Advertisement

KUDA ಆಯುಕ್ತರ ಸೇವೆ ಅಮಾನತ್ತಿಗೆ KAT ತಡೆಯಾಜ್ಞೆ: ಸರ್ಕಾರಕ್ಕೆ ಮುಖಭಂಗ

10:27 PM Oct 13, 2023 | Team Udayavani |

ಕಲಬುರಗಿ: ಇಲ್ಲಿನ‌ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ) ಆಯುಕ್ತ ದಯಾನಂದ ಪಾಟೀಲ್ ಅವರ ಅಮಾನತ್ತಿಗೆ ಕೆಎಟಿ ತಡೆಯಾಜ್ಞೆ ನೀಡಿದೆ.‌

Advertisement

ಗುರುವಾರವಷ್ಟೇ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ದಯಾನಂದ ಅವರನ್ನು ವಿನಾಕಾರಣ ಅಮಾನತ್ತುಗೊಳಿಸಿತ್ತು. ಈ ಅಮಾನತ್ತಿನ ವಿರುದ್ದ ನ್ಯಾಯ ಕೋರಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಗೆ ಮನವಿ ಸಲ್ಲಿಸಿದ್ದರು.‌ ಮನವಿ ಪುರಸ್ಕರಿಸಿದ ಕೆಎಟಿ ಪೀಠ, ಸರ್ಕಾರ ಅಮಾನತ್ತುಗೊಳಿಸಿದ್ದು ಸರಿಯಲ್ಲ. ಮಾನ್ಯ ಉಚ್ಚ ನ್ಯಾಯಾಲಯ ಆದೇಶದ ಮೇರೆಗೆ ಆಯುಕ್ತರು ರೈತರಿಗೆ ಭೂ ಪರಿಹಾರ ನೀಡಿದ್ದಾರೆ.‌ಇದರಲ್ಲಿ ತಪ್ಪು ಏಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿ ಅಮಾನತ್ತಿಗೆ ತಡೆಯಾಜ್ಞೆ ನೀಡಿದೆ.

ದಯಾನಂದ ಪಾಟೀಲ್ ಸೇವಾ ನಿವೃತ್ತಿಗೆ ಕೇವಲ ಏಳು ತಿಂಗಳು ಉಳಿದಿದ್ದರೂ ಎರಡು ತಿಂಗಳ ಹಿಂದೆ ಸರ್ಕಾರ ವರ್ಗಾವಣೆಗೊಳಿಸಿತ್ತು. ಆದರೆ ವರ್ಗಾವಣೆ ವಿರುದ್ದವೂ ನ್ಯಾಯಾಲಯ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು.‌ ಆದರೆ ತಡೆಯಾಜ್ಞೆ ತಂದಿರುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಸರ್ಕಾರ ಈ ಹಿಂದಿನ ದೂರಿನ ಅಧಾರದ ಮೇಲೆ ಗುರುವಾರವಷ್ಟೇ ಅಮಾನತ್ತುಗೊಳಿಸಿತ್ತು.‌ ಆದರೆ ತಾವು ಯಾವುದೇ ತಪ್ಪು ಮಾಡಿಲ್ಲ. ಅಮಾನತ್ತು ತೆರವುಗೊಳಿಸುವಂತೆ ದಯಾನಂದ ಪಾಟೀಲ್ ಕೆಎಟಿಗೆ ದೂರಿನ ಅರ್ಜಿ ಸಲ್ಲಿಸಿದ್ದರು.‌ ಎಲ್ಲ ಅಂಶಗಳನ್ನು ಆಲಿಸಿದ‌ ಮಾನ್ಯ ಕೆಎಟಿ ನ್ಯಾಯಾಲಯ ಪೀಠವು ಸರ್ಕಾರದ ನಿರ್ಧಾರ ವಿರುದ್ದ ತೀರ್ಪು ನೀಡಿ ಅಮಾನತ್ತಿಗೆ ತಡೆಯಾಜ್ಞೆ ನೀಡಿತು.‌

ಅಮಾನತು ತಡೆಯಾಜ್ಞೆ ಹಿನ್ನೆಲೆಯಲ್ಲಿ ದಯಾನಂದ ಪಾಟೀಲ್ ಶುಕ್ರವಾರ ಸಂಜೆ ಕುಡಾ ಆಯುಕ್ತರಾಗಿ ಕಾರ್ಯಭಾರ ವಹಿಸಿಕೊಂಡು ಸೇವೆ ಆರಂಭಿಸಿದರು.

