ಶನಿವಾರಸಂತೆ: ಪಶ್ಚಿಮಘಟ್ಟಗಳ ಸಂರಕ್ಷಣೆ ಕುರಿತಾಗಿ ಕಸ್ತೂರಿರಂಗನ್ ವರದಿಯಲ್ಲಿ ಉಲ್ಲೇಖವಾಗಿರುವ ಸಾಧಕ-ಬಾಧಕಗಳ ಕುರಿತು ರಾಜ್ಯ ಸರಕಾರ ಕಸ್ತೂರಿರಂಗನ್ ವರದಿಗೆ ಒಳಪಟ್ಟಿರುವ ಗ್ರಾ.ಪಂ.ಗಳಲ್ಲಿ ವರದಿಯ ಪರ ಮತ್ತು ವಿರೋಧಗಳ ಬಗ್ಗೆ ಸಭೆ ನಡೆಸುವಂತೆ ಪ್ರತಿಯೊಂದು ಗ್ರಾ.ಪಂ.ಗಳಿಗೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಸಮೀಪದ ನಿಡ್ತ ಗ್ರಾ.ಪಂ.ನಲ್ಲಿ ಗ್ರಾ.ಪಂ. ಅಧ್ಯಕ್ಷ ಕೆ.ಎಂ.ಮುಸ್ತಾಫ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆಯನ್ನು ನಡೆಸಲಾಯಿತು.
ಮಾಲಂಬಿ ಮಳೆಮಲ್ಲೇಶ್ವರ ಬೆಟ್ಟ ಸಾಲು ಪಶ್ಚಿಮಘಟ್ಟ ವ್ಯಾಪ್ತಿಗೆ ಒಳಪಡುತ್ತದೆ, ಕಸ್ತೂರಿರಂಗನ್ ವರದಿಗೆ ಮಾಲಂಬಿ ಬೆಟ್ಟಸಾಲಿನಲ್ಲಿರುವ ತಪ್ಪಲಿನ ಗ್ರಾಮಗಳನ್ನು ಈಗಾಗಲೆ ಒಳಪಡಿಸಲಾಗಿದೆ, ಪಶ್ಚಿಮಘಟ್ಟ ಬೆಟ್ಟಸಾಲಿನಿಂದ 10 ಕಿ.ಮೀ.ದೂರದಲ್ಲಿರುವ ಗ್ರಾಮಗಳು ಕಸ್ತೂರಿರಂಗನ್ ವರದಿ ವ್ಯಾಪ್ತಿಗೆ ಒಳಪಡುವ ಹಿನ್ನೆಲೆಯಲ್ಲಿ ನಿಡ್ತ ಗ್ರಾ.ಪಂ.ಯೂ ಒಳಪಡುತ್ತದೆ. ಈ ಕುರಿತು ವರದಿಯಲ್ಲಿರುವ ಸಾಧಕ-ಬಾಧಕಗಳ ಬಗ್ಗೆ ಗ್ರಾಮಸ್ಥರ ಸಭೆಯನ್ನು ಕರೆಯಲಾಗಿತ್ತು.
ಸಭೆಯಲ್ಲಿ ಗ್ರಾ.ಪಂ. ಪಿ.ಡಿ.ಒ ಪ್ರತಿಮಾ ಅವರು ಕಸ್ತೂರಿರಂಗನ್ ವರದಿಯಲ್ಲಿರುವ ಉಲ್ಲೇಖ, ಇದರಿಂದ ಜನರಿಗಾಗುವ ಲಾಭ-ನಷ್ಟಗಳ ಬಗ್ಗೆ ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಈ ಬಗ್ಗೆ ಚರ್ಚಿಸಿದ ಗ್ರಾಮಸ್ಥರು ಕಸ್ತೂರಿರಂಗನ್ ವರದಿಯಲ್ಲಿ ಬಹಳಷ್ಟು ವಿಚಾರದಲ್ಲಿ ಸಾರ್ವಜನಿಕರಿಗೆ, ರೈತರಿಗೆ, ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತದೆ, ಈ ನಿಟ್ಟಿನಲ್ಲಿ ಕಸ್ತೂರಿರಂಗನ್ ವರದಿಯಲ್ಲಿ ಬಾಧಕವಾಗುವ ಸಾಧ್ಯತೆ ಹೆಚ್ಚಿರುವುದರಿಂದ ವರದಿಯನ್ನು ವಿರೋಧಿಸಬೇಕೆಂಬ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಸಭೆಯಲ್ಲಿ ವರದಿಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಯಿತು ಹಾಗೂ ಸಭೆಯಲ್ಲಿ ನಿರ್ಣಯವಾದ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸುವಂತೆಯೂ ನಿರ್ಣಯಿಸಲಾಯಿತು.
ಈ ಸಂದರ್ಭದಲ್ಲಿ ಸಭೆಯಲ್ಲಿ ಹಾಜರಿದ್ದ ಜಿ.ಪಂ. ಸದಸ್ಯೆ ಸರೋಜಮ್ಮ ಮಾತನಾಡಿ ಈ ವರದಿಯನ್ನು ವಿರೋಧಿಸುವ ಮೂಲ ಕೊಡಗು ಜಿಲ್ಲೆ ಪೂರ್ತಿಯಾಗಿ ಕಸ್ತೂರಿರಂಗನ್ ವರದಿಯನ್ನು ವಿರೋಧಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾ.ಪಂ. ಸದಸ್ಯೆ ಲೀಲಾವತಿ ಮಹೇಶ್, ನೋಡೆಲ್ ಅಧಿಕಾರಿ ಸತೀಶ್, ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.