ, ಯಾರು ಪ್ರಯೋಗ ಮಾಡಿದ್ದರೋ, ಅವರಿಂದಲೇ ಅದು ನಿಲ್ಲಿಸೋಕೆ ಸಾಧ್ಯ. ಆದರೆ, ಆ ಪ್ರಯೋಗ ಮಾಡಿದ ವ್ಯಕ್ತಿ ಕೇರಳ ಮೂಲದವನು. ಅವನು ಆಗಲೇ ಇಹಲೋಕ ತ್ಯಜಿಸಿರುತ್ತಾನೆ. ಹಾಗಾದರೆ, ಅತೃಪ್ತ ಆತ್ಮಗಳಿಂದ ಮಗಳಿಗೆ ವಿಮುಕ್ತಿ ಸಿಗುತ್ತಾ? ಅದಕ್ಕೆ ಏನೆಲ್ಲಾ ಪ್ರಯೋಗ ಮಾಡ್ತಾನೆ ಎಂಬುದೇ ಕಥೆ.

ಇಲ್ಲಿ ಅಶೋಕ್‌ರಾಜ್‌ ಮಗಳನ್ನು ಪ್ರೀತಿಸುವ ತಂದೆಯಾಗಿ ಇಷ್ಟವಾಗುತ್ತಾರೆ. ಸ್ಪಂದನಾ ತಾಯಿ ಮಮತೆಯ ಪ್ರೀತಿ ಉಣಬಡಿಸಿದ್ದಾರೆ. ಬೇಬಿ ಶ್ಲಾಘ ಪಾತ್ರವನ್ನು ಜೀವಿಸಿದ್ದಾಳೆ. ಉಳಿದಂತೆ ಮಾಧವ ಕಾರ್ಕಳ, “ಉಗ್ರಂ’ ಮಂಜು ಹಾಗೂ ಬರುವ ಹೊಸ ಪಾತ್ರಗಳೆಲ್ಲವೂ ಗಮನಸೆಳೆಯುತ್ತವೆ. ಚಿತ್ರಕ್ಕೆ ಹಿನ್ನೆಲೆ ಸಂಗೀತವೇ ಪ್ರಧಾನವಾಗಿದೆ. ಛಾಯಾಗ್ರಹಕ ಸಚಿನ್‌ ಬಸ್ರೂರ್‌ ಕ್ಯಾಮೆರಾ ಪರವಾಗಿಲ್ಲ. ಹೆಲಿಕ್ಯಾಮ್‌ (ಡ್ರೋನ್‌ ಕ್ಯಾಮೆರಾ) ಮೇಲಿನ ಪ್ರೀತಿ ಎದ್ದು ಕಾಣುತ್ತೆ.

ಕೊನೆ ಮಾತು: ಸಿನಿಮಾ ಮುಗಿದ ಬಳಿಕ ಕೇಳಿಬರುವ ಕೊನೆಯ ಮಾತೆಂದರೆ, ಬದುಕು ಸುಂದರವಾಗಿದೆ. ನೀವೂ ಬದುಕಿ, ಬೇರೆಯವರನ್ನೂ ಬದುಕಲು ಬಿಡಿ!

Advertisement

Udayavani is now on Telegram. Click here to join our channel and stay updated with the latest news.

Next