ಪ್ರಸ್ತುತ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳ ಮೂಲೆಗುಂಪು ಅಂದರೆ ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ ಎಂಬ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ನಡುವೆ ಕುಡಾ ಆಯುಕ್ತರ ವರ್ಗಾವಣೆಗೆ ಸತತ ಒತ್ತಡ ಹಾಕಿದ್ದಲ್ಲದೇ ಕೊನೆಗೆ ಸೇವೆಯಿಂದಲೇ ಅಮಾನತ್ತುಗೊಳಿಸಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಸರ್ಕಾರದ ನಡೆಗೆ ವ್ಯಾಪಕ ಅಸಮಾಧಾನಕ್ಕೂ ಸಹ ಕಾರಣವಾಗಿತ್ತು.

Advertisement

ವ್ಯವಸ್ಥಿತವಾಗಿ ವೀರಶೈವ ಲಿಂಗಾಯತ ಅಧಿಕಾರಿಗಳನ್ನು ವರ್ಗಾವಣೆ ಮೂಲಕ ಅಂದರೆ ಮಹತ್ವ ಇಲ್ಲದ ಜಾಗಗಳಿಗೆ ವರ್ಗಾಯಿಸುವ ಮೂಲಕ ಇಲ್ಲವೇ ಅಮಾನತ್ತು ಹತ್ತಿಕ್ಕಲಾಗುತ್ತಿದೆ ಎಂದು ದಾಖಲೆಗಳ ಸಮೇತ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಹೋರಾಟಕ್ಕಿಳಿಯಲು ಮುಂದಾಗಿದ್ದಾರೆ.

ದಯಾನಂದ ಪಾಟೀಲ್ ಅವರು ಕೆಎಎಸ್ ಅಧಿಕಾರಿಗಳಲ್ಲಿ ದಕ್ಷರು ಎಂದು ಹೆಸರು ಪಡೆದಿದ್ದರೂ ಪ್ರಮುಖವಾಗಿ ಸೇವೆಯುದ್ದಕ್ಕೂ ಉತ್ತಮ ಸೇವೆ ಸಲ್ಲಿಸಿರುವಾಗ ಅದಲ್ಲದೇ ನಿವೃತ್ತಿ ಅಂಚಿನ ಅವಧಿಯಲ್ಲಿದ್ದರೂ ಸಮಾಜ ಕಡೆಗಣನೆಗೆ ನಿಟ್ಟಿನಲ್ಲಿ ಮುಂದಾಗಿರುವ ಸರ್ಕಾರದ ನಡೆ ಖಂಡನೀಯವಾಗಿದೆ. ಇನ್ಮುಂದೆಯಾದರೂ ಇಂತಹ ಉದ್ದೇಶ ಪೂರ್ವಕ ಹಾಗೂ ಸಮುದಾಯ ನಿರ್ಲಕ್ಷ್ಯತನ ಕಾರ್ಯ ನಿಲ್ಲಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಯುವ ಘಟಕದ ಅಧ್ಯಕ್ಷ ಡಾ.ಶಂಭುಲಿಂಗ ಬಳಬಟ್ಟಿ ಎಚ್ಚರಿಕೆ ನೀಡಿದ್ದಾರೆ.

ಪಾಲಿಕೆಯಲ್ಲಿ ಲಿಂಗಾಯತ ಅಧಿಕಾರಿ ಮೇಲೆ ಹಲ್ಲೆ, ಬಸವಣ್ಣನವರ ಭಾವಚಿತ್ರಕ್ಕೆ ಅವಮಾನ ಸೇರಿದಂತೆ ಇತರ ನಿಟ್ಟಿನ ಘಟನೆಗಳು ಸಮಾಜ ಅಸ್ಥಿರಗೊಳಿಸುವ ಕುತಂತ್ರ ಅಡಗಿರುವುದು ಕಂಡು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